Advertisement
ರಾಜ್ಯದಲ್ಲಿ ಮತ್ತೆ ಅಧಿಕಾರದ ಕನಸು ಕಾಣುತ್ತಿರುವ ಬಿಜೆಪಿ, ಬಹುಮತದೊಂದಿಗೆ ಆಡಳಿತಕ್ಕೆ ಬಂದರೆ ಟಿಕೆಟ್ ಕೈತಪ್ಪಿದ ಆಕಾಂಕ್ಷಿಗಳಿಗೆ ನಿಗಮ-ಮಂಡಳಿ ಸೇರಿದಂತೆ ಸರ್ಕಾರದ ಮಟ್ಟದಲ್ಲಿ ಪ್ರಮುಖ ಹುದ್ದೆಗಳನ್ನು ನೀಡಲು ತೀರ್ಮಾನಿಸಿದೆ. ಈ ಕುರಿತು ಆಕಾಂಕ್ಷಿಗಳಿಗೂ ಸಂದೇಶ ರವಾನಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
Related Articles
Advertisement
ವಿಧಾನಸಭೆ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕೆಂದು ಮಿಷನ್-150 + ಘೋಷಣೆಯೊಂದಿಗೆ ಬಿಜೆಪಿ ಹೊರಟಿದೆಯಾದರೂ ಇತ್ತೀಚೆಗೆ ನಡೆಸಿದ ಪಕ್ಷದ ಆಂತರಿಕ ಸಮೀಕ್ಷೆಯಲ್ಲಿ 110ರಿಂದ 120 ಸೀಟುಗಳು ಮಾತ್ರ ಬರಬಹುದು ಎಂಬ ಮಾಹಿತಿ ಲಭ್ಯವಾಗಿದೆ. ಇದರ ಮಧ್ಯೆ ಬಿಜೆಪಿಯ ಪ್ರಬಲ ಕೋಟೆಯಾಗಿರುವ ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ನಿರೀಕ್ಷೆಗಿಂತ ಹೆಚ್ಚು ಕ್ರಿಯಾಶೀಲವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪಕ್ಷಾಂತರದ ಸಮಸ್ಯೆ ಉದ್ಭವವಾದರೆ ಅಧಿಕಾರಕ್ಕೆ ಬರುವುದು ಕಷ್ಟವಾಗಬಹುದು. ಅದಕ್ಕಾಗಿ ಟಿಕೆಟ್ ಹಂಚಿಕೆಗೆ ಮುನ್ನವೇ ಆಕಾಂಕ್ಷಿಗಳನ್ನು ಸಮಾಧಾನಪಡಿಸಲು ಬಿಜೆಪಿ ಈ ತಂತ್ರಗಾರಿಕೆ ರೂಪಿಸಿದೆ ಎನ್ನಲಾಗಿದೆ.
ಯುವಕರಿಗೂ ಭರವಸೆ:ಈ ಮಧ್ಯೆ ರಾಜ್ಯದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ಕೇಳುತ್ತಿದ್ದು, ಇದು ಕೂಡ ಗೆಲ್ಲುವ ಅಭ್ಯರ್ಥಿಗಳಿಗೇ ಮಣೆ ಹಾಕಲು ಮುಂದಾಗಿರುವ ಪಕ್ಷಕ್ಕೆ ಸ್ವಲ್ಪ ಮಟ್ಟಿನ ಆತಂಕ ಉಂಟುಮಾಡಿದೆ. ಅಭ್ಯರ್ಥಿಗಳ ಆಯ್ಕೆ ಕುರಿತಂತೆ ನಡೆಸಿದ ಸಮೀಕ್ಷೆಗಳಲ್ಲಿ ಹಾಲಿ ಮತ್ತು ಈ ಹಿಂದೆ ಶಾಸಕರಾಗಿದ್ದವರ ಬಗ್ಗೆಯೇ ಜನಾಭಿಪ್ರಾಯ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್ ಆಕಾಂಕ್ಷಿ ಯುವಕರನ್ನು ಸಮಾಧಾನಪಡಿಸಲು ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸುವ ಭರವಸೆ ನೀಡಲಾಗಿದೆ. ಇದುವರೆಗೆ ಪಕ್ಷಕ್ಕಾಗಿ ಸಾಕಷ್ಟು ದುಡಿದರೂ ಪಕ್ಷದಲ್ಲಿ ಜವಾಬ್ದಾರಿ ಹೊಂದಿಲ್ಲದ ಕಾರಣ ಜನರೊಂಂದಿಗೆ ಗುರುತಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಅಂಥವರಿಗೆ ಪಕ್ಷದಲ್ಲಿ ಜವಾಬ್ದಾರಿಗಳನ್ನು ನೀಡಿ ಎರಡನೇ ಹಂತದ ಮುಖಂಡರಾಗಿ ಗುರುತಿಸಿಕೊಳ್ಳಲು ಅವಕಾಶ ನೀಡಲಾಗುವುದು. ಆ ಮೂಲಕ ಭವಿಷ್ಯದಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ಸಮಾಧಾನಪಡಿಸುವ ಕೆಲಸಕ್ಕೆ ಬಿಜೆಪಿ ಮುಂದಾಗಿರುವುದಾಗಿ ತಿಳಿದುಬಂದಿದೆ. ಪಕ್ಷಕ್ಕೆ ಬರುವವರ ಪಟ್ಟಿ ನೀಡಲು ಸೂಚನೆ
ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಕೆಲವು ಹಾಲಿ ಶಾಸಕರು ಬಿಜೆಪಿ ಸೇರಲಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಅಂಥವರ ಪಟ್ಟಿ ನೀಡುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಜ್ಯ ಘಟಕಕ್ಕೆ ಸೂಚನೆ ನೀಡಿದ್ದಾರೆ. ಅನ್ಯ ಪಕ್ಷಗಳಿಂದ ಹಾಲಿ ಶಾಸಕರು ಪಕ್ಷ ಸೇರ್ಪಡೆಯಾದರೆ ಅವರಿಗೆ ಟಿಕೆಟ್ ನೀಡುವುದು ಅನಿವಾರ್ಯ. ಇಂತಹ ಸಂದರ್ಭದಲ್ಲಿ ಆ ಕ್ಷೇತ್ರಗಳಲ್ಲಿ ಪಕ್ಷದ ಇತರೆ ಟಿಕೆಟ್ ಆಕಾಂಕ್ಷಿಗಳು ಅಸಮಾಧಾನಗೊಳ್ಳುತ್ತಾರೆ. ಬೇರೆ ಪಕ್ಷ ಸೇರಿ ಅಲ್ಲಿಂದ ಟಿಕೆಟ್ ಪಡೆಯುವ ಸಾಧ್ಯತೆಯೂ ಇದೆ. ಹೀಗಾಗಿ ಅಂಥವರನ್ನು ಸಮಾಧಾನಪಡಿಸುವ ವೇದಿಕೆ ಸೃಷ್ಟಿಸಲು ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಬರುವ ಹಾಲಿ ಶಾಸಕರ ಪಟ್ಟಿ ನೀಡುವಂತೆ ಸೂಚಿಸಿರುವುದಾಗಿ ತಿಳಿದುಬಂದಿದೆ. – ಪ್ರದೀಪ್ ಕುಮಾರ್ ಎಂ.