ತಿ.ನರಸೀಪುರ: ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಆಕಾಂಕ್ಷಿಯಾಗಿರುವ ಬಿಜೆಪಿ ಮುಖಂಡ, ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಂ ತಾಲೂಕಿನ ಸೋಸಲೆ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡಿ ಪಕ್ಷ ಸಂಘಟನೆ ಹಾಗೂ ಗೆಲ್ಲಲು ಕಾರ್ಯತಂತ್ರ ರೂಪಿಸುವ ಬಗ್ಗೆ ಚರ್ಚಿಸಿದರು.
ಚುನಾವಣೆ ಸನ್ನಿತವಾಗುತ್ತಿರುವ ಹಿನ್ನೆಲೆಯಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ನಾಲ್ಕೈದು ತಿಂಗಳಿನಿಂದಲೂ ಕ್ಷೇತ್ರಾದ್ಯಂತ ಸಂಚರಿಸುತ್ತಿರುವ ಕೆ.ಶಿವರಾಂ ಅವರು ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ತಾಲೂಕಿನ ಸೋಸಲೆ ಹೋಬಳಿಯ ಕೇಂದ್ರದಿಂದ ಪ್ರವಾಸ ಆರಂಭಿಸಿದರು.
ಹೊರಳಹಳ್ಳಿ ಸೇರಿದಂತೆ ಹಲವಾರ, ಮುಡುಕನಪುರ, ಸೋಮನಾಥಪುರ, ಉಕ್ಕಲಗೆರೆ, ಎಂ.ಎಲ್.ಹುಂಡಿ ಇನ್ನಿತರ ಗ್ರಾಮಗಳಲ್ಲಿರುವ ಕಾರ್ಯಕರ್ತರನ್ನು ಭೇಟಿ ಮಾಡಿದರು. ಜೊತೆಗೆ ವಿವಿಧ ಮಠಗಳಿಗೂ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದರು.
ತಾಲೂಕಿನ ಸೋಮನಾಥಪುರದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ.ಶಿವರಾಂ, ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಸ್ಪರ್ಧೆಗೆ ಅವಕಾಶ ನೀಡುವ ಭರವಸೆಯನ್ನು ಹೈಕಮಾಂಡ್ ನೀಡಿದ ಹಿನ್ನೆಲೆಯಲ್ಲಿ ಕ್ಷೇತ್ರ ಪ್ರವಾಸ ಕೈಗೊಳ್ಳುತ್ತಿದ್ದೇನೆ.
ಪ್ರಧಾನಿ ನರೇಂದ್ರ ಮೋದಿ 5 ವರ್ಷಗಳ ಕಾಲ ಕೇಂದ್ರದಲ್ಲಿ ಉತ್ತಮ ಆಡಳಿತವನ್ನು ನೀಡಿ, ಭಾರತ ಬಲಿಷ್ಠ ರಾಷ್ಟ್ರವೆಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಈ ದಿಸೆಯಲ್ಲಿ ಮತ್ತೆ ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಗ್ರಾಮೀಣ ಜನರು ಬಿಜೆಪಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ಮುಖಂಡರಾದ ಕುದೇರು ಸುರೇಶ್, ಅಭಿ, ಭರತ್, ಕೆ.ಗಣೇಶ್, ಪುಟ್ಟಸ್ವಾಮಿ, ರಾಜೇಶ್, ವಿನೋದ್, ಪ್ರಶಾಂತ್, ಮಹದೇವಯ್ಯ, ರಾಜು, ಲಿಂಗರಾಜು ಹಾಗೂ ಕಾರ್ಯಕರ್ತರು ಹಾಜರಿದ್ದರು.