Advertisement

ಬಿಜೆಪಿ-ಟಿಎಂಸಿ ಘರ್ಷಣೆ: 8 ಸಾವು

01:30 AM Jun 10, 2019 | Team Udayavani |

ಕೋಲ್ಕತಾ: ಪಶ್ಚಿಮ ಬಂಗಾಲದಲ್ಲಿ ತೃಣಮೂಲ ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರ ನಡುವಿನ ಘರ್ಷಣೆಗೆ ಕೊನೆಯೇ ಇಲ್ಲದಂತಾಗಿದೆ. ಶನಿವಾರದಿಂದ ರವಿವಾರದ ವರೆಗಿನ ಅವಧಿಯಲ್ಲಿ ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಲಿ ಎಂಬಲ್ಲಿ ನಡೆದ ಘರ್ಷಣೆಯಲ್ಲಿ ಒಟ್ಟಾರೆ 8 ಮಂದಿ ಅಸುನೀಗಿದ್ದಾರೆ ಎಂದು ಬಿಜೆಪಿ ಹಾಗೂ ಟಿಎಂಸಿ ಹೇಳಿಕೊಂಡಿವೆ.


Advertisement

ಆದರೆ, ಪೊಲೀಸರು ಮಾತ್ರ ಮೂವರು ಬಿಜೆಪಿ ಕಾರ್ಯಕರ್ತರು ಮತ್ತು ತೃಣಮೂಲ ಕಾಂಗ್ರೆಸ್‌ನ ಒಬ್ಬ ಸಾವಿಗೀಡಾಗಿದ್ದಾರೆ ಎಂದು ಹೇಳಿದ್ದಾರೆ. ಪಶ್ಚಿಮ ಬಂಗಾಲದಲ್ಲಿನ ಸ್ಥಿತಿ ಬಗ್ಗೆ ರಾಜ್ಯ ಬಿಜೆಪಿ ಘಟಕ ಗೃಹ ಸಚಿವ ಅಮಿತ್‌ ಶಾ ಅವರಿಗೆ ವರದಿ ನೀಡಿದೆ. ಇದೇ ವೇಳೆ, ಕೇಂದ್ರ ಗೃಹ ಸಚಿವಾಲಯ ಕೂಡ ಬಂಗಾಲ ಸರಕಾರದಿಂದ ವರದಿ ಕೇಳಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಸೂಚಿಸಿದೆ.

ಕಾರ್ಯಕರ್ತರ ಮೃತದೇಹಗಳನ್ನು ಅಂತ್ಯಸಂಸ್ಕಾರಕ್ಕಾಗಿ ಕೋಲ್ಕತ್ತಾಗೆ ಮೆರವಣಿಗೆ ಮೂಲಕ ಒಯ್ಯಲು ಬಿಜೆಪಿ ಮುಂದಾಗಿತ್ತು. ಆದರೆ, ಕಾನೂನು ಸುವ್ಯವಸ್ಥೆಗೆ ಸಮಸ್ಯೆಯಾಗಬಹುದು ಎಂಬ ಕಾರಣ ನೀಡಿ ಪೊಲೀಸರು ಮೆರವಣಿಗೆಗೆ ಅಡ್ಡಿ ಪಡಿಸಿದ್ದು, ಇದಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಧ್ವಜ ತೆಗೆಯುವ ವಿಚಾರಕ್ಕೆ ಆರಂಭದಲ್ಲಿ ಬಿಜೆಪಿ – ಟಿಎಂಸಿ ಕಾರ್ಯಕರ್ತರ ನಡುವೆ ವಾಗ್ವಾದ ಶುರುವಾಗಿತ್ತು. ಹಟಗಚಿ ಎಂಬಲ್ಲಿ ಖಯೂಮ್‌ ಮುಲ್ಲಾ ಎಂಬ ಪಕ್ಷದ ಕಾರ್ಯಕರ್ತ ಟಿಎಂಸಿಯ ಕಾರ್ಯಕ್ರಮಕ್ಕೆ ಬಂದಿದ್ದಾಗ ಆತನ ಮೇಲೆ ಪಾಯಿಂಟ್‌ ಬ್ಲಾಕ್‌ನಲ್ಲಿ ಗುಂಡು ಹಾರಿಸಲಾಯಿತು. ಅನಂತರ ಆತನಿಗೆ ಇರಿಯಲಾಯಿತು ಎಂದು ಪಶ್ಚಿಮ ಬಂಗಾಲ ಆಹಾರ ಸಚಿವ ಜ್ಯೋತಿಪ್ರಿಯ ಮಲಿಕೆ ಆರೋಪಿಸಿದ್ದಾರೆ.

ಬಂಗಾಲದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಯಂತನು ಬಸು ಮಾತನಾಡಿ, ಶನಿವಾರ ಸಂಜೆ ಟಿಎಂಸಿ ಕಾರ್ಯಕರ್ತರು ಗುಂಡು ಹಾರಿಸಿದ್ದರಿಂದ ಪಕ್ಷದ ಮೂವರು ಕಾರ್ಯಕರ್ತರು ಅಸುನೀಗಿದ್ದಾರೆ. ಹಲವು ಕಾರ್ಯಕರ್ತರು ನಾಪತ್ತೆಯಾಗಿದ್ದಾರೆ ಎಂದೂ ಆರೋಪಿಸಿದ್ದಾರೆ.

Advertisement

250 ಕ್ಷೇತ್ರ ಗೆಲ್ಲಲು ಯೋಜನೆ
ಪಶ್ಚಿಮ ಬಂಗಾಲ ವಿಧಾನಸಭೆ ಚುನಾವಣೆ 2021ರಲ್ಲಿ ನಡೆಯಲಿದೆ. ಅದಕ್ಕಾಗಿ ಬಿಜೆಪಿ ಈಗಿನಿಂದಲೇ ಕಾರ್ಯ ಯೋಜನೆ ಸಿದ್ಧಪಡಿಸುತ್ತಿದೆ. 294 ಕ್ಷೇತ್ರಗಳ ಪೈಕಿ 250ರಲ್ಲಿ ಗೆಲ್ಲಲೇಬೇಕು ಎಂದು ಪಕ್ಷ ಗುರಿ ಹಾಕಿಕೊಂಡಿದೆ. ಅದಕ್ಕಾಗಿ ಟಿಎಂಸಿ ಪ್ರಬಲವಾಗಿರುವ ಕ್ಷೇತ್ರಗಳಲ್ಲಿ ಆ ಪಕ್ಷದ ನಾಯಕರನ್ನು ಬಿಜೆಪಿಗೆ ಸೇರಿಸಿಕೊಳ್ಳುವುದು, ಉದ್ಯೋಗ ಸೃಷ್ಟಿ, ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ ಜಾರಿ ಮಾಡುವುದರ ಬಗ್ಗೆ ಹೆಚ್ಚಿನ ರೀತಿಯಲ್ಲಿ ಪ್ರಚಾರ ನಡೆಸುತ್ತಿದೆ ಎಂದು ಪಕ್ಷದ ನಾಯಕ ಕೈಲಾಶ್‌ ವಿಜಯ ವರ್ಗೀಯ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next