ಕೋಲ್ಕತ :
ಮುಂದಿನ ತಿಂಗಳು ಫೆ.2ರಂದು ಉತ್ತರ 24 ಪರಗಣದ ಠಾಕೂರ್ ನಗರದಲ್ಲಿ ನಡೆಸುವುದೆಂದು ಯೋಚಿಸಲಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಬೃಹತ್ ರಾಲಿಯನ್ನು ಇದೀಗ ಇದೇ ತಾಣಕ್ಕೆ ಸಮೀಪದ ಬೃಹತ್ ಮೈದಾನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಮಮತಾ ಬ್ಯಾನರ್ಜಿ ಅವರ ಟಿಎಂಸಿ ಜತೆಗಿನ ಮುಸುಕಿನೊಳಗಿನ ಗುದ್ದಾಟವೇ ಇದಕ್ಕೆ ಕಾರಣವೆಂದು ಗೊತ್ತಾಗಿದೆ.
ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಜನವರಿ 28ರಿಂದ ಫೆ.5ರ ವರೆಗಿನ ಅವಧಿಗೆ ಧಾರ್ಮಿಕ ಕಾರ್ಯಕ್ರಮ ನಡೆಸುವ ಸಲುವಾಗಿ ಉತ್ತರ 24 ಪರಗಣದ ಠಾಕೂರ್ ನಗರದ ತಾಣವನ್ನು ಈ ಮೊದಲೇ ಪಡೆದುಕೊಂಡಿರುವುದೇ ಮೋದಿ ರಾಲಿ ತಾಣ ಬದಲಾವಣೆಗೆ ಕಾರಣವಾಗಿದೆ.
ಮೇಲಾಗಿ ಈ ತಾಣವು ಭದ್ರತಾ ದೃಷ್ಟಿಯಿಂದ ಅನುಕೂಲಕರವಾಗಿಲ್ಲ; ಹೊಸ ತಾಣವು ಬೃಹತ್ ಸ್ಥಳಾವಕಾಶ ಹೊಂದಿರುವುದರಿಂದ ಮೋದಿ ಬೃಹತ್ ರಾಲಿಗೆ ಸೂಕ್ತವಾಗಿದೆ ಎಂದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ.
ನಮ್ಮ ಒಂದಲ್ಲ ಒಂದು ಸಾರ್ವಜನಿಕ ಕಾರ್ಯಕ್ರಮಕ್ಕೆ ಟಿಎಂಸಿ ತಡೆಯೊಡ್ಡುತ್ತಿರುವುದಕ್ಕೆ ಇದು ಕೂಡ ಒಂದು ತಾಜಾ ಉದಾಹರಣೆಯಾಗಿದೆ ಎಂದು ಘೋಷ್ ಹೇಳಿದ್ದಾರೆ.