Advertisement

ಸಿದ್ದರಾಮಯ್ಯ ಎಂಟು ದಿನದ ಸುಲ್ತಾನ್‌

06:00 AM May 07, 2018 | |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನು ಕೇವಲ ಎಂಟು ದಿನದ ಸುಲ್ತಾನ ಮಾತ್ರ. ಉತ್ತರ ಪ್ರದೇಶದ ಫ‌ಲಿತಾಂಶ ಇಲ್ಲೂ ಮರುಕಳಿಸಲಿದ್ದು, ನಾನೇ ಮುಂದಿನ ಮುಖ್ಯಮಂತ್ರಿ ಇದನ್ನು ಎದೆ ತಟ್ಟಿ ಹೇಳುತ್ತೇನೆ’ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಆತ್ಮವಿಶ್ವಾಸದ ನುಡಿಗಳಿವು. ಚುನಾವಣೆ ಪ್ರಚಾರದ ನಡುವೆಯೇ “ಉದಯವಾಣಿ’ಗೆ ವಿಶೇಷ ಸಂದರ್ಶನ ನೀಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹಾಗೂ ನಾನು ಒಂದು ಸಂಕಲ್ಪ ತೊಟ್ಟಿದ್ದೇವೆ. ನಮ್ಮ ಗುರಿ, ಧ್ಯೇಯ ಒಂದೇ. ಅದು “ಕಾಂಗ್ರೆಸ್‌ ಮುಕ್ತ ಕರ್ನಾಟಕ’ ಎಂದು ಪ್ರತಿಪಾದಿಸಿದರು.

Advertisement

ಮತದಾನಕ್ಕೆ ಆರು ದಿನ ಬಾಕಿ ಇದೆ. ಹೇಗಿದೆ ನಿಮ್ಮ ಬಿಜೆಪಿ ಪರಿಸ್ಥಿತಿ?
ರಾಜ್ಯದ ಮೂಲೆ ಮೂಲೆ ತಿರುಗಿದ್ದೇನೆ. ಜನರ ನಾಡಿ ಮಿಡಿತ ಅರಿತಿದ್ದೇನೆ. ಕಾಂಗ್ರೆಸ್‌ ವಿರೋಧ ಅಲೆ ಸುನಾಮಿಗಿಂತ ತೀವ್ರವಾಗಿದೆ. ಕರಾವಳಿ, ಹೈದರಾಬಾದ್‌ ಕರ್ನಾಟಕ, ಮುಂಬೈ ಕರ್ನಾಟಕ ಭಾಗದಲ್ಲಿ ಬಿಜೆಪಿ ಗರಿಷ್ಠ ಸ್ಥಾನ ಗೆಲ್ಲಲಿದೆ. ಬೆಂಗಳೂರಿನಲ್ಲಿ ಕನಿಷ್ಠ ಅಂದರೂ 18 ಸ್ಥಾನ ಪಡೆಯುತ್ತೇವೆ.

ಕಾಂಗ್ರೆಸ್‌ನವರು ಹೇಳ್ತಾರೆ, ಬಿಜೆಪಿ 70ರ ಗಡಿ ದಾಟುವುದಿಲ್ಲ ಅಂತ?
     ನಾನು ಹೇಳುತ್ತೇನೆ. ಅವರು 70ರ ಹತ್ತಿರವೂ ಬರುವುದಿಲ್ಲ. ಅದು ಅವರಿಗೆ ಗೊತ್ತಾಗಿದೆ. ಹೀಗಾಗಿ, ಜನರಲ್ಲಿ ಗೊಂದಲ ಮೂಡಿಸಿ, ಜಾತಿ ಸಂಘರ್ಷ ಉಂಟು ಮಾಡಿ ಲಾಭ ಪಡೆಯುವ ಯತ್ನದಲ್ಲಿದ್ದಾರೆ.

ಒಂದೊಮ್ಮೆ ಅತಂತ್ರ ವಿಧಾನಸಭೆಯಾದರೆ?
     ರೇ.. ಪ್ರಶ್ನೆಗಳಿಗೆ ಉತ್ತರ ಕೊಡಲ್ಲ.

ಮೋದಿ ಅಲೆ ಬಿಜೆಪಿಯನ್ನು ಗೆಲ್ಲಿಸುತ್ತಾ? ಅಮಿತ್‌ ಶಾ ತಂತ್ರಗಾರಿಕೆ ಲಾಭ ತರುತ್ತಾ? ಯಡಿಯೂರಪ್ಪ ವರ್ಚಸ್ಸು ಅಧಿಕಾರಕ್ಕೆ ತರುತ್ತಾ?
     ನರೇಂದ್ರ ಮೋದಿ, ಅಮಿತ್‌ ಶಾ ಮತ್ತು ಯಡಿಯೂರಪ್ಪ ಸೇರಿಯೇ ಒಂದು ಸಂಕಲ್ಪ ತೊಟ್ಟಿದ್ದು, ಮೂವರ ಗುರಿ ಧ್ಯೇಯ ಒಂದೇ ಅದು ಕಾಂಗ್ರೆಸ್‌ ಮುಕ್ತ ಕರ್ನಾಟಕ. ಇಲ್ಲಿ ಯಾರು ಹೆಚ್ಚು, ಯಾರು ಕಡಿಮೆ ಎಂಬ ಪ್ರಶ್ನೆಯೇ ಇಲ್ಲ. ನಾವೆಲ್ಲರೂ ಸೇರಿ ಬಿಜೆಪಿ ಅಧಿಕಾರಕ್ಕೆ ತರುತ್ತೇವೆ.

Advertisement

ಮಿಷನ್‌ 150 ಗುರಿ ತಲುಪುತ್ತೀರಾ?
     ಹೌದು ಖಂಡಿತ. ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ದೊರೆತ ಫ‌ಲಿತಾಂಶ ಇಲ್ಲೂ ಮರುಕಳಿಸುತ್ತದೆ. ಅದರಲ್ಲಿ ಅನುಮಾನವೇ ಬೇಡ. ಫ‌ಲಿತಾಂಶದ ನಂತರ ಕಾಂಗ್ರೆಸ್‌ ನಾಯಕರನ್ನು ಹುಡುಕಬೇಕಾಗುತ್ತದೆ.

ಜೆಡಿಎಸ್‌ ಬಗ್ಗೆ ಯಾಕೆ ನೀವು ಮೌನ?
     ಜೆಡಿಎಸ್‌ ಕಟ್ಟಿಕೊಂಡು ನನಗೇನಾಗಬೇಕಿದೆ. ಆ ಪಕ್ಷದ ಶಕ್ತಿ ಗೊತ್ತಿದೆ. ನಾವು ಕಾಂಗ್ರೆಸ್‌ ಮುಕ್ತ ಕರ್ನಾಟಕದ ಹೋರಾಟ ನಡೆಸುತ್ತಿದ್ದೇವೆ. ನಮ್ಮ ಗುರಿ ತಲುಪಲು ನೇರ ವಿರೋಧಿ ಬಗ್ಗೆಯಷ್ಟೇ ಗಮನಹರಿಸಬೇಕು.

ಜೆಡಿಎಸ್‌-ಬಿಜೆಪಿ ಒಳ ಒಪ್ಪಂದ ಅಂತಾರಲ್ಲಾ?
     ಅದರ ಅಗತ್ಯವೇ ಬರುವುದಿಲ್ಲ. ಅದೆಲ್ಲವೂ ಕಾಂಗ್ರೆಸ್‌ನವರು ಹಬ್ಬಿಸಿರುವ ಸುಳ್ಳು. ಮತ ವಿಭಜನೆ ಮಾಡುವ ನಾಟಕ. ಆದರೆ, ರಾಜ್ಯದ ಜನತೆ ಇವರನ್ನು ನಂಬುವುದಿಲ್ಲ.

ನರೇಂದ್ರ ಮೋದಿಯವರು ಒಮ್ಮೆ ದೇವೇಗೌಡರನ್ನು ಹೊಗಳುತ್ತಾರೆ, ಮತ್ತೂಮ್ಮೆ ತೆಗಳುವುದರ ಹಿಂದಿನ ಮರ್ಮವೇನು?
      ನಾನು ಅದರ ಬಗ್ಗೆ ಪ್ರತಿಕ್ರಿಯೆ ಕೊಡಲು ಬಯಸುವುದಿಲ್ಲ.

ಪ್ರಣಾಳಿಕೆಯಲ್ಲಿ ಭರಪೂರ ಘೋಷಣೆ ಮಾಡಿದ್ದೀರಿ. ಹಣ ಎಲ್ಲಿಂದ ತರುತ್ತೀರಿ?
      ಒಂದು ವರ್ಷ ಕಾಲ ತುರ್ತು ಎಂಬುದು ಹೊರತುಪಡಿಸಿ ಉಳಿದೆಲ್ಲಾ ಕಾಮಗಾರಿಗಳನ್ನು ನಿಲ್ಲಿಸುತ್ತೇನೆ. ರೈತರು ಈ ರಾಜ್ಯದ ಆಸ್ತಿ. ಅವರ ಸಾಲ ಮನ್ನಾ ಮಾಡುವ ವಿಚಾರದಲ್ಲಿ ನಾವು ಹಿಂದೆ-ಮುಂದೆ ನೋಡುವುದಿಲ್ಲ. ಬಿಪಿಎಲ್‌ ಕುಟುಂಬದ ಮಹಿಳೆಯರು, ಹೆಣ್ಣು ಮಕ್ಕಳಿಗೆ ನೀಡಿರುವ ವಾಗ್ಧಾನ ಮರೆಯವುದಿಲ್ಲ.

ಪ್ರಣಾಳಿಕೆ ನೋಡಿ ಜನ ಮತ ಹಾಕುತ್ತಾರಾ?
      ಖಂಡಿತ. ಐದು ವರ್ಷ ಯಾರು ಏನು ಮಾಡುತ್ತಾರೆ ಎಂಬ ಭರವಸೆ ನೋಡಿಯೇ ಮತದಾರರು ಸೂಕ್ತ ಪಕ್ಷಕ್ಕೆ ಮತ ಹಾಕುತ್ತಾರೆ. ನಮ್ಮ ಪ್ರಣಾಳಿಕೆಯಿಂದಾಗಿ ನಮಗೆ ಶೇ.3 ರಷ್ಟು ಹೆಚ್ಚುವರಿ ಮತಗಳು ಬರಲಿವೆ.

ಮೋದಿ, ಅಮಿತ್‌ ಶಾ ಜಾದೂ ನಡೆಯುತ್ತಾ?
      ಇದಕ್ಕೆ ಮೇ 15 ರಂದು ನಿಮಗೆ ಉತ್ತರ ಸಿಗಲಿದೆ ಕಾದು ನೋಡಿ

ಯಾವ ಧೈರ್ಯದ ಮೇಲೆ ಮುಖ್ಯಮಂತ್ರಿಯಾಗ್ತೀನೆ ಅಂತ ಹೇಳುತ್ತೀರಿ?
      ನನಗೆ ದೈವಬಲ, ಜನಬಲ ಇದೆ. ಹೀಗಾಗಿಯೇ ಮೇ 17 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತೇನೆ ಎಂದು ವಿಶ್ವಾಸದಿಂದ ಹೇಳಿದ್ದೇನೆ.

ರಾಜ್ಯದೆಲ್ಲೆಡೆ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗುತ್ತಿದ್ದೀರಿ ಆಯಾಸವಾಗುವುದಿಲ್ಲವಾ?
        ಆಯಾಸ ಎಂಬುದಿಲ್ಲ. ರಾಜ್ಯದ ಬಿಜೆಪಿ ಕಾರ್ಯಕರ್ತರ ಉತ್ಸಾಹ ನೋಡಿದರೆ ಇನ್ನಷ್ಟು ಪ್ರೋತ್ಸಾಹ ಸಿಗುತ್ತಿದೆ. ಅದೇ ಕಾರಣಕ್ಕೆ ಒಂದೇ ಒಂದು ದಿನ ವಿಶ್ರಾಂತಿ ಪಡೆದಿಲ್ಲ. 224 ಕ್ಷೇತ್ರ, 11 ಸಾವಿರ ಕಿ.ಲೋ ಮೀಟರ್‌ 85ದಿನ ಸುತ್ತಿದ್ದೇನೆ. ವಿಧಾನಸೌಧದ ಮೂರನೇ ಮಹಡಿಯಲ್ಲಿ ಮತ್ತೂಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವವರೆಗೂ ನಾನು ವಿರಮಿಸುವುದಿಲ್ಲ.

ನೀವು ಮುಖ್ಯಮಂತ್ರಿಯಾದರೆ ಬಳ್ಳಾರಿ ಗಣಿ ರೆಡ್ಡಿ ಸಹೋದರರು ಸರ್ಕಾರದಲ್ಲಿ ಭಾಗಿಯಾಗುತ್ತಾರಾ?
       ಹಿಂದಿನ ಕಹಿ ಅನುಭವ ಆಧಾರದ ಮೇಲೆ ಎಚ್ಚರಿಕೆ ಹೆಜ್ಜೆ ಇಡಲಾಗುವುದು. ಆ ಸಂದರ್ಭಕ್ಕೆ ಅನುಗುನವಾಗಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.

ಜೆಡಿಎಸ್‌ 25 ಸ್ಥಾನ ಗೆಲ್ಲುವುದಿಲ್ಲ
ನಾನು ಭ್ರಮೆಯಲ್ಲಿಲ್ಲ. ನಾಲ್ಕು ದಶಕಗಳ ರಾಜಕೀಯ ಅನುಭವದ ಆಧಾರದ ಮೇಲೆಯೇ ಹೇಳುತ್ತಿದ್ದೇನೆ. ಬಿಜೆಪಿ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್‌ ಎರಡನೇ ಸ್ಥಾನಕ್ಕೆ ಕುಸಿಯಲಿದೆ. ಜೆಡಿಎಸ್‌ 25 ಸ್ಥಾನ ಗೆಲ್ಲುವುದಿಲ್ಲ. ಹೀಗಾಗಿಯೇ ಆ ಪಕ್ಷದ ಬಗ್ಗೆ ನಾನು ಹೆಚ್ಚು ತಲೆಕಡಿಸಿಕೊಳ್ಳುವುದಿಲ್ಲ. ರಾಜ್ಯದಲ್ಲಿ ಅತಂತ್ರ ಸ್ಥಿತಿ ಬರುವುದಿಲ್ಲ.

– ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next