Advertisement
ಬಂಗಾರಪೇಟೆ ಕ್ಷೇತ್ರದಲ್ಲಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ನಡೆದಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ 21ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿತ್ತು. ಜೆಡಿಎಸ್ 49 ಸಾವಿರ ಮತ ಪಡೆದು ಕಾಂಗ್ರೆಸ್‌ಗೆ ಪೈಪೋಟಿ ನೀಡಿ ಎರಡನೇ ಸ್ಥಾನ ಪಡೆದಿತ್ತು. ಬಿಜೆಪಿಯು ಕೇವಲ 33 ಸಾವಿರ ಮತ ಪಡೆದು ಮೂರನೇ ಸ್ಥಾನದಲ್ಲಿತ್ತು. ಎರಡನೇ ಬಾರಿಗೆ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ವಹಿಸಿದ್ದರು. ಕ್ಷೇತ್ರದ ಎಲ್ಲಾ ಗ್ರಾಪಂ ಕೇಂದ್ರಗಳಿಗೆ ಭೇಟಿ ನೀಡಿ ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಪರ ಪ್ರಚಾರ ನಡೆಸಿದ್ದರು. ಆದರೂ ಕಾಂಗ್ರೆಸ್ ಹವಾ ಕ್ಷೇತ್ರದಲ್ಲಿ ಎಲ್ಲೂ ಕಾಣಲಿಲ್ಲ.
Related Articles
Advertisement
ವಿರೋಧಿ ಅಲೆ ಮತಗಳು ಬಿಜೆಪಿ?: ಕೋಲಾರ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಏಳು ಬಾರಿ ಗೆದ್ದರೂ ಸಹ ಬಂಗಾರಪೇಟೆ ಕ್ಷೇತ್ರದಲ್ಲಿ ಅಭಿವೃದ್ಧಿಯೇ ಮಾಡಿಲ್ಲ ಎಂದು ಕಾಂಗ್ರೆಸ್ ಪಕ್ಷದವರೇ ಪ್ರಶ್ನೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿನ ಗುಂಪುಗಾರಿಕೆಯೇ ಬಿಜೆಪಿ ಅಲೆ ಹೆಚ್ಚಿಸಿಕೊಳ್ಳಲು ಮೂಲ ಕಾರಣವಾಗಿದೆ. ಕೆ.ಎಚ್.ಮುನಿಯಪ್ಪ ವಿರೋಧ ಅಲೆ ಹೆಚ್ಚಾಗಿರುವ ಕಾರಣ ಸಾಮಾನ್ಯ ಜನರೂ ಈ ಬಾರಿ ಬಿಜೆಪಿ ಮತ ಹಾಕುವ ಇಂಗಿತ ವ್ಯಕ್ತಪಡಿಸಿರುವುದರಿಂದ ಬಿಜೆಪಿಗೆ ಹೆಚ್ಚಿನ ಮತಗಳು ಬರಲಿದೆ ಎಂಬ ರಾಜಕೀಯ ಲೆಕ್ಕಾಚಾರಗಳು ನಡೆಯುತ್ತಿವೆ.
ಬಂಗಾರಪೇಟೆ ಕ್ಷೇತ್ರದ 259 ಬೂತ್‌ಗಳ ಪೈಕಿ ಕೆಲವು ಕಾಂಗ್ರೆಸ್ ಮುಖಂಡರು ಉದ್ದೇಶಪೂರ್ವಕವಾಗಿಯೇ ಕಾಂಗ್ರೆಸ್ ಪರ ಪ್ರಚಾರ ಮಾಡದೇ ಬಿಜೆಪಿಗೆ ಮತ ಹಾಕಿಸುವ ಮೂಲಕ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದರೂ ಬಂಗಾರಪೇಟೆ ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆಯಾಗಿರುವುದರಿಂದ ತಪ್ಪದೇ ಕಾಂಗ್ರೆಸ್‌ಗೆ ಮತಗಳು ಹೆಚ್ಚಾಗಿ ಬಂದಿವೆ ಹಾಗೂ ಬಿಜೆಪಿಯವರು ಬೂತ್ ಮಟ್ಟದ ಕಾರ್ಯಕರ್ತರು ಹಾಗೂ ಮುಖಂಡರು ಇಲ್ಲದೇ ಇರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಲೀಡ್ ಬರಲಿದೆ ಎಂಬ ವಿಶ್ವಾಸ ಸ್ಥಳೀಯ ಕೈಮುಖಂಡರಲ್ಲಿದೆ.
ಒಟ್ಟಾರೆಯಾಗಿ ತಾಲೂಕಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ನಾಮುಂದು ತಾಮುಂದು ಎಂದು ಹೇಳಿಕೊಳ್ಳುತ್ತಿದೆ. ಆದರೆ, ಮತದಾರ ಪ್ರಭು ಯಾವ ಪಕ್ಷಕ್ಕೆ ಹೆಚ್ಚಿನ ಮತ ನೀಡಿದ್ದಾರೆ ಎಂಬ ಫಲಿತಾಂಶ ತಿಳಿಯಲು ಮೇ 23ರವರೆಗೂ ಕಾಯಲೇಬೇಕು.
ಎಂ.ಸಿ.ಮಂಜುನಾಥ್