ನವದೆಹಲಿ: ‘ಬಡವರಿಗೆ ಕೆಜಿಗೆ 2 ರೂ. ದರದಲ್ಲಿ ಉತ್ತಮ ಗುಣಮಟ್ಟದ ಗೋಧಿಹಿಟ್ಟು, ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು, ಕಿಸಾನ್ ಸಮ್ಮಾನ್ ನಿಧಿ, ಆಯುಷ್ಮಾನ್ ಯೋಜನೆ ವಿಸ್ತರಣೆ…’
ಇವು ದೆಹಲಿಯ ಜನತೆಗೆ ಬಿಜೆಪಿ ನೀಡಿರುವ ಆಶ್ವಾಸನೆಗಳು. ಫೆ.8ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ಬಿಜೆಪಿ ತನ್ನ ಸಂಕಲ್ಪಪತ್ರವನ್ನು ಬಿಡುಗಡೆ ಮಾಡಿದ್ದು, ಅಧಿಕಾರಕ್ಕೆ ಬಂದರೆ ರಾಷ್ಟ್ರರಾಜಧಾನಿಯಲ್ಲಿ ಅಭಿವೃದ್ಧಿಯ ಬುಲೆಟ್ ರೈಲು ಓಡಿಸುವುದಾಗಿ ಭರವಸೆ ನೀಡಿದೆ.
ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಜಾವಡೇಕರ್, ಹರ್ಷವರ್ಧನ್, ದೆಹಲಿ ಘಟಕದ ಅಧ್ಯಕ್ಷ ಮನೋಜ್ ತಿವಾರಿ ಮತ್ತಿತರರ ಸಮ್ಮುಖದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು.
ಇದೇ ವೇಳೆ, ಪಾಕಿಸ್ತಾನದ ಸಚಿವ ಫವಾದ್ ಹುಸೇನ್ ಅವರ ಟ್ವೀಟ್‌ವೊಂದಕ್ಕೆ ತಿರುಗೇಟು ನೀಡಿರುವ ದೆಹಲಿ ಸಿಎಂ ಕೇಜ್ರಿವಾಲ್, ‘ದೆಹಲಿ ಚುನಾವಣೆಯು ಭಾರತದ ಆಂತರಿಕ ವಿಚಾರ. ನರೇಂದ್ರ ಮೋದಿಯವರು ಭಾರತದ ಪ್ರಧಾನಿ. ಅವರು ನನ್ನ ಪ್ರಧಾನಿಯೂ ಹೌದು. ನಮ್ಮ ದೇಶದ ಆಂತರಿಕ ವಿಚಾರದಲ್ಲಿ ಭಯೋತ್ಪಾದನೆಯ ಪ್ರಾಯೋಜಕರಾದ ನೀವು ಮಧ್ಯಪ್ರವೇಶಿಸುವ ಅಗತ್ಯವಿಲ್ಲ’ ಎಂದು ಹೇಳಿದ್ದಾರೆ.
ಇದೇ ವೇಳೆ, ಜಾಮಿಯಾ ಗುಂಡಿನ ದಾಳಿ ಪ್ರಕರಣ ಸಂಬಂಧ ಬಿಜೆಪಿ ವಿರುದ್ಧ ಕಿಡಿಕಾರಿರುವ ಕೇಜ್ರಿವಾಲ್, ‘ನಾವು ಮಕ್ಕಳ ಕೈಯಲ್ಲಿ ಪೆನ್ ಕೊಟ್ಟರೆ, ಅವರು(ಬಿಜೆಪಿ) ಗನ್ ಕೊಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.