Advertisement

ಪಶ್ಚಿಮ ಬಂಗಾಲ ಪೊಲೀಸರನ್ನು ನಾವು ನಂಬಲ್ಲ; CRPF ನಿಯೋಜಿಸಿ: ಬಿಜೆಪಿ

06:05 AM Mar 12, 2019 | Team Udayavani |

ಕೋಲ್ಕತ : ಭಾರತೀಯ ಜನತಾ ಪಕ್ಷ ಇಂದು ಮಂಗಳವಾರ ಚುನಾವಣಾ ಆಯೋಗದ ಉನ್ನತ ಅಧಿಕಾರಿಗಳನ್ನು ಭೇಟಿಯಾಗಿ ಲೋಕಸಭಾ ಚುನಾವಣೆಯ ಉಸ್ತುವಾರಿಗೆ ಪಶ್ಚಿಮ ಬಂಗಾಲದಲ್ಲಿ  ಕೇಂದ್ರದ ಪೊಲೀಸ್‌ ಪಡೆಯನ್ನು ಬಳಸಬೇಕೆಂದು ಆಗ್ರಹಿಸಲಿದೆ.

Advertisement

ತೃಣಮೂಲ ಕಾಂಗ್ರೆಸ್‌ ಸರಕಾರದ ಕೈಗೊಂಬೆಯಂತೆ ವರ್ತಿಸುವ ಪಶ್ಚಿಮ ಬಂಗಾಲ ಪೊಲೀಸರನ್ನು ನಾವು ನಂಬುವುದಿಲ್ಲ; ಆದುದರಿಂದ ಲೋಕಸಭಾ ಚುನಾವಣೆಯ ಉಸ್ತುವಾರಿಗೆ ಕೇಂದ್ರ ಪಡೆಯನ್ನು ಬಳಸಬೇಕು ಎಂದು ಬಿಜೆಪಿ ಇಂದು ಚುನಾವಣಾ ಆಯೋಗಕ್ಕೆ ಹೇಳಲಿದೆ ಎಂದು ವರದಿಗಳು ತಿಳಿಸಿವೆ. ಚುನಾವಣಾ ಆಯೋಗದ ಅಧಿಕಾರಿಗಳೊಂದಿಗಿನ ಬಿಜೆಪಿ ಭೇಟಿಗೆ ಇಂದು ಸಂಜೆ 5 ಗಂಟೆಗೆ ಸಮಯ ನಿಗದಿಯಾಗಿರುವುದಾಗಿ ಗೊತ್ತಾಗಿದೆ. 

ನಿನ್ನೆ ಸೋಮವಾರ ಕೂಡ ಬಿಜೆಪಿ, ಚುನಾವಣಾ ಆಯೋಗಕ್ಕೆ ದೂರು ನೀಡಿ ತೃಣಮೂಲ ಕಾಂಗ್ರೆಸ್‌ ಮತದಾರರನ್ನು ಬೆದರಿಸುತ್ತಿದೆ ಎಂದು ಹೇಳಿತ್ತು. 

“ಪಶ್ಚಿಮ ಬಂಗಾಲದಲ್ಲಿ ಪ್ರಜಾಸತ್ತೆ ಇಲ್ಲ. ಮೊನ್ನೆ ಭಾನುವಾರ ಚುನಾವಣಾ ವೇಳಾಪಟ್ಟಿ ಪ್ರಕಟವಾದ ಬೆನ್ನಿಗೇ ಟಿಎಂಸಿ ಸಚಿವ ಮತ್ತು ಕೋಲ್ಕತ ಮೇಯರ್‌ ಆಗಿರುವ ವ್ಯಕ್ತಿಯು ಉದ್ಧಟತನದಿಂದ ಜನರಿಗೆ, ಸಿಆರ್‌ಪಿಎಫ್ ಬಂದರೆ ಕೇವಲ ಎರಡು ದಿನ ಇದ್ದು ಹೋಗುತ್ತದೆ; ಅನಂತರ ನೀವೆಲ್ಲ ರಾಜ್ಯದ ಪೊಲೀಸರನ್ನೇ ಅವಲಂಬಿಸಬೇಕಾಗುತ್ತದೆ ಎಂದು ಹೇಳಿದ್ದಾರೆ; ಇದು ರಾಜ್ಯದ ಮತದಾರರಿಗೆ ಟಿಎಂಸಿ ಹಾಕಿರುವ ಬೆದರಿಕೆಯೇ ಆಗಿದೆ ಎಂಬುದಾಗಿ ಬಿಜೆಪಿ  ಉಪಾಧ್ಯಕ್ಷ ಜಯ ಪ್ರಕಾಶ್‌ ಮಜುಮ್‌ದಾರ್‌ ಅವರು ಚುನಾವಣಾ ಆಯೋಗ ನಡೆಸಿದ್ದ ಸರ್ವ ಪಕ್ಷ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next