Advertisement

ಕಣ್ಣೀರು ಸುರಿಸಿ ಜನರ ನಂಬಿಕೆಯೊಂದಿಗೆ ಆಡುವ ಕಲೆ ಜೆಡಿಎಸ್ ಗೆ ಕರಗತವಾಗಿದೆ: ಬಿಜೆಪಿ

12:58 PM Dec 29, 2022 | Team Udayavani |

ಬೆಂಗಳೂರು: ಹಳೆ ಮೈಸೂರು ಭಾಗದ ಮೇಲೆ ಕಣ್ಣಿಟ್ಟಿರುವ ಭಾರತೀಯ ಜನತಾ ಪಕ್ಷವು ಮಂಡ್ಯದಲ್ಲಿ ಸಮಾವೇಶ ಮಾಡಹೊರಟಿದೆ. ಅಲ್ಲದೆ ಈ ಭಾಗದಲ್ಲಿ ಉತ್ತಮ ಬಲ ಹೊಂದಿರುವ ಜೆಡಿಎಸ್ ವಿರುದ್ಧವೂ ಇದೀಗ ಟೀಕೆ ಆರಂಭಿಸಿದೆ.

Advertisement

ಜೆಡಿಎಸ್ ಪಕ್ಷದ ಪಂಚರತ್ನ ಪ್ರಮೋಶನ್ ಯಾತ್ರೆ ಎಂದರೆ ಜನಪರ ಅಭಿವೃದ್ಧಿಯ ಯಾತ್ರೆಯಲ್ಲ.‌ ಅದು ಅವರ ಕುಟುಂಬದ 5 (ಪಂಚ) ಜನರನ್ನು ಪ್ರಮೋಶನ್ ಮಾಡುವ ಯಾತ್ರೆ. ಇದು ಜನರಿಗೆ ಅರ್ಥವಾದ ಕಾರಣಕ್ಕೆ ಪಂಚರತ್ನ ಯಾತ್ರೆ, ಪಂಚರ್ ಆಗಿದೆ. ಪಂಚರ್ ರತ್ನ ಪ್ರಮೋಶನ್ ಯಾತ್ರೆ ಎಂಬುದು ಹಳೆ ಮೈಸೂರಿನ ಅಭಿವೃದ್ಧಿಗೆ ಹಮ್ಮಿಕೊಂಡ ಯಾತ್ರೆ ಅಲ್ಲ. ಎಚ್ ಡಿ ಕುಮಾರಸ್ವಾಮಿ, ನಿಖಿಲ್ ಕುಮಾರ್, ರೇವಣ್ಣ, ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಹೀಗೆ ಜೆಡಿಎಸ್‌ ನ 5 ಜನರನ್ನು ಪ್ರಮೋಶನ್ ಮಾಡಲು ಆಯೋಜಿಸಿದ ಯಾತ್ರೆ ಎಂದು ಬಿಜೆಪಿ ಟ್ವಿಟ್ಟರ್ ನಲ್ಲಿ ಟೀಕೆ ಮಾಡಿದೆ.

ಜನರ ಒಳ್ಳೆಯತನವನ್ನು ದುರುಪಯೋಗ ಪಡಿಸಿಕೊಳ್ಳುವುದರಲ್ಲಿ ಕುಮಾರಸ್ವಾಮಿ ಎತ್ತಿದ ಕೈ. ರಾಜಕೀಯವನ್ನು ಫ್ಯಾಮಿಲಿ ಬಿಸ್ನೆಸ್‌ ಮಾಡಿಕೊಂಡಿರುವ ಜೆಡಿಎಸ್ ಲಾಭಕ್ಕಾಗಿ ಏನು ಬೇಕಾದರೂ ಮಾಡುತ್ತದೆ ಎಂಬುದು ಈಗಾಗಲೇ ಸಾಬೀತುಪಡಿಸಿದೆ. ಇವರ ಕಪಟ ಬುದ್ಧಿಗೆ ಸಿಲುಕಿ ತತ್ತರಿಸುತ್ತಿರುವವರು ಮಂಡ್ಯ ಜನತೆ. ಮುಗ್ದ ಮನಸ್ಸಿನ ಮಂಡ್ಯ ಜನರ ಒಳ್ಳೆಯತನವನ್ನೇ ದಡ್ಡತನವೆಂದು ತಿಳಿದುಕೊಂಡ ಕುಮಾರಸ್ವಾಮಿ ಇಡೀ ಜಿಲ್ಲೆಯಲ್ಲಿ ಮಾಡಿದ್ದು ಹಗಲು ದರೋಡೆ. 2018ರಲ್ಲಿ ಏಳಕ್ಕೆ ಏಳೂ ಕ್ಷೇತ್ರಗಳನ್ನು ಗೆಲ್ಲಿಸಿಕೊಟ್ಟ ಮಂಡ್ಯದ ಜನತೆಗೆ ಜೆಡಿಎಸ್ ಹೇಳಿ ಕೊಳ್ಳುವುದಕ್ಕಾದರೂ ಒಂದು ಒಳ್ಳೆಯ ಕೆಲಸ ಮಾಡಲಿಲ್ಲ. ಅನ್ಯಾಯ ಮತ್ತು ನಂಬಿಕೆ ದ್ರೋಹವನ್ನು ಮಂಡ್ಯದ ಜನರು ಎಂದಿಗೂ ಸಹಿಸರು. ಹಾಗಾಗಿ 2019ರ ಉಪಚುನಾವಣೆಯಲ್ಲಿ ಕೆ. ಆರ್.ಪೇಟೆಯಲ್ಲಿ ಜೆಡಿಎಸ್ ಸೋಲಿಸಿ ಬಿಜೆಪಿಗೆ ಗೆಲುವಿನ ಮಾಲೆ ಹಾಕಿದರು. ಎರಡೂ ಪಕ್ಷಗಳ ಕೆಲಸಗಳನ್ನು ಜಿಲ್ಲೆಯ ಇತರೆ ಆರೂ ಕ್ಷೇತ್ರಗಳ ಮತದಾರರು ಪಟ್ಟಿ ಮಾಡಿಟ್ಟುಕೊಂಡಿದ್ದಾರೆ ಎಂದಿದೆ.

ಹಳೇ ಮೈಸೂರು ಭಾಗದ ಮೇಲೆಯೇ ಜೆಡಿಎಸ್ ಗೆ ಯಾಕಿಷ್ಟು ಢೋಂಗಿ ಅಕ್ಕರೆ ಎಂದರೆ ಈ ಭಾಗವೇ ಆ ಪಕ್ಷದ ಪಾಲಿಗೆ ಕರೆಯುವ ಹಸು. ಕಣ್ಣೀರು ಸುರಿಸಿ ಜನರ ನಂಬಿಕೆ ಜತೆ ಆಡುವ ಕಲೆ ಪಕ್ಷಕ್ಕೆ ಕರಗತವಾಗಿದೆ. ಯೋಜನೆಗಳ ಹೆಸರು ಹೇಳಿ ಹಣ ಮಾಡಿಕೊಳ್ಳುತ್ತಿರುವುದರಿಂದಲೇ ಅಭಿವೃದ್ಧಿ ಎಂಬುದು ಈ ಭಾಗಕ್ಕೆ ಮರಿಚೀಕೆ. ಆದರೆ, ಬಿಜೆಪಿಗೆ ಜನ ಮತ್ತು ಕ್ಷೇತ್ರದ ಅಭಿವೃದ್ಧಿಯೇ ಮುಖ್ಯ. ಹಳೇ ಮೈಸೂರು ಭಾಗದಲ್ಲಿ ಕೆಲವೇ ಕ್ಷೇತ್ರಗಳಲ್ಲಿ ಗೆದ್ದರೂ ಜೆಡಿಎಸ್ ಗಿಂತ ಗಮನಾರ್ಹ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಗ್ರಾಮೀಣ ಭಾಗದಲ್ಲಿ ಬಿಜೆಪಿ ಶಾಸಕರು ಮಾಡಿರುವ ಅಭಿವೃದ್ಧಿಗೆ ಜನ ಮೆಚ್ಚಿದ್ದಾರೆ ಎಂದು ಬಿಜೆಪಿ ಹೇಳಿಕೊಂಡಿದೆ.

ಇದನ್ನೂ ಓದಿ:ದ.ಆಫ್ರಿಕಾ ವಿರುದ್ಧ ಸರಣಿ ಗೆದ್ದ ಆಸೀಸ್; ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆ ಹತ್ತಿರವಾದ ಭಾರತ

Advertisement

ಭಾಗದ ಪ್ರಮುಖ ಸಮುದಾಯಗಳು ಈಗ ಜೆಡಿಎಸ್ ವಿರುದ್ಧ ತಿರುಗಿಬಿದ್ದಿವೆ ಎಂಬುದನ್ನು ಕುಮಾರಸ್ವಾಮಿ ಅರ್ಥ ಮಾಡಿಕೊಂಡಿದ್ದಾರೆ. ಹಾಗಾಗಿಯೇ, ತುಷ್ಟೀಕರಣದ ರಾಜಕಾರಣಕ್ಕೆ ಕೈ ಹಾಕಿದ್ದಾರೆ. ತುಷ್ಟೀಕರಣ ಯಾವ ಮಟ್ಟದಲ್ಲಿದೆ ಎಂಬುದಕ್ಕೆ ಪಂಚರತ್ನ ಯಾತ್ರೆಯಲ್ಲಿ ಅವರನ್ನು ಹೊರುವ ರಥದ ಹೆಸರೇ ಸಾಕ್ಷಿ. ತಾನು ಮಾಡಿದ ದ್ರೋಹದ ಫಲವಾಗಿ ಮಂಡ್ಯದ ಜನತೆ ಮುಂದಿನ ಚುನಾವಣೆಯಲ್ಲಿ ಕೈ ಹಿಡಿಯಲ್ಲ ಎಂಬುದನ್ನು ಕುಮಾರಸ್ವಾಮಿ ಅರ್ಥ ಮಾಡಿಕೊಂಡಿದ್ದಾರೆ. ಜಾತ್ಯಾತೀತ ಹೆಸರಿನಲ್ಲಿ ಜಾತಿ ರಾಜಕಾರಣ ಮಾಡುವ ಆಟವನ್ನು ಹಳೇ ಮೈಸೂರು ಭಾಗದ ಜನ ಅರಿತಿದ್ದಾರೆ, ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠವನ್ನೂ ಕಲಿಸುತ್ತಾರೆ ಎಂದು ಜೆಡಿಎಸ್ ವಿರುದ್ಧ ಬಿಜೆಪಿ ಟೀಕೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next