ರಬಕವಿ-ಬನಹಟ್ಟಿ: ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಮಹಿಳೆಯರ ಬಗ್ಗೆ ಬಹಳಷ್ಟು ಹಗುರವಾಗಿ ಮಾತನಾಡಿರುವುದು ಖಂಡನೀಯವಾಗಿದೆ. ಆದ್ದರಿಂದ ಅವರು ಆದಷ್ಟು ಬೇಗನೆ ಮಹಿಳೆಯರಲ್ಲಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಯನ್ನು ಕೈಗೊಂಡು ಚಿತ್ತಾಪುರ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ಮಹಿಳಾ ಕಾರ್ಯಕಾರಿಣಿ ಮಂಡಳದ ಕಾರ್ಯದರ್ಶಿ ವಿಜಯಲಕ್ಷ್ಮಿ ಹುಕುಮನಾಳ ತಿಳಿಸಿದರು.
ಅವರು ಶನಿವಾರ ಸ್ಥಳೀಯ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷೆ ಸವಿತಾ ಹೊಸೂರ ಮಾತನಾಡಿ, ಅದೇ ರೀತಿಯಾಗಿ ಕಾಂಗ್ರೆಸ್ ಮುಖಂಡ ಆದಿರಂಜನ್ ಚೌಧರಿ ಕೂಡಾ ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಗ್ಗೆ ಕೂಡಾ ಹಗುರವಾಗಿ ಮಾತನಾಡಿರುವುದು ಖಂಡನೀಯವಾಗಿದೆ. ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿರುವ ಕಾಂಗ್ರೆಸ್ ಪಕ್ಷದಲ್ಲಿಯೂ ಕೂಡಾ ಅನೇಕ ಮಹಿಳೆಯರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅವರಿಗೆ ನೀವು ಏನೆಂದು ಕರೆಯುವಿರಿ ಎಂದು ಪ್ರಶ್ನೆ ಮಾಡಿದರು.
ಆದ್ದರಿಂದ ಕಾಂಗ್ರೆಸ್ ಪಕ್ಷದ ನಾಯಕರು ಮಹಿಳೆಯರ ಕುರಿತು ಹಗುರವಾಗಿ ಮಾತನಾಡುವುದನ್ನು ಬಿಡಬೇಕು. ಪ್ರಿಯಾಂಕ್ ಖರ್ಗೆ ಆದಷ್ಟು ಬೇಗನೆ ಕ್ಷಮೆ ಕೇಳಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆಯನ್ನು ಕೈಗೊಳ್ಳಲಾಗುವುದು ಎಂದು ಸವಿತಾ ಹೊಸೂರ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆಯ ಉಪಾಧ್ಯಕ್ಷೆ ವಿದ್ಯಾ ಧಬಾಡಿ, ಸುವರ್ಣಾ ಕೊಪ್ಪದ, ಮೀನಾಕ್ಷಿ ಸವದಿ, ಗೌರಿ ಮಿಳ್ಳಿ, ಜಯಶ್ರೀ ಬಾಗೇವಾಡಿ, ದುರ್ಗವ್ವ ಹರಿಜನ, ಭಾರತಿ ಭಿಲವಡಿ, ಸುವರ್ಣಾ ಸಜ್ಜನವರ, ಕಮಲಾಕ್ಷಿ ಯಾದವಾಡ. ಶಶಿಕಲಾ ಸಾರವಾಡ, ಸುವರ್ಣಾ ಆಸಂಗಿ ಸೇರಿದಂತೆ ಅನೇಕರು ಇದ್ದರು.