Advertisement
ಮಂಗಳೂರು ವ್ಯಾಪ್ತಿಯ 3 ಕ್ಷೇತ್ರಗಳಲ್ಲಿ ಕಳೆದ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಪ್ರಮುಖ ಪ್ರತಿಸ್ಪರ್ಧಿ ಗಳಾಗಿರುವ ಬಿಜೆಪಿ, ಕಾಂಗ್ರೆಸ್ ಪರಸ್ಪರ ಹಂಚಿಕೊಂಡಿರುವ ಒಟ್ಟು ಮತಗಳ ಸಂಖ್ಯೆಯಲ್ಲಿ ಗಮನಾರ್ಹವಾದ ವ್ಯತ್ಯಾಸವಾಗಿಲ್ಲ. ನಿರೀಕ್ಷೆಯಂತೆ ಮಂಗಳೂರು ದಕ್ಷಿಣ, ಮಂಗಳೂರು ಉತ್ತರದಲ್ಲಿ ನಳಿನ್ ಕುಮಾರ್ ಕಟೀಲು ಅವರಿಗೆ ಹೆಚ್ಚಿನ ಮತಗಳು ಚಲಾವಣೆಯಾಗಿವೆ. ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮಿಥುನ್ ರೈ ಅವರಿಗೆ ಹೆಚ್ಚಿನ ಮತಗಳು ಚಲಾವಣೆಯಾಗಿವೆ.
2007ರ ವಿಧಾನಸಭಾ ಉಪ ಚುನಾವಣೆಯಿಂದ ಹಿಡಿದು 2018ರ ವರೆಗಿನ ಒಟ್ಟು 4 ವಿಧಾನಸಭಾ ಚುನಾವಣೆಗಳಲ್ಲಿ ಮಂಗಳೂರು (ಉಳ್ಳಾಲ) ಕ್ಷೇತ್ರದಲ್ಲಿ ಬಿಜೆಪಿ ಒಂದು ಬಾರಿಯೂ ಗೆದ್ದಿಲ್ಲ; ಬದಲಿಗೆ, ಕಾಂಗ್ರೆಸ್ ಅಭ್ಯರ್ಥಿಯೇ ಗೆದ್ದು ಬಂದಿದ್ದಾರೆ. ಈಗ ಈ ಲೋಕಸಭೆ ಚುನಾವಣೆಯೂ ಸಹಿತ 3 ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಗೆದ್ದರೂ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾತ್ರ ಕಾಂಗ್ರೆಸ್ ತನ್ನ ಮುನ್ನಡೆ ಕಾಯ್ದುಕೊಂಡಿದೆ.
Related Articles
Advertisement
2013ರ ವಿಧಾನಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್‌ನ ಯು.ಟಿ. ಖಾದರ್ (69,450) ಬಿಜೆಪಿಯ ಚಂದ್ರಹಾಸ ಉಳ್ಳಾಲ (40,339) ಅವರನ್ನು ಪರಾಜಯಗೊಳಿಸಿದ್ದರು. ಬಳಿಕ 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ನಳಿನ್ ಕುಮಾರ್ ಗೆದ್ದರೂ, ಕಾಂಗ್ರೆಸ್‌ನ ಜನಾರ್ದನ ಪೂಜಾರಿ ಅವರು ನಳಿನ್ ಅವರಿಗಿಂತ 13,035 ಮತಗಳ ಮುನ್ನಡೆಯನ್ನು ಪಡೆದಿದ್ದರು. ಆ ಬಳಿಕ 2018ರ ವಿಧಾನಸಭಾ ಚುನಾವಣೆಯಲ್ಲಿ ಯು.ಟಿ. ಖಾದರ್ (80,813) ಅವರು ಸಂತೋಷ್ ಕುಮಾರ್ ರೈ ಬೋಳಿಯಾರು (61,074) ಅವರ ವಿರುದ್ಧ 19,739 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಮಂಗಳೂರು ದಕ್ಷಿಣ ಕ್ಷೇತ್ರಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಂದ ಫಲಿತಾಂಶದಂತೆಯೇ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿಯೂ ಮಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ತನ್ನ ಮುನ್ನಡೆ ಕಾಯ್ದುಕೊಂಡಿದೆ.
2009ರಲ್ಲಿ ನಳಿನ್ ಅವರಿಗೆ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಜನಾರ್ದನ ಪೂಜಾರಿ ಅವರಿಗಿಂತ ಕಡಿಮೆ ಮತ ಬಂದಿತ್ತು. ಪೂಜಾರಿ 65,042, ನಳಿನ್ 60,460 ಮತ ಗಳಿಸಿದ್ದರು. ಪೂಜಾರಿ 4,582 ಮತಗಳ ಲೀಡ್ ದಾಖಲಿಸಿದ್ದರು. 2014ರ ಲೋಕಸಭೆ ಚುನಾವಣೆಯಲ್ಲಿ ನಳಿನ್ 79,150 ಮತ, ಜನಾರ್ದನ ಪೂಜಾರಿ 66,070 ಮತ ಪಡೆದಿದ್ದರು. ಈ ಮೂಲಕ ಬಿಜೆಪಿ ಇಲ್ಲಿ 13,086 ಮತಗಳ ಲೀಡ್ ದಾಖಲಿಸಿತ್ತು. ಮಂಗಳೂರು ಉತ್ತರ ಕ್ಷೇತ್ರ
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಯೂ ಈ ಸಲದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಮತಗಳು ಲಭಿಸಿದ್ದು, ಆ ಮೂಲಕ ನಳಿನ್ ಅವರಿಗೆ ಮುನ್ನಡೆ ತಂದುಕೊಟ್ಟಿದೆ. 2009ರ ಲೋಕಸಭೆ ಚುನಾವಣೆಯಲ್ಲಿ ನಳಿನ್ 65,402, ಜನಾರ್ದನ ಪೂಜಾರಿ 63,019 ಮತಗಳಿಸಿದ್ದು, ನಳಿನ್ 2,383 ಮತಗಳ ಲೀಡ್ ದಾಖಲಿಸಿದ್ದರು. 2014ರಲ್ಲಿ ನಳಿನ್ 87,843, ಜನಾರ್ದನ ಪೂಜಾರಿ 64,404 ಮತ ಪಡೆದಿದ್ದು, ನಳಿನ್ ಇಲ್ಲಿ 23,439 ಮತಗಳ ಲೀಡ್ ಪಡೆದಿದ್ದರು. ಮಂಗಳೂರು ಉತ್ತರ ಹಾಗೂ ದಕ್ಷಿಣದಲ್ಲಿ ಕಾಂಗ್ರೆಸ್‌ಗೆ ಹೋಲಿಸಿದರೆ, ಬಿಜೆಪಿಯ ಮತಗಳ ಸಂಖ್ಯೆಯಲ್ಲಿ ಕೊಂಚ ಏರಿಕೆಯಾಗಿದೆ. ಉತ್ತರ ಕ್ಷೇತ್ರದಲ್ಲಿ 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ 98,648 ಮತಗಳು ಲಭಿಸಿದ್ದರೆ, ಕಾಂಗ್ರೆಸ್‌ಗೆ 72,000 ಮತಗಳು ಬಂದಿತ್ತು. ಹಾಗೆಯೇ, ಮಂಗಳೂರು ದಕ್ಷಿಣದಲ್ಲಿ ಬಿಜೆಪಿಗೆ 86,545 ಮತಗಳು, ಕಾಂಗ್ರೆಸ್‌ಗೆ 70,470 ಮತಗಳು ಬಂದಿತ್ತು. ಈ ಮತಗಳಿಗೆ ಹೋಲಿಸಿದರೆ, 2019ರ ಚುನಾವಣೆಯಲ್ಲಿ ನಳಿನ್‌ಗೆ ಮಂಗಳೂರು ಉತ್ತರದಲ್ಲಿ 1,07,501, ಮಿಥುನ್ ರೈ 61,413 ಮತ ಗಳಿಸಿದ್ದು, ನಳಿನ್ ಅವರು ಇಲ್ಲಿ 46,088 ಮತಗಳ ಲೀಡ್ ದಾಖಲಿಸಿದ್ದಾರೆ. ಹಾಗೆಯೇ ದಕ್ಷಿಣದಲ್ಲಿ ಈ ಬಾರಿ ನಳಿನ್ 98,041, ಮಿಥುನ್ ರೈ ಅವರಿಗೆ 65,206 ಮತ ಬಂದಿದ್ದು, ನಳಿನ್ ಅವರು 32,835 ಲೀಡ್ ದಾಖಲಿಸಿದ್ದಾರೆ. 2018ರ ವಿಧಾನ ಸಭಾ ಚುನಾವಣೆ ವೇಳೆ ಶರತ್ ಮಡಿವಾಳ ಮತ್ತು ದೀಪಕ್ ರಾವ್ ಕೊಲೆ ಪ್ರಕರಣಗಳು ಜಿಲ್ಲೆಯಲ್ಲಿ ಬಿಜೆಪಿ ಪರ ಅಲೆಗೆ ಕಾರಣ ವಾಗಿತ್ತು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಇಂತಹ ಯಾವುದೇ ಗಂಭೀರವಾದ ಪ್ರಕರಣಗಳು ಚರ್ಚೆಗೆ ಬಂದಿಲ್ಲ. ಅಲ್ಲದೆ ತೊಕ್ಕೊಟು ಮತ್ತು ಪಂಪ್‌ವೆಲ್ ಫ್ಲೆ$çಓವರ್ ಕಾಮಗಾರಿಗಳು 10 ವರ್ಷಗಳಾದರೂ ಪೂರ್ಣ ಗೊಳ್ಳದಿರುವ ವಿಷಯ ನಳಿನ್ ಅವರ ವಿಜಯದ ನಾಗಾಲೋಟಕ್ಕೆ ತಡೆಯಾಗಲಿಲ್ಲ ಎನ್ನುವುದು ಗಮನಾರ್ಹ. ಕಾಂಗ್ರೆಸ್ ಮತ ಕುಸಿತ
20 ವರ್ಷಗಳಲ್ಲಿ ನಡೆದ 6 ವಿಧಾನ ಸಭಾ ಚುನಾವಣೆಗಳಲ್ಲಿ ಮತ್ತು ಮೂರು (2009, 2014, 2019) ಲೋಕಸಭಾ ಚುನಾವಣೆಗಳಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯವನ್ನು ಕಾಯ್ದುಕೊಂಡು ಬಂದಿದೆ. ಆದರೆ ಗಮನಿಸಬಹುದಾ ಅಂಶವೆಂದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್‌ಗೆ ಒಟ್ಟು 19,739 ಮತಗಳು ಬಂದಿದ್ದರೆ, ಈ ಲೋಕಸಭೆ ಚುನಾವಣೆಯಲ್ಲಿ 11,392 ಮತಗಳು ಲಭಿಸುವ ಮೂಲಕ ಬರೋಬರಿ 8,347 ಮತಗಳನ್ನು ಕಾಂಗ್ರೆಸ್ ಕಳೆದುಕೊಂಡಿದೆ. ಮೋದಿ ನಾಯಕತ್ವ ಕಾರಣ
ಭಾರತವನ್ನು ಸಮರ್ಥವಾಗಿ ಮುನ್ನಡೆಸ ಬಲ್ಲ ಶಕ್ತಿ ನರೇಂದ್ರ ಮೋದಿ ಅವರಿಗಿದೆ ಎಂಬ ಭಾವನೆ ಜನರಲ್ಲಿ ಆಳವಾಗಿ ಬೇರೂರಿದ್ದು, ಇದಕ್ಕೆ ಪೂರಕವಾಗಿ ಬಿಜೆಪಿ ಕಾರ್ಯಕರ್ತರು ಸತತ ಪರಿಶ್ರಮ ಬಿಜೆಪಿ ಅಭ್ಯರ್ಥಿ ನಳಿನ್ ಗೆಲುವಿಗೆ ಮುಖ್ಯ ಕಾರಣ.
– ವೇದವ್ಯಾಸ ಕಾಮತ್, ಶಾಸಕರು, ಮಂಗಳೂರು ದಕ್ಷಿಣ ಮೋದಿ ಸುನಾಮಿ ಕಾರಣ
ಈ ಬಾರಿಯ ಚುನಾವಣೆಯಲ್ಲಿ ಕಳೆದ (2014) ಬಾರಿಗಿಂತ ಜಾಸ್ತಿ ಮತ ಪಡೆಯಲು ಮೋದಿ ಸುನಾಮಿ ಪ್ರಮುಖ ಕಾರಣ. ಜತೆಗೆ ಕ್ಷೇತ್ರದಲ್ಲಿ ಮತದಾರರೇ ಕಾರ್ಯಕರ್ತರಾಗಿ ಮನೆ ಮನೆಗೆ ತೆರಳಿ ಮೋದಿ ಪರ ಮತ ಹಾಕುವಂತೆ ಮನ ಒಲಿಸುವ ಕೆಲಸ ಮಾಡಿದ್ದಾರೆ.
– ಡಾ|ವೈ.ಭರತ್ ಶೆಟ್ಟಿ,
ಶಾಸಕರು, ಮಂಗಳೂರು ಉತ್ತರ