ಚಿಕ್ಕಮಗಳೂರು: “ವಿಧಾನಸಭಾ ಚುನಾವಣೆಯಲ್ಲಿನ ಚಾಮುಂಡೇಶ್ವರಿ ಕ್ಷೇತ್ರದ ಸೋಲಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಸೇಡು ತೀರಿಸಿಕೊಳ್ಳಲು ಹೊರಟಿದ್ದಾರೆ.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಪಕ್ಷಗಳ ಹೊಂದಾಣಿಕೆ ಕೊರತೆಯೇ ರಾಜ್ಯದಲ್ಲಿ ಬಿಜೆಪಿ ಕನಿಷ್ಠ 22 ಸ್ಥಾನಗಳನ್ನು ಗೆಲ್ಲಲು ಕಾರಣವಾಗುತ್ತದೆ’ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಗುರುವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡ-ಸಿದ್ದರಾಮಯ್ಯ ಒಟ್ಟಿಗೆ ಚುನಾವಣಾ ಪ್ರಚಾರ ನಡೆಸುತ್ತಿರುವ ಕುರಿತು ಪ್ರತಿಕ್ರಿಯಿಸಿ, ಹೆಲಿಕಾಪ್ಟರ್‌ನಲ್ಲಿ ಒಟ್ಟಿಗೆ ಕುಳಿತು ಹೋದಾಕ್ಷಣ ಎಲ್ಲವೂ ಸರಿಯಾಗಿದೆ ಎಂದರ್ಥವಲ್ಲ. ಹೆಲಿಕಾಪ್ಟರ್‌ನಿಂದ ಇಳಿದ ಕೂಡಲೇ ಇಬ್ಬರೂ ಬೇರೆಯಾಗುತ್ತಾರೆ ಎಂದು ಟೀಕಿಸಿದರು.
ಮಂಡ್ಯ, ಮೈಸೂರಿನಲ್ಲಿ ಎರಡೂ ಪಕ್ಷಗಳ ಮುಖಂಡರ ಹೇಳಿಕೆ ಗಮನಿಸಿದರೆ ಅವರಲ್ಲಿ ಎಲ್ಲವೂ ಸರಿಯಿಲ್ಲಎಂಬುದು ತಿಳಿಯುತ್ತದೆ. ಪಕ್ಷಗಳ ಮುಖಂಡರು ಒಂದಾದರೂ ಎರಡೂ ಪಕ್ಷಗಳ ಕಾರ್ಯಕರ್ತರು ಒಂದಾಗಿಲ್ಲ. ಅವರ ಹೊಂದಾಣಿಕೆಯ ಕೊರತೆಯೇ ಬಿಜೆಪಿ ಗೆಲುವಿಗೆ ಸಹಕಾರಿಯಾಗಿದೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಸೋಲುವ ಮುನ್ಸೂಚನೆ ಕುಮಾರಸ್ವಾಮಿ ಅವರಿಗೆ ಸಿಕ್ಕಿರುವುದರಿಂದ ಹತಾಶರಾಗಿ ಏನೇನೊ ಹೇಳಿಕೆ ನೀಡಲಾರಂಭಿಸಿದ್ದಾರೆ. ಅದಕ್ಕಾಗಿಯೇ ಮಂಡ್ಯ ಕ್ಷೇತ್ರದಲ್ಲಿ ಮಾಧ್ಯಮದವರ ಮೇಲೂ ದಬ್ಟಾಳಿಕೆ ನಡೆಸಿದ್ದಾರೆ. ನಮ್ಮ ಬಗ್ಗೆ ಪ್ರಚಾರ ಮಾಡದಿದ್ದರೆ ನಿಮ್ಮ ಮೇಲೆ ಜನತೆ ಹಲ್ಲೆ ನಡೆಸಬಹುದು.ಆಗ ನನ್ನನ್ನು ದೂರಬೇಡಿ ಎಂದು ಹೇಳುವ ಮೂಲಕ ಮುಖ್ಯಮಂತ್ರಿಗಳೇ ಜನರನ್ನು ಮಾಧ್ಯಮದವರ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡಿದ್ದಾರೆ. ಇದನ್ನು ಬಿಜೆಪಿ ಖಂಡಿಸುತ್ತದೆ ಎಂದರು.
ಮಂಡ್ಯದಲ್ಲಿ ಸಿಎಂ ಕುಮಾರಸ್ವಾಮಿ,ಸುಮಲತಾ ಬಗ್ಗೆ ಹಗುರವಾಗಿ ಮಾತನಾಡಲಾರಂಭಿಸಿದ್ದಾರೆ. ಮಂಡ್ಯಕ್ಕೆ ಅಂಬರೀಶ್ ಕೊಡುಗೆ ಏನೆಂದು ಕೇಳಲಾರಂಭಿಸಿದ್ದಾರೆ. ಮಂಡ್ಯದಲ್ಲಿ ಸುಮಲತಾ ಗೆಲುವು ನಿಶ್ಚಿತ. ಈ ಕಾರಣಕ್ಕೆ ಸಿಎಂ ಹತಾಶರಾಗಿದ್ದಾರೆ.
– ಬಿ.ಎಸ್. ಯಡಿಯೂರಪ್ಪ,ಮಾಜಿ ಸಿಎಂ