Advertisement

ಉಪ ಚುನಾವಣೆಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶಿಸಲಿ: ಶ್ರೀರಾಮುಲು

12:20 PM Nov 03, 2019 | Sriram |

ಮಸ್ಕಿ: ಮಸ್ಕಿ ಕ್ಷೇತ್ರದಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಠೇವಣಿ ಕಳೆದುಕೊಳ್ಳುವಂತೆ ಬಿಜೆಪಿ ಶಕ್ತಿ ಪ್ರದರ್ಶನವಾಗಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ಹೇಳಿದರು.

Advertisement

ಪಟ್ಟಣದ ಭ್ರಮರಾಂಬ ದೇವಸ್ಥಾನದ ಆವರಣದಲ್ಲಿ ಶನಿವಾರ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮುಂಬರುವ ಉಪ ಚುನಾವಣೆಯಲ್ಲಿ ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ ಬಿಜೆಪಿಯಿಂದ ಸ್ಪರ್ಧಿಸುವರು ಎಂಬುದನ್ನು ಖಚಿತಪಡಿಸಿದ ಅವರು, ಶಾಸಕ ರಾಜೂಗೌಡ, ಪ್ರತಾಪಗೌಡ ಪಾಟೀಲ, ಆರ್‌.ಬಸನಗೌಡ ಹಾಗೂ ತಾವೂ ಸೇರಿದಂತೆ ಎಲ್ಲರೂ ಒಂದಾಗಬೇಕಾಗಿದೆ ಎಂದರು.

ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಮಾತನಾಡಿ, ವಾಲ್ಮೀಕಿ ನಾಯಕ ಸಮಾಜದ ಜನಸಂಖ್ಯೆ ಆದರಿಸಿ ಮೀಸಲು ಪ್ರಮಾಣವನ್ನು ಶೇ.7.5ಕ್ಕೆ ಹೆಚ್ಚಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.

ಸಂಸದ ಸಂಗಣ್ಣ ಕರಡಿ ಮಾತನಾಡಿ, ತಮ್ಮ ಗೆಲುವಿಗೆ ಮಸ್ಕಿ ಕ್ಷೇತ್ರದ ಮತದಾರರ ಪಾತ್ರ ಪ್ರಮುಖವಾಗಿದ್ದು, ಅವರ ಋಣ ಮರೆಯುವುದಿಲ್ಲ ಎಂದರು.

Advertisement

ಶಾಸಕ ರಾಜೂಗೌಡ ಮಾತನಾಡಿ, ಜಗತ್ತಿನಲ್ಲಿ ಅತ್ಯಂತ ಪವಿತ್ರವಾದ ಗ್ರಂಥ ರಾಮಾಯಣ. ಅಂತಹ ಗ್ರಂಥವನ್ನು ಕೊಟ್ಟವರು ನಾಯಕ ಸಮಾಜದ ಗುರು ಶ್ರೀ ಮಹರ್ಷಿ ವಾಲ್ಮೀಕಿ ಎಂಬುದೇ ಸಮಾಜಕ್ಕೆ ಹೆಮ್ಮೆ. ಡಿಸೆಂಬರ 3ರ ಬಳಗೆ ನಾಯಕ ಸಮಾಜಕ್ಕೆ ಶೇ.7.5 ಮೀಸಲು ನೀಡಬೇಕೆಂಬುದು ಸಮಾಜದ ಆಗ್ರಹವಾಗಿದ್ದು, ಸಮಾಜದ ಹಿತಕ್ಕಾಗಿ ರಾಜೀನಾಮೆಗೂ ಸಿದ್ಧ ಎಂದು ಘೋಷಿಸಿದರು.

ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ ಮಾತನಾಡಿ, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಸಮಾಜ ಕಟ್ಟುವ ಕೆಲಸದಲ್ಲಿ ಎಲ್ಲರೂ ಕೈ ಜೋಡಿಸಬೇಕೆಂದು ಮನವಿ ಮಾಡಿದರು. ಕ್ಷೇತ್ರದ ಹಾಗೂ ಸಮಾಜದ ಅಭಿವೃದ್ಧಿಗಾಗಿ ತಾವು ಪ್ರಾಮಾಣಿಕ ಪ್ರಯತ್ನ ಮಾಡಿರುವುದಾಗಿ ತಿಳಿಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಆರ್‌. ಬಸನಗೌಡ ತುರುವಿಹಾಳ ಮಾತನಾಡಿ, ಸಮಾಜ ರಾಜಕೀಯ, ಆರ್ಥಿಕ, ಸಾಮಾಜಿಕವಾಗಿ ಅಭಿವೃದ್ಧಿಯಾಗಬೇಕಾದರೆ ಶಿಕ್ಷಣ ಒಂದೇ ಮಾರ್ಗ. ಸಮಾಜದವರು ಶಿಕ್ಷಣಕ್ಕೆ ಪ್ರಾಧಾನ್ಯತೆ ನೀಡಬೇಕೆಂದು ಮನವಿ ಮಾಡಿದರು.

ಗೊಲ್ಲಪಲ್ಲಿ ವಾಲ್ಮೀಕಿ ಮಠದ ವರದಾನಂದ ಶ್ರೀಗಳು ಮಾತನಾಡಿದರು. ಗಚ್ಚಿನ ಮಠದ ಶ್ರೀ ವರರುದ್ರಮುನಿ ಶಿವಾಚಾರ್ಯ ಶ್ರೀಗಳು, ಮಾಜಿ ಶಾಸಕರಾದ ಗಂಗಾದರ ನಾಯಕ, ತಿಪ್ಪರಾಜ ಹವಾಲ್ದಾರ, ವಾಲ್ಮೀಕಿ ಮಹಾಸಭಾ ರಾಜ್ಯ ಉಪಾಧ್ಯಕ್ಷ ವಿ.ಆರ್‌. ಪಾಟೀಲ, ಜಿಲ್ಲಾ ವಾಲ್ಮೀಕಿ ಮಹಾಸಭಾ ಅಧ್ಯಕ್ಷ ವೈ.ಬಿ. ಪಾಟೀಲ, ಮಹಾದೇವಪ್ಪಗೌಡ, ಗುಂಡಪ್ಪ ನಾಯಕ, ತಿಮ್ಮಯ್ಯ ನಾಯಕ, ಶೇಖರಪ್ಪ ತಳವಾರ, ಶಿವನಗೌಡ ಗೊರೇಬಾಳ, ಬಸನಗೌಡ ಪೊಲೀಸ ಪಾಟೀಲ, ರಾಜಶೇಖರ ಪಾಟೀಲ, ಶೇಖರಗೌಡ ಕಾಟಗಲ್‌ ಅನೇಕ ಮುಖಂಡರು ಉಪಸ್ಥಿತರಿದ್ದರು. ಮಸ್ಕಿ ಸೇರಿ ವಿವಿಧ ಗ್ರಾಮಗಳ ಸಾವಿರಾರು ಜನ ಭಾಗವಹಿಸಿದ್ದರು.

ಆರ್‌.ಬಸನಗೌಡ ತುರುವಿಹಾಳ ನನ್ನ ಸಹೋದರನಿದ್ದಂತೆ. ಪ್ರತಾಪಗೌಡ ಪಾಟೀಲ ಹಾಗೂ ಆರ್‌.ಬಸನಗೌಡ ಇಬ್ಬರನ್ನೂ ನಾವು ಉಳಿಸಿಕೊಳ್ಳಬೇಕು, ಇಬ್ಬರೂ ಒಂದಾಗಬೇಕು. ತುರುವಿಹಾಳ ಬಸನಗೌಡ ಅವರನ್ನು ಯಾವುದೇ ಕಾರಣಕ್ಕೂ ಪಕ್ಷ ಕಡೆಗಣಿಸುವುದಿಲ್ಲ. ಅವರಿಗೆ ಸೂಕ್ತ ಸ್ಥಾನಮಾನ ಸಿಗುವಂತೆ ಮಾಡುವುದು ನನ್ನ ಜವಾಬ್ದಾರಿ ಆಗಿದೆ.
-ಬಿ. ಶ್ರೀರಾಮುಲು, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next