Advertisement

BJP; ಅಮಿತ್‌ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್‌ ಸೂಚನೆ

02:00 AM Jan 10, 2025 | Team Udayavani |

ಬೆಂಗಳೂರು: ಬಿಜೆಪಿ ತಾನು ಡಾ| ಅಂಬೇಡ್ಕರ್‌, ಸಂವಿಧಾನ ಅಥವಾ ದಲಿತರ ವಿರೋಧಿ ಅಲ್ಲ ಎನ್ನುವುದನ್ನು ಪ್ರತಿಪಾದಿಸಿ ಕಾಂಗ್ರೆಸ್‌ ಹೊರಿಸಿರುವ ಕಳಂಕವನ್ನು ಕಳೆದುಕೊಳ್ಳಲು ಮುಂದಡಿಯಿಟ್ಟಿದೆ. ಅಲ್ಲದೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆಯಲ್ಲಿ ಯಾವುದೇ ವಿವಾದದ ಅಂಶವಿಲ್ಲ. ಜನರಲ್ಲಿ ಕಾಂಗ್ರೆಸ್‌ ಮೂಡಿಸಲು ಹೊರಟಿರುವ ತಪ್ಪು ಗ್ರಹಿಕೆ ಹೋಗಲಾಡಿಸಿ, ಶಾ ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳಬೇಕು ಎಂಬ ಸಂದೇಶವನ್ನು ರಾಜ್ಯ ಬಿಜೆಪಿ ನಾಯಕರಿಗೆ ನೀಡಲಾಗಿದೆ.

Advertisement

ಗುರುವಾರ “ನಮ್ಮ ಸಂವಿಧಾನ- ನಮ್ಮ ಹೆಮ್ಮೆ’ ಅಭಿಯಾನದಡಿ ಹಲವು ವಿಷಯಗಳ ಬಗ್ಗೆ ಪಕ್ಷದ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಮಾರ್ಗದರ್ಶನ ನೀಡಿದ್ದಾರೆ.

ಸಂವಿಧಾನ ಮಂಡನೆಯಾದ ನ. 26ರಿಂದ ಸಂವಿಧಾನ ಜಾರಿಯಾದ ಜ. 26ರವರೆಗೆ 2 ತಿಂಗಳ ಕಾಲ ರಾಷ್ಟ್ರಾದ್ಯಂತ ಬಿಜೆಪಿ ವತಿಯಿಂದ ನಡೆಯಲಿರುವ ಅಭಿಯಾನದ ಭಾಗವಾಗಿ ರಾಜ್ಯದ ಎಲ್ಲ ಮಂಡಲ, ಬೂತ್‌ ಮಟ್ಟದಲ್ಲೂ ಮೂರು ಪ್ರಮುಖ ಅಂಶಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲು ಸಂಕಲ್ಪ ಮಾಡಲಾಗಿದೆ.
ಅದರಲ್ಲೂ ಇತ್ತೀಚೆಗೆ ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಾಡಿದ ಭಾಷಣವನ್ನು ವಿವಾದ ಮಾಡುವ ಮೂಲಕ ಕಾಂಗ್ರೆಸ್‌ ತುಪ್ಪ ಸುರಿಯುತ್ತಿದೆ ಎಂದು ನೇರವಾಗಿ ಆರೋಪಿಸಿರುವ ಬಿಜೆಪಿಯು, ಅಮಿತ್‌ ಶಾ ಭಾಷಣದ ಸರಿಯಾದ ಗ್ರಹಿಕೆಯನ್ನು ಜನರ ಮುಂದಿಡಲು ಈ ಅಭಿಯಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಕರೆ ನೀಡಿದೆ.

ಬಾಬಾ ಸಾಹೇಬರ ಸಂವಿಧಾನ ಬದಲಾಯಿಸಿದ್ದು ಯಾರು, ಬಲಪಡಿಸಿದ್ದು ಯಾರು ಎಂಬ ವಿಷಯದ ಬಗ್ಗೆ ಚಿಂತಕ ಎಸ್‌. ವಾದಿರಾಜ್‌ ಅವರು ಪ್ರಾತ್ಯಕ್ಷಿಕೆ ನೀಡಿದರೆ, 2ನೇ ಅವಧಿಯಲ್ಲಿ ಈ ಅಭಿಯಾನದ ಪ್ರಸ್ತಾವನೆ ಹಾಗೂ ಮುಂದಿನ ಕಾರ್ಯಯೋಜನೆ ಬಗ್ಗೆ ಬಿ.ಎಲ್‌. ಸಂತೋಷ್‌ ವಿಷಯ ಮಂಡಿಸಿ, ಮಾರ್ಗದರ್ಶನ ನೀಡಿದರು.

ಕಾಂಗ್ರೆಸ್‌ನಿಂದ ಅಂಬೇಡ್ಕರ್‌ಗೆ ಅವಮಾನ
ಪ್ರಾಸ್ತಾವಿಕ ಭಾಷಣ ಮಾಡಿದ ಮಾಜಿ ಸಚಿವ ಎನ್‌. ಮಹೇಶ್‌, ಇದುವರೆಗೆ ನಮ್ಮ ಸಂವಿಧಾನಕ್ಕೆ 106 ಬಾರಿ ತಿದ್ದುಪಡಿ ಆಗಿದೆ. ಅದರಲ್ಲಿ 76 ಬಾರಿ ಕಾಂಗ್ರೆಸ್‌ ತಿದ್ದುಪಡಿ ಮಾಡಿದ್ದರೆ, ವಾಜಪೇಯಿ ಕಾಲದಲ್ಲಿ 14 ಹಾಗೂ ಮೋದಿ ಅವಧಿಯಲ್ಲಿ ಆಗಿರುವ 8 ತಿದ್ದುಪಡಿ ಸೇರಿ ಬಿಜೆಪಿ ಸರಕಾರಗಳಲ್ಲಿ 22 ತಿದ್ದುಪಡಿಗಳು ಆಗಿವೆ. ಒಮ್ಮೆಯೂ ಸಂವಿಧಾನ, ಪ್ರಜಾಪ್ರಭುತ್ವ, ಅಂಬೇಡ್ಕರ್‌ರ ಆಶಯಗಳ ವಿರುದ್ಧ ತಿದ್ದುಪಡಿ ಮಾಡಿಲ್ಲ. ಕಾಂಗ್ರೆಸ್‌ ಮಾಡಿದ ತಿದ್ದುಪಡಿಗಳೆಲ್ಲವೂ ಅದರ ವಿರುದ್ಧವೇ ಆಗಿದ್ದವು. 1975ರ ತುರ್ತು ಪರಿಸ್ಥಿತಿಯಲ್ಲಿ ತಂದ ತಿದ್ದುಪಡಿಗಳು ಇಡೀ ಪ್ರಜಾಪ್ರಭುತ್ವವನ್ನೇ ಬುಡಮೇಲು ಮಾಡಿ, ಸಂವಿಧಾನವನ್ನೇ ತಿರುಚಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಸರಕಾರವೇ ಸಂಘಟನೆಗಳನ್ನು ಎತ್ತಿ ಕಟ್ಟುತ್ತಿದೆ
ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ರಾಜ್ಯದಲ್ಲಿರುವ ಕಾಂಗ್ರೆಸ್‌ ಸರಕಾರ ಎಲ್ಲ ಜಿಲ್ಲೆಗಳಿಗೆ ಪ್ಯಾಕೇಜ್‌ ಕೊಟ್ಟು ಅನೇಕ ಸಂಘಟನೆಗಳನ್ನು ಎತ್ತಿ ಕಟ್ಟಿ ಬೀದಿಗಿಳಿಸುತ್ತಿದೆ. ಸರಕಾರಿ ಪ್ರಾಯೋಜಿತ ಸಂಘಟನೆಗಳಿಂದ ನಡೆಯುತ್ತಿರುವ ಬಂದ್‌ಗಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇದಕ್ಕೆ ಆಯಾ ಜಿಲ್ಲೆಗಳಲ್ಲಿ ನಮ್ಮ ಎಸ್‌ಸಿ, ಎಸ್‌ಟಿ ಮೋರ್ಚಾ ನಾಯಕರು ಉತ್ತರಿಸಬೇಕು. ದಾರಿ ತಪ್ಪುತ್ತಿರುವ ಜನರನ್ನು ಸರಿದಾರಿಗೆ ತರಲು ಸಂಪೂರ್ಣ ಸಂಘಟನೆ ತೊಡಗಬೇಕಿದೆ ಎಂದು ಕರೆ ನೀಡಿದರು.

ಡಾ| ಅಂಬೇಡ್ಕರ್‌ ಅವರನ್ನು ಅವರ ಜೀವಿತಾವಧಿಯಲ್ಲಿ ನಿರಂತರ ಅಪಮಾನಿಸಿ, ಅವರ ಅರ್ಹತೆ, ವಿದ್ವತ್ತನ್ನು ಗೌರವಿಸದೆ ರಾಜಕೀಯವಾಗಿ, ಸಾಮಾಜಿಕವಾಗಿ ತುಳಿದ ಕಾಂಗ್ರೆಸ್‌, ಶೋಷಿತರನ್ನು ಮತಬ್ಯಾಂಕ್‌ ಮಾಡಿಕೊಂಡು ಇದುವರೆಗೂ ಅಧಿಕಾರದ ಸವಿ ಅನುಭವಿಸುತ್ತ ಬಂದಿದೆ. ಅಂಬೇಡ್ಕರ್‌ ಅವರಿಗೆ ಭಾರತರತ್ನದ ಗೌರವ ನೀಡಿದ್ದು ಬಿಜೆಪಿ. ಭವಿಷ್ಯದ ಪೀಳಿಗೆಗೆ ಅಂಬೇಡ್ಕರ್‌ ಇತಿಹಾಸ ತಿಳಿಯುವಂತೆ “ಸಂವಿಧಾನ ದಿನ’ ಆಚರಿಸುವ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದು ನಮ್ಮ ಸರಕಾರ.
– ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next