ಬೆಂಗಳೂರು: ಸಾರ್ವತ್ರಿಕ ಲೋಕಸಭಾ ಚುನಾವಣೆಯ ಏಳು ಸುತ್ತಿನ ಮತದಾನ ಮುಗಿಯುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆ ಬಹಿರಂಗವಾಗಿದ್ದು, ದೇಶದಲ್ಲಿ ಮತ್ತೆ ಬಿಜೆಪಿ ಮುನ್ನಡೆ ಕಾಯ್ದುಕೊಳ್ಳುವಂತೆ ರಾಜ್ಯದಲ್ಲಿಯೂ ಬಿಜೆಪಿ ಅತಿ ಹೆಚ್ಚು ಸ್ಥಾನ ಗೆಲ್ಲುವುದಾಗಿ ಭವಿಷ್ಯ ನುಡಿದಿವೆ.
ನಾನಾ ಸಮೀಕ್ಷೆಗಳು ರಾಜ್ಯದಲ್ಲಿ ಬಿಜೆಪಿ ಕನಿಷ್ಠ 15 ರಿಂದ ಗರಿಷ್ಠ 23 ಸ್ಥಾನ ಗೆಲ್ಲುವುದಾಗಿ ಹೇಳಿದ್ದು, ಬಹುತೇಕ ಸಮೀಕ್ಷೆಗಳು ಮೈತ್ರಿ ಪಕ್ಷಗಳ ಗೆಲುವಿನ ಒಟ್ಟು ಸ್ಥಾನ ಒಂದಂಕಿ ಇಲ್ಲವೇ 10- 13 ಸ್ಥಾನಕ್ಕೆ ಸೀಮಿತಗೊಳ್ಳುವ ಲೆಕ್ಕಾಚಾರ ನೀಡಿವೆ.
ಎಲ್ಲ ಸಮೀಕ್ಷೆಯಲ್ಲೂ ಬಿಜೆಪಿ ಮುಂದು: ಎಲ್ಲ ಚುನಾವಣೋತ್ತರ ಸಮೀಕ್ಷೆಗಳಲ್ಲೂ ರಾಜ್ಯದಲ್ಲಿ ಬಿಜೆಪಿ ಸ್ಥಾನ ಗಳಿಕೆಯಲ್ಲಿ ಮುನ್ನಡೆ ಕಾಯ್ದುಕೊಂಡಿರುವುದು ಕಾಣುತ್ತಿದೆ. ಇಂಡಿಯಾ ಟುಡೆ, ಬಿಜೆಪಿ ಅತಿ ಹೆಚ್ಚು ಅಂದರೆ, 21ರಿಂದ 25 ಸ್ಥಾನ ಗೆಲ್ಲುವುದಾಗಿ ಸಮೀಕ್ಷೆಯಲ್ಲಿ ಭವಿಷ್ಯ ನುಡಿದಿದೆ. ಚಾಣಕ್ಯ ಸಂಸ್ಥೆ 23, ಸಿಎನ್‌ಎನ್- ಐಪಿಎಸ್‌ಒಎಸ್ 23, ಟೈಮ್ಸ್ ನೌ 21, ಎನ್‌ಡಿಟಿವಿ 20, ಸಿ- ವೋಟರ್ 18 ಹಾಗೂ ಇಂಡಿಯಾ ಟಿವಿ, ನ್ಯೂಸ್ ಎಕ್ಸ್ ಸಮೀಕ್ಷೆಗಳು ಬಿಜೆಪಿ ಕನಿಷ್ಠ 17 ಸ್ಥಾನ ಗೆಲ್ಲುವುದಾಗಿ ಹೇಳಿವೆ. ಎಬಿಪಿ ನ್ಯೂಸ್ ಸಮೀಕ್ಷೆ ಮಾತ್ರ ಬಿಜೆಪಿ 15 ಸ್ಥಾನ ಗೆಲ್ಲುವುದಾಗಿ ಹೇಳಿದೆ.
ಎಲ್ಲ ಸಮೀಕ್ಷೆಗಳೂ ಬಿಜೆಪಿ ಕನಿಷ್ಠ 15 ಹಾಗೂ ಗರಿಷ್ಠ 23- 25 ಸ್ಥಾನ ಗೆಲ್ಲುವುದಾಗಿ ಭವಿಷ್ಯ ನುಡಿದಿವೆ. 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 17 ಸ್ಥಾನ ಗೆದ್ದಿತ್ತು. ನಂತರ ನಡೆದ ಉಪಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರವನ್ನು ಕಳೆದುಕೊಂಡಿತ್ತು. ಕೇಂದ್ರ ಸಚಿವರಾಗಿದ್ದ ಅನಂತ ಕುಮಾರ್ ವಿಧಿವಶರಾದ ಹಿನ್ನೆಲೆಯಲ್ಲಿ ಆ ಕ್ಷೇತ್ರದ ಸಂಸದರ ಸ್ಥಾನ ತೆರವಾಗಿತ್ತು. ಹಾಗೆಯೇ ಉಪಚುನಾವಣೆ ನಡೆದ ಶಿವಮೊಗ್ಗವನ್ನು ಬಿಜೆಪಿ ಉಳಿಸಿಕೊಂಡಿದ್ದರೆ, ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಕೂಡ ಉಳಿಸಿಕೊಂಡಿತ್ತು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು 22 ಸ್ಥಾನ ಗೆಲ್ಲುವುದಾಗಿ ಚುನಾವಣೆ ಸಂದರ್ಭದಲ್ಲಿ ಹೇಳಿದ್ದರು. ಸದ್ಯ ಬಹಿರಂಗವಾಗಿರುವ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಟೌಮ್ಸ್ ನೌ, ಎನ್‌ಡಿಟಿವಿ, ಇಂಡಿಯಾ ಟುಡೆ, ಚಾಣಕ್ಯ ಸಂಸ್ಥೆಗಳು 20ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದಾಗಿ ಹೇಳಿವೆ. ರಾಜ್ಯ ಬಿಜೆಪಿ ನಾಯಕರ ಲೆಕ್ಕಾಚಾರದಂತೆ ಬಿಜೆಪಿ ಗೆಲ್ಲುವ ಸ್ಥಾನಕ್ಕೆ ಸಂಬಂಧಪಟ್ಟಂತೆ ಈ ನಾಲ್ಕು ಸಂಸ್ಥೆಗಳ ಸಮೀಕ್ಷೆಗಳೂ ಸಮೀಪದಲ್ಲಿವೆ.
ನಿರೀಕ್ಷೆ ಹುಟ್ಟಿಸದ ಮೈತ್ರಿ ಸಾಧನೆ: ಬಿಜೆಪಿ ಹೆಚ್ಚು ಲೋಕಸಭಾ ಕ್ಷೇತ್ರವನ್ನು ಗೆಲ್ಲದಂತೆ ತಡೆಯುವುದರ ಜತೆಗೆ ಒಂದಂಕಿಗೆ ಸೀಮಿತಗೊಳಿಸಬೇಕೆಂಬ ಉದ್ದೇಶದಿಂದ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡ ಕಾಂಗ್ರೆಸ್-ಜೆಡಿಎಸ್‌ನ ಸಾಧನೆ ನಿರೀಕ್ಷಿತ ಮಟ್ಟ ತಲುಪಿಲ್ಲ ಎಂದು ಸಮೀಕ್ಷೆಗಳು ಹೇಳಿವೆ. ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ 10 ಹಾಗೂ ಜೆಡಿಎಸ್ 2 ಹೊಂದಿವೆ. ಆದರೆ, ಬಹುತೇಕ ಸಮೀಕ್ಷೆಗಳು ಮೈತ್ರಿಗೆ 5ರಿಂದ ಗರಿಷ್ಠ 13 ಸ್ಥಾನಗಳಷ್ಟೇ ಸಿಗಲಿವೆ ಎಂದು ಭವಿಷ್ಯ ನುಡಿದಿವೆ.
ಹಾಗಾಗಿ, ಈವರೆಗೆ ಬಹಿರಂಗವಾಗಿರುವ ಸಮೀಕ್ಷಾ ವರದಿಗಳ ಪ್ರಕಾರ ಮೈತ್ರಿ ಪಕ್ಷಗಳು ಬಿಜೆಪಿಗಿಂತ ಹೆಚ್ಚು ಸ್ಥಾನ ಪಡೆಯುವ ಸಾಧ್ಯತೆ ಕಾಣುತ್ತಿಲ್ಲ. ಸಿ-ವೋಟರ್ ಹಾಗೂ ಇಂಡಿಯ ಟುಡೆಗಳು ಸಮೀಕ್ಷೆಯಲ್ಲಿ ಪಕ್ಷೇತರರೊಬ್ಬರು ಜಯ ಗಳಿಸಲಿದ್ದಾರೆ ಎಂಬುದಾಗಿ ಹೇಳಿವೆ. ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರೇ ಜಯ ಗಳಿಸಬಹುದು ಎಂಬ ಮಾತುಗಳು ಕೇಳಿ ಬಂದಿವೆ. ಬಹುತೇಕ ಸಮೀಕ್ಷೆಗಳು ಪಕ್ಷೇತರರ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸದಿರುವುದು ಕಂಡು ಬಂದಿದೆ.
ಒಟ್ಟಾರೆ ರಾಜ್ಯದಲ್ಲಿ ಬಿಜೆಪಿ ಈ ಬಾರಿಯೂ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಬಹುದು ಎಂಬುದಾಗಿ ಸಮೀಕ್ಷಾ ವರದಿಗಳು ಅಂದಾಜಿಸಿವೆ. ಜತೆಗೆ, ಮೈತ್ರಿ ಪಕ್ಷಗಳು ತಮ್ಮ ಲೆಕ್ಕಾಚಾರದಷ್ಟು ಸ್ಥಾನ ಗೆಲ್ಲುವ ಸಾಧ್ಯತೆಯೂ ಕ್ಷೀಣಿಸಿದೆ. ಮೇ 23ಕ್ಕೆ ಫಲಿತಾಂಶ ಪ್ರಕಟವಾಗಲಿದ್ದು, ಸದ್ಯ ಎಲ್ಲರ ಚಿತ್ತ ಫಲಿತಾಂಶದತ್ತ ನೆಟ್ಟಿದೆ.