ಬೆಂಗಳೂರು: ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ದಿಢೀರ್ ಭೇಟಿ ಮಾಡಿ ಚರ್ಚೆ ನಡೆಸಿದ್ದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಪುತ್ರ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಜತೆ ಶಿವಮೊಗ್ಗ ಲೋಕಸಭೆ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಭೇಟಿ ಮಾಡಿ ಚರ್ಚಿಸಿರುವುದಾಗಿ ಯಡಿಯೂರಪ್ಪ ಸಮಜಾಯಿಷಿ ನೀಡಿದ್ದು, ಇದಕ್ಕೆ ಡಿ.ಕೆ. ಶಿವಕುಮಾರ್ ದನಿಗೂಡಿಸಿದ್ದರೂ ಈ ಭೇಟಿ ನಾನಾ ಚರ್ಚೆಗಳಿಗೆ ಗ್ರಾಸವಾಗಿದೆ.
ಬೆಳಗಾವಿ-ಶಿವಮೊಗ್ಗ ಜಿಲ್ಲೆಗಳ ಅಭಿವೃದ್ಧಿ ವಿಚಾರ ಚರ್ಚೆಯ ನಂತರ ಇಬ್ಬರೇ ಸುಮಾರು ಇಪ್ಪತ್ತು ನಿಮಿಷಗಳ ಕಾಲ ಪ್ರತ್ಯೇಕವಾಗಿ ಮಾತುಕತೆ ನಡೆಸಿರುವುದು ವಿಶೇಷ. ಇದೇ ಸಂದರ್ಭದಲ್ಲಿ ರಾಜ್ಯಸಭೆ ಸದಸ್ಯ ಪ್ರಭಾಕರ ಕೋರೆ ಅವರು ಡಿ.ಕೆ.ಶಿವಕುಮಾರ್ ಅವರಿಗೆ “ಬುಕ್‌ಲೆಟ್’ ಒಂದನ್ನು ಕೊಟ್ಟಿದ್ದು, ಅದರಲ್ಲಿ ಏನಿತ್ತು ಎಂಬುದು ಗುಟ್ಟಾಗಿದೆ.
ಡಿ.ಕೆ. ಶಿವಕುಮಾರ್ ಅವರ ಸರ್ಕಾರಿ ನಿವಾಸಕ್ಕೆ ಶಿವಮೊಗ್ಗ ಹಾಗೂ ಬೆಳಗಾವಿಯ ಬಿಜೆಪಿ ಶಾಸಕರ ಜೊತೆ ಯಡಿಯೂರಪ್ಪ ಭೇಟಿ ನೀಡಿ ಅಚ್ಚರಿ ಮೂಡಿಸಿದರು. ತಮ್ಮ ನಿವಾಸಕ್ಕೆ ಯಡಿಯೂರಪ್ಪ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ತೆಲಂಗಾಣ ಚುನಾವಣೆ ಪ್ರಚಾರಕ್ಕೆ ತೆರಳಬೇಕಿದ್ದ ಶಿವಕುಮಾರ್ ಹೈದರಾಬಾದ್‌ಗೆ ತೆರಳುವ ಕಾರ್ಯಕ್ರಮ ರದ್ದು ಪಡಿಸಿದರು. ಯಡಿಯೂರಪ್ಪ ಆಗಮಿಸುತ್ತಿದ್ದಂತೆ ಬಾಗಿಲು ಬಳಿಯೇ ಬಂದು ಹೂ ಗುತ್ಛ ನೀಡಿ ಸ್ವಾಗತಿಸಿ ಆತ್ಮೀಯತೆಯಿಂದ ಬರಮಾಡಿಕೊಂಡರು.
ಬಿಜೆಪಿ ರಾಷ್ಟ್ರೀಯ ನಾಯಕರು ಬೆಂಗಳೂರಿನ ಪ್ರಸಿದ್ಧ ವೈದ್ಯರೊಬ್ಬರ ಪತಿ ಹಾಗೂ ಕೇಂದ್ರದ ಪ್ರಭಾವಿ ಸಚಿವರೊಬ್ಬರ ಜತೆ ಉದ್ಯಮದ ನಂಟು ಹೊಂದಿರುವವರ ಮೂಲಕ ಡಿ.ಕೆ.ಶಿವಕುಮಾರ್ ಅವರನ್ನು ಬಿಜೆಪಿಗೆ ಸೆಳೆಯಲು ಪ್ರಯತ್ನ ನಡೆಸಿದ್ದಾರೆ. ಪಕ್ಷದ ರಾಷ್ಟ್ರೀಯ ನಾಯಕರ ಸೂಚನೆ ಮೇರೆಗೆ ಯಡಿಯೂರಪ್ಪ ಅವರು ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದರು ಎಂಬ ವದಂತಿ ಈಗ ಹರಿದಾಡುತ್ತಿದೆ. ಸಭೆಯ ನಂತರ ಮಾತನಾಡಿದ ಯಡಿಯೂರಪ್ಪ, “ಡಿ.ಕೆ.ಶಿವಕುಮಾರ್ ನನಗೆ ಶೇ.101ರಷ್ಟು ಆತ್ಮೀಯ ಸ್ನೇಹಿತ’ ಎಂದು ಮೆಚ್ಚುಗೆಯ ಮಾತುಗಳನ್ನಾಡಿರುವುದು ಕಾಂಗ್ರೆಸ್ ನಾಯಕರ ಹುಬ್ಬೇರುವಂತೆ ಮಾಡಿದೆ.
ಅವರ ಮನೆಗೆ ಇವರು, ಇವರ ಮನೆಗೆ ಅವರು ಬರುವುದು ವಿಷಯ ಅಲ್ಲ. ನಮ್ಮ ರಾಜಕೀಯ ಹೇಳಿಕೆಗಳು ಸದನಕ್ಕೆ ಮಾತ್ರ ಸೀಮಿತ. ಅವರು ಖಳನಾಯಕ ಅಂದಿದ್ದು ಈಗ ಅನಗತ್ಯ. ರಾಜಕೀಯದ ಮಾತಾಡಿರುವುದನ್ನು ಮಾಧ್ಯಮಗಳ ಮುಂದೆ ಹೇಳಲು ಆಗುತ್ತದೆಯಾ?
– ಬಿ.ಎಸ್.ಯಡಿಯೂರಪ್ಪ, ಪ್ರತಿಪಕ್ಷದ ನಾಯಕ
ಯಡಿಯೂರಪ್ಪ ಆತ್ಮೀಯ ಸ್ನೇಹಿತರು. ಅವರು ಅಧಿಕಾರದಲ್ಲಿದ್ದಾಗ ನಮಗೆ ಹಲವು ಕೆಲಸ ಮಾಡಿಕೊಟ್ಟಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ನಾವು ಯಾರೂ ರಾಜಕಾರಣ ಮಾಡುವುದಿಲ್ಲ. ಒತ್ತಡ ಇದ್ದರೂ ಹೈದರಾಬಾದ್‌ಗೆ ಹೋಗುವುದನ್ನು ಬಿಟ್ಟು ಅವರೊಂದಿಗೆ ಸಭೆ ಮಾಡಿದ್ದೇನೆ.
– ಡಿ.ಕೆ.ಶಿವಕುಮಾರ್, ಜಲ ಸಂಪನ್ಮೂಲ ಸಚಿವ