Advertisement
ಇತ್ತೀಚೆಗಷ್ಟೇ ಕೆಸಿಆರ್ ಅವರು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಜತೆಗೂಡಿ ಬಿಜೆಪಿಯೇತರ ಹಾಗೂ ಕಾಂಗ್ರೆಸೇತರ ರಂಗವೊಂದರ ರಚನೆಗೆ ಅತ್ಯುತ್ಸಾಹ ತೋರಿದ್ದರು. ವಿವಿಧ ಪಕ್ಷಗಳನ್ನು ಒಗ್ಗೂಡಿಸುವ ಯತ್ನವನ್ನೂ ಮಾಡಿದ್ದರು. ಆದರೆ, ಇದೀಗ ಫೆಡರಲ್ ಫ್ರಂಟ್ ರಚಿಸುವ ಅವರ ಆಸಕ್ತಿ ಕುಗ್ಗಿದಂತೆ ಕಾಣುತ್ತಿದ್ದು, ಲೋಕಸಭೆ ಚುನಾವಣೆ ವೇಳೆ ಬಿಜೆಪಿಯೊಂದಿಗೆ ಸೇರುವ ಸಾಧ್ಯತೆಯೂ ಗೋಚರಿಸತೊಡಗಿದೆ. ಬಿಜೆಪಿ ಜತೆಗಿನ ಮೈತ್ರಿಯನ್ನು ಟಿಆರ್‌ಎಸ್ ನಾಯಕರು ತಳ್ಳಿಹಾಕುತ್ತಿದ್ದರೂ, ಚುನಾವಣೆ ಸಮೀಪಿಸುವಾಗ ಲೆಕ್ಕಾಚಾರ ಹೇಗೆ ಬದಲಾಗುತ್ತದೆ ಎಂದು ಕಾದು ನೋಡಬೇಕು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ಎನ್‌ಡಿಎಗೆ ಬಿಹಾರದಲ್ಲಿ ಸೀಟು ಹಂಚಿಕೆಯದ್ದೇ ದೊಡ್ಡ ತಲೆನೋವಾಗಿರುವ ನಡುವೆಯೇ, ಮಹಾಮೈತ್ರಿಯೊಳಗಿನ ಪಕ್ಷಗಳ ನಡುವೆಯೂ ಸೀಟು ಹಂಚಿಕೆ ವಿಚಾರ ತಲೆಎತ್ತತೊಡಗಿದೆ. ಆರ್‌ಜೆಡಿ, ಕಾಂಗ್ರೆಸ್, ಎನ್‌ಸಿಪಿ, ಎಚ್‌ಎಎಂ(ಹಿಂದುಸ್ತಾನಿ ಅವಾಮ್ ಮೋರ್ಚಾ), ಎಡಪಕ್ಷಗಳು ಒಂದಾಗಿ ಲೋಕಸಭೆ ಚುನಾವಣೆಯಲ್ಲಿ ಮಹಾ ಘಟಬಂಧನ್ ಮೂಲಕವೇ ಬಿಜೆಪಿಯನ್ನು ಎದುರಿಸಲು ತಯಾರಿ ನಡೆಸುತ್ತಿವೆ. ಈ ಎಲ್ಲ ಪಕ್ಷಗಳ ಹಿರಿಯ ನಾಯಕರು ಈಗಾಗಲೇ ರಹಸ್ಯ ಸಭೆಗಳನ್ನು ಆಯೋಜಿಸಿ, ಸೀಟು ಹಂಚಿಕೆ ಕುರಿತು ಚರ್ಚೆಯನ್ನೂ ನಡೆಸುತ್ತಿದ್ದಾರೆ. ಮೂಲಗಳು ಹೇಳುವಂತೆ, ಒಟ್ಟು 40 ಕ್ಷೇತ್ರಗಳ ಪೈಕಿ ಅರ್ಧದಷ್ಟನ್ನು ಇಟ್ಟುಕೊಳ್ಳಲು ಆರ್‌ಜೆಡಿ ನಿರ್ಧರಿಸಿದೆ. ಕಾಂಗ್ರೆಸ್‌ಗೆ 10, ಎಚ್‌ಎಎಂ ಮತ್ತು ಆರ್‌ಎಲ್‌ಎಸ್‌ಪಿ ತಲಾ 4, ಎನ್‌ಸಿಪಿ ಮತ್ತು ಎಡಪಕ್ಷಕ್ಕೆ ತಲಾ ಒಂದು ಸೀಟುಗಳನ್ನು ನೀಡುವುದು ಆರ್‌ಜೆಡಿ ಲೆಕ್ಕಾಚಾರ. ಇದರ ನಡುವೆಯೇ, ಕಾಂಗ್ರೆಸ್ ಇದೀಗ ಹೆಚ್ಚುವರಿ ಸೀಟುಗಳಿಗಾಗಿ ಬೇಡಿಕೆ ಇಟ್ಟಿದೆ. 12ಕ್ಕೂ ಹೆಚ್ಚು ಸ್ಥಾನಗಳನ್ನು ನಮಗೆ ಕೊಡಬೇಕು ಎಂದು ಕೇಳುತ್ತಿದೆ ಎನ್ನಲಾಗಿದೆ. ಆಪ್ತನ ವಜಾ ಮಾಡಿದ ಮಾಯಾವತಿ
ಪ್ರಧಾನಿ ಮೋದಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಅವಹೇಳನ ಕಾರಿ ಹೇಳಿಕೆ ನೀಡಿದ ತಮ್ಮ ಆಪ್ತನನ್ನೇ ಬಿಎಸ್‌ಪಿ ನಾಯಕಿ ಮಾಯಾವತಿ ವಜಾ ಮಾಡಿದ್ದಾರೆ. ಇತ್ತೀಚೆಗಷ್ಟೇ ರಾಹುಲ್ ಅವರ ಇಟಲಿ ಮೂಲದ ಬಗ್ಗೆ ಪ್ರಶ್ನಿಸಿದ್ದ ಜೈ ಪ್ರಕಾಶ್ ಸಿಂಗ್‌ರನ್ನು ಪಕ್ಷದ ಪ್ರಮುಖ ಹುದ್ದೆಯಿಂದ ಅಮಾನತು ಮಾಡ ಲಾಗಿತ್ತು. ತದನಂತರ ಅವರು ಪ್ರಧಾನಿ ಮೋದಿ ಯನ್ನು ಗಬ್ಬರ್ ಸಿಂಗ್ ಎಂದು ಕರೆದಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದಲೇ ವಜಾ ಮಾಡಲಾಗಿದೆ. ಲೋಕಸಭೆ ಚುನಾವಣೆಗೆ ಮಹಾಮೈತ್ರಿ ಮಾಡಿಕೊಳ್ಳಲು ಪಕ್ಷ ಮುಂದಾಗಿರುವ ವೇಳೆ, ಯಾರೂ ಯಾರ ಬಗ್ಗೆಯೂ ಆಕ್ಷೇಪಾರ್ಹ ಹೇಳಿಕೆ ನೀಡುವಂತಿಲ್ಲ. ನೀಡಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಈಗಾಗಲೇ ಮಾಯಾವತಿ ಆದೇಶ ಹೊರಡಿಸಿದ್ದಾರೆ. ಇದರ ಹೊರತಾಗಿಯೂ ಸಿಂಗ್ ಈ ಹೇಳಿಕೆ ನೀಡಿದ್ದಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಎಸ್‌ಪಿ ಮೂಲಗಳು
ತಿಳಿಸಿವೆ.