ಚನ್ನಪಟ್ಟಣ: ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳು ರಾಜಕೀಯ ದುರುದ್ದೇಶದಿಂದ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದಾರೆ, ಇದು ಧರ್ಮ, ಅಧರ್ಮಗಳ ನಡುವಿನ ಸಮರ, ನಿಮ್ಮ ಮನೆಯ ಮಗನಾದ ನನಗೆ ಆಶೀರ್ವಾದ ಮಾಡಿ ಜಯತಂದು ಕೊಟ್ಟು ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಶಕ್ತಿ ನೀಡಬೇಕು ಎಂದು ಬಿಜೆಪಿ ಅಭ್ಯರ್ಥಿ, ಶಾಸಕ ಸಿ.ಪಿ.ಯೋಗೇಶ್ವರ್ ಮನವಿ ಮಾಡಿದರು.
ಪಟ್ಟಣ ಪ್ರದೇಶದ ವಿವಿಧ ವಾರ್ಡ್‌ಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿ, ರೇವಣ್ಣ ಮಾಗಡಿಯಿಂದ ಬಂದಿದ್ದಾರೆ. ಕುಮಾರಸ್ವಾಮಿ ಹಾಸನದಿಂದ ಬಂದಿದ್ದಾರೆ. ಅವರು ಇಲ್ಲಿನ ನೆಮ್ಮದಿ-ಶಾಂತಿಯನ್ನು ಕದಡಲು ಬಂದಿದ್ದಾರೆ ಎಂದು ದೂರಿದರು.
ಕುಮಾರಸ್ವಾಮಿ ಅವರು ರಾಮನಗರದಲ್ಲಿ ಏನು ಅಭಿವೃದ್ಧಿ ಮಾಡಿಲ್ಲ. ರಾಮನಗರದಲ್ಲಿ ಕುಡಿಯುವ ನೀರಿಗಾಗಿ ಅಲ್ಲಿನ ಜನತೆ 15 ದಿನಗಳು ಕಾಯಬೇಕಿದೆ. ಆದರೆ ನಾನು ನಮ್ಮ ಕ್ಷೇತ್ರಕ್ಕೆ ಸಾಕಷ್ಟು ನೀರಾವರಿ ಮಾಡಿದ್ದು, ಕುಡಿಯುವ ನೀರಿನ ಸಮಸ್ಯೆ ಇಲ್ಲದಂತೆ ಮಾಡಿದ್ದೇನೆ. ನನಗೆ ನಿಮ್ಮ ಮತ ನೀಡಿ ಆಶೀರ್ವದಿಸಿ ಎಂದು ಮನವಿ ಮಾಡಿದರು.
ಪಟ್ಟಣ ಪ್ರದೇಶದಲ್ಲಿ ವಸತಿ ಸಮಸ್ಯೆ ಕಾಡುತ್ತಿದೆ. ಒಂದು ಮನೆಯಲ್ಲಿ ಮೂರ್‍ನಾಲ್ಕು ಸಂಸಾರಗಳು ವಾಸ ಮಾಡುವಂತಾಗಿದೆ. ಇದನ್ನು ಸರಿಪಡಿಸಲು ಸರ್ಕಾರದಿಂದ ಭೂಮಿ ಪಡೆದು ಹೊಸ ಬಡಾವಣೆಗಳನ್ನು ನಿರ್ಮಿಸಿ ನಿವೇಶನ, ಮನೆಗಳನ್ನು ಆ ಕುಟುಂಬಕ್ಕೆ ನೀಡುತ್ತೇನೆ. ಜೊತೆಗೆ ಕೇಂದ್ರದಿಂದ ಸಿಗುವ ಅನುದಾನವನ್ನು ಬಳಸಿ ಚನ್ನಪಟ್ಟಣವನ್ನು ಸ್ಮಾರ್ಟ್‌ಸಿಟಿಯಾಗಿ ಮಾಡುವ ಗುರಿ ಹೊಂದಿದ್ದೇನೆ ನನಗೆ ನಿಮ್ಮ ಮತ ನೀಡಿ ಆಶೀರ್ವದಿಸಿ ಎಂದು ಮನವಿ ಮಾಡಿದರು.
70 ವರ್ಷದ ವೃದ್ಧರಿಗೆ 5 ಸಾವಿರ ನೀಡುವ ಬಗ್ಗೆ ಕುಮಾರಸ್ವಾಮಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ಈ ಯೋಜನೆ ಬಗ್ಗೆ ಈಗಾಗಲೇ ಕೇಂದ್ರ ಸರ್ಕಾರದ ಪ್ರಧಾನಿ ಮೋದಿ ಅವರ ಬಳಿ ಕೆಲ ವೃದ್ಧರು ಚರ್ಚೆ ಮಾಡಿ, ತಿಂಗಳಿಗೆ 5 ಸಾವಿರ ಮಾಶಾಸನ ನೀಡಿದರೆ ನಾವು ಹತ್ತಾರು ವರ್ಷ ಅರೋಗ್ಯವಂತರಾಗಿ ಜೀವನ ಕಳೆಯುತ್ತೇವೆ ಎಂದು ಮನವಿ ಮಾಡಿದ್ದು, ಇದನ್ನು ಮೋದಿ ಪರಿಗಣಿಸಿದ್ದಾರೆ ಎಂದರು.