Advertisement
ಬುಧವಾರ ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿ ಮಾಡಿದ ಬಿಜೆಪಿ ವಿಧಾನ ಪರಿಷತ್ ಸದಸ್ಯ ಬಿ.ಜೆ.ಪುಟ್ಟಸ್ವಾಮಿ, ಶಾಸಕರಾದ ಅರವಿಂದ ಲಿಂಬಾವಳಿ, ಡಾ.ಸಿ.ಎನ್.ಅಶ್ವತ್ಥನಾರಾಯಣ ಮತ್ತು ರವಿಸುಬ್ರಮಣ್ಯ ಅವರು ಈ ಕುರಿತು ಮನವಿ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಜಾರ್ಜ್ ಮಾತ್ರವಲ್ಲದೆ, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ವಿರುದ್ಧವೂ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕು ಎಂದು ಕೋರಿದ್ದಾರೆ.
Related Articles
Advertisement
ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದ ಬಳಿಕ 1978ರಲ್ಲಿ ಹೊರಡಿಸಿದ್ದ ಪ್ರಾಥಮಿಕ ಅಧಿಸೂಚನೆ ಪ್ರಶ್ನಿಸಿ ಜಯಲಕ್ಷ್ಮಮ್ಮ ಅವರು 2015ರ ನ. 30ರಂದು ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಅರ್ಜಿ ಸಲ್ಲಿಸಿ ದ್ದರು. ಅದಕ್ಕೆ ಮುನ್ನ ಕೀರ್ತಿರಾಜ್ ಶೆಟ್ಟಿ ಎಂಬುವರಿಗೆ ಭೂಮಿಯ ಜಿಪಿಎ ನೀಡಿದ್ದರು.
ವಿಚಾರಣೆ ನಡೆಸಿದ ನ್ಯಾಯಪೀಠ, 2016ರ ಫೆಬ್ರವರಿಯಲ್ಲಿ ಪ್ರಾಥಮಿಕ ಅಧಿಸೂಚನೆ ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಬಿಡಿಎ ಮೇಲ್ಮನವಿ ಸಲ್ಲಿಸಿತ್ತಾದರೂ ಅದನ್ನು ವಾಪಸ್ ಪಡೆಯಲಾಗಿತ್ತು. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇರವಾಗಿ ಶಾಮೀಲಾಗಿದ್ದು, ಸಚಿವ ಜಾರ್ಜ್ ಮತ್ತು ಮಹೇಂದ್ರ ಜೈನ್ ಅವರ ಕೈವಾಡವೂ ಇರುವ ಶಂಕೆಯಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಲಾಗಿದೆ ಎಂದು ಹೇಳಿದರು.
ನೋಟಿಸ್ ಕೂಡ ಬಂದಿಲ್ಲ: “ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಆರೋಪ ಮಾಡಲಾಗಿದೆ ಎಂದು ಹೇಳಿ ತಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಕೀರ್ತಿರಾಜ್ ಶೆಟ್ಟಿ ಎಂಬುವವರು ಹೇಳಿದ್ದರು. ಆದರೆ, ಇದುವರೆಗೆ ನನಗೆ ಲಾಯರ್ ನೋಟಿಸ್ ಕೂಡ ಬಂದಿಲ್ಲ. ಹೀಗಾಗಿ ನಾನು ಸುಳ್ಳು ಆರೋಪ ಮಾಡಿಲ್ಲ ಎಂಬುದು ಇದರಿಂದ ಸಾಬೀತಾಗುತ್ತದೆ,’ ಎಂದು ಪುಟ್ಟಸ್ವಾಮಿ ಹೇಳಿದರು.
ಎಸಿಬಿ ಮುಖ್ಯಮಂತ್ರಿಗಳ ಕೈಗೊಂಬೆಭೂಪಸಂದ್ರ ಭೂಹಗರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ದೂರಿನ ಬಗ್ಗೆ ಪ್ರಾಥಮಿಕ ವಿಚಾರಣೆಯನ್ನೂ ನಡೆಸದೆ ದೂರನ್ನು ಮುಕ್ತಾಯಗೊಳಿಸುವ ಮೂಲಕ ಎಸಿಬಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಗೊಂಬೆ ಎಂಬುದನ್ನು ಸಾಬೀತುಪಡಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಜೆ.ಪುಟ್ಟಸ್ವಾಮಿ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೂಪಸಂದ್ರ ಭೂ ಹಗರಣಕ್ಕೆ ಸಂಬಂಧಿಸಿದಂತೆ ಅ. 16ರಂದು ಎಸಿಬಿಯಲ್ಲಿ ದೂರು ದಾಖಲಿಸಿದ್ದು, ಈ ಬಗ್ಗೆ ಪ್ರಾಥಮಿಕ ತನಿಖೆಯನ್ನೂ ನಡೆಸದೆ ನ. 31ರಂದು ದೂರನ್ನು ಮುಕ್ತಾಯಗೊಳಿಸಿದೆ. ಆದರೆ, ನ್ಯಾಯಾಲಯದಲ್ಲಿ ಇತ್ಯರ್ಥವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷದವರ ವಿರುದ್ಧ ದೂರು ದಾಖಲಾದರೂ ಎಫ್ಐಆರ್ ದಾಖಲಿಸಿ ಕಿರುಕುಳ ನೀಡುತ್ತಿದೆ ಎಂದು ದೂರಿದರು. ಎಸಿಬಿಯಲ್ಲಿ ಇದುವರೆಗೆ ಎಷ್ಟು ಪ್ರಕರಣಗಳು ದಾಖಲಾಗಿವೆ? ಯಾರ ವಿರುದ್ಧ ದೂರು ದಾಖಲಾಗಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಒಂದೂವರೆ ತಿಂಗಳ ಹಿಂದೆ ಅರ್ಜಿ ಹಾಕಿದ್ದರೂ ಇನ್ನೂ ಮಾಹಿತಿ ನೀಡಿಲ್ಲ. ಎಸಿಬಿಯಲ್ಲಿ 57 ಪ್ರಕರಣ ಇದ್ದು, 37 ಪ್ರಕರಣ ವಿಚಾರಣೆಗೆ ಬಾಕಿ ಇದೆ ಎಂದಷ್ಟೇ ಉತ್ತರಿಸಿದೆ. ಆ ಮೂಲಕ ಆಡಳಿತ ಪಕ್ಷದವರನ್ನು ರಕ್ಷಿಸುವ ಕೆಲಸ ಮಾಡುತ್ತಿದೆ ಎಂದು ಆಪಾದಿಸಿದರು.