Advertisement

Government ವಿರುದ್ಧವೇ ಬಿಜೆಪಿ ನಿರ್ಣಯ:ವಿಧಾನಸಭೆ ಇತಿಹಾಸದಲ್ಲೇ ಮೊದಲು

01:08 AM Feb 24, 2024 | Team Udayavani |

ಬೆಂಗಳೂರು: ಕೇಂದ್ರ ಸರಕಾರದ ವಿರುದ್ಧ ವಿಧಾನಸಭೆಯಲ್ಲಿ ರಾಜ್ಯ ಸರಕಾರ ಕೈಗೊಂಡ ನಿರ್ಣಯಕ್ಕೆ ಪ್ರತಿಯಾಗಿ ವಿಪಕ್ಷ ಬಿಜೆಪಿ ಕೂಡ ನಿರ್ಣಯವೊಂದನ್ನು ಮಂಡಿ ಸಲು ಯತ್ನಿಸಿದ್ದು, ರಾಜ್ಯ ವಿಧಾನಸಭೆಯ ಇತಿ ಹಾಸದಲ್ಲೇ ಮೊದಲ ಬಾರಿಗೆ ನಿರ್ಣಯ ಹಾಗೂ ಪ್ರತಿನಿರ್ಣಯಗಳು ಮಂಡನೆಯಾದಂತಾಗಿದೆ.
ಆರ್ಥಿಕ ಸಂಪನ್ಮೂಲಗಳ ತಾರತಮ್ಯರಹಿತ ಹಂಚಿಕೆ ಹಾಗೂ ರೈತರೊಂದಿಗೆ ಸಂಘರ್ಷದ ಹಾದಿ ತುಳಿಯದೆ ಎಲ್ಲ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲು ಕೇಂದ್ರ ಸರಕಾರ ವನ್ನು ಒತ್ತಾಯಿಸಿ ಗುರುವಾರ ವಿಧಾನಸಭೆ ಯಲ್ಲಿ ರಾಜ್ಯ ಸರಕಾರವು ನಿರ್ಣಯ ಮಂಡಿಸಿ ಅನುಮೋದನೆ ಪಡೆದಿತ್ತು.

Advertisement

ವಿಪಕ್ಷಗಳ ಗಮನಕ್ಕೆ ತಾರದೆ, ನಿರ್ಣಯದ ಪ್ರತಿ ನೀಡದೆ, ಅದರ ಮೇಲೆ ಚರ್ಚೆಗೂ ಅವಕಾಶ ನೀಡದೆ ನಿರ್ಣಯ ಅಂಗೀಕರಿಸಿದ್ದನ್ನು ವಿರೋಧಿಸಿ ಧರಣಿನಿರತ ವಿಪಕ್ಷವು ಕೇಂದ್ರ ಸರಕಾರದ ವಿರುದ್ಧ ಕೈಗೊಂಡ ನಿರ್ಣಯವನ್ನು ಹಿಂಪಡೆಯುವಂತೆ ಒತ್ತಾಯಿಸಿತ್ತು.

ವಿಪಕ್ಷ ಸದಸ್ಯರು ಬಾವಿಗಿಳಿದು ಧರಣಿ ನಡೆಸುತ್ತಿದ್ದಾಗಲೇ ಸರಕಾರವು ಕಾಗದಪತ್ರ, ವರದಿ ಹಾಗೂ ಎರಡು ಮಸೂದೆಗಳನ್ನು ಮಂಡಿಸಿ ಅನುಮೋದನೆ ಪಡೆಯಲು ಮುಂದಾಯಿತು. ತತ್‌ಕ್ಷಣವೇ ವಿಪಕ್ಷ ನಾಯಕ ಆರ್‌. ಅಶೋಕ್‌ ಪ್ರತಿನಿರ್ಣಯವನ್ನು ಓದಲು ಆರಂಭಿಸಿದರು. ಇದಕ್ಕೆ ಕಡಿವಾಣ ಹಾಕಲು ಯತ್ನಿಸಿದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಏಕಾಏಕಿ ನೀವು ಹೀಗೆ ಏನನ್ನೋ ಓದಿದರೆ ಹೇಗೆ ಎಂದು ಪ್ರಶ್ನಿಸಿದರು. ಪಟ್ಟುಬಿಡದ ಅಶೋಕ್‌ ತಮ್ಮ ನಿರ್ಣಯವನ್ನು ಓದಿ ಮುಗಿಸಿದರು. ಅಷ್ಟೇ ಅಲ್ಲದೆ, ಧರಣಿನಿರತ ಸದಸ್ಯರನ್ನು ಕುರಿತು, “ನಿರ್ಣಯಕ್ಕೆ ಹೌದು ಎನ್ನುವವರು ಹೌದು ಎನ್ನಿ, ಇಲ್ಲ ಎನ್ನುವವರು ಇಲ್ಲ ಎನ್ನಿ’ ಎಂದರು. ಧರಣಿನಿರತರು “ಹೌದು ಹೌದು’ ಎನ್ನುವ ಮೂಲಕ ನಿರ್ಣಯ ಅಂಗೀಕಾರ ಆಗಿದೆ ಎಂದೂ ಹೇಳಿದರು.

ಪ್ರತಿನಿರ್ಣಯದಲ್ಲಿ ಏನಿದೆ?
ಸಂವಿಧಾನಬದ್ಧವಾಗಿ ರಚನೆಯಾಗಿರುವ ಹಣಕಾಸು ಆಯೋಗಗಳ ಶಿಫಾರಸಿನಂತೆ ರಾಜ್ಯಗಳಿಗೆ ಹಣಕಾಸು ಹಂಚಿಕೆ ಮಾಡುವ ಕಾರ್ಯವನ್ನು ಕೇಂದ್ರದ ಎನ್‌ಡಿಎ ಸರಕಾರ ಚಾಚೂತಪ್ಪದೆ ಪಾಲಿಸಿದೆ. ರಾಜ್ಯ ಸರಕಾರದ ತಾರತಮ್ಯದ ಆರೋಪ ಸಂಪೂರ್ಣ ಸುಳ್ಳಿನಿಂದ ಕೂಡಿದೆ. 15ನೇ ಹಣಕಾಸು ಆಯೋಗವು ಕಾರ್ಯ ಆರಂಭಿಸಿದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಸರಕಾರವೇ ಇತ್ತು. ರಾಜ್ಯದ ವಸ್ತುಸ್ಥಿತಿಯನ್ನು ಆಯೋಗಕ್ಕೆ ಮನದಟ್ಟು ಮಾಡುವಲ್ಲಿ ಸರಕಾರ ವಿಫ‌ಲವಾಗಿದೆ. ಆಯೋಗದ ನಿರ್ಣಾಯಕ ಸಭೆಯಲ್ಲಿ ಭಾಗವಹಿಸಿದ್ದ ಅಂದಿನ ಕಾಂಗ್ರೆಸ್‌ ಸರಕಾರದ ಸಚಿವರು ಪ್ರತಿರೋಧ ವ್ಯಕ್ತಪಡಿಸಿದೆ ಮೌನವಾಗಿದ್ದರು, ಈಗ ಎರಡು ವರ್ಷ ಕಳೆದು ರಾಜಕೀಯ ಕಾರಣಕ್ಕೆ ಸರಕಾರ ಈ ವಿಷಯ ಪ್ರಸ್ತಾವಿಸುತ್ತಿದೆ. ಮಾನದಂಡದಲ್ಲಿ ವ್ಯತ್ಯಾಸವಾಗಿ ಅನುದಾನ ಕಡಿತವಾಗಿದ್ದರೆ ಅದಕ್ಕೆ ಅಂದಿನ ಕಾಂಗ್ರೆಸ್‌ ಸರಕಾರವೇ ಕಾರಣ. ಜಿಎಸ್‌ಟಿ ವಿಚಾರದಲ್ಲಿ ರಾಜ್ಯ ಸರಕಾರ ಸುಳ್ಳು ಲೆಕ್ಕ ತೋರಿಸುತ್ತಿದೆ. ಸೆಸ್‌, ಸರ್‌ಚಾರ್ಜ್‌ ವಿಚಾರದಲ್ಲಿ ಸತ್ಯವನ್ನು ಮರೆಮಾಚಿ ರಾಜ್ಯಕ್ಕೆ ಇನ್ನಷ್ಟು ಪಾಲು ಬರಬೇಕೆಂಬ ಬೇಡಿಕೆ ರಾಜಕೀಯಪ್ರೇರಿತ ಅಷ್ಟೆ. ಅವೈಜ್ಞಾನಿಕ ಲೆಕ್ಕಾಚಾರಗಳನ್ನು ಮುಂದಿಟ್ಟು ಕೇಂದ್ರವನ್ನು ದೂಷಿಸುವುದು ಅತಿ ದೊಡ್ಡ ಸುಳ್ಳಾಗಿದೆ.

ಕರ್ನಾಟಕದಲ್ಲಿ ಅಭಿವೃದ್ಧಿ ಮತ್ತು ಕರ್ನಾಟಕದ ಪಾಲನ್ನು ನ್ಯಾಯಸಮ್ಮತವಾಗಿ ಪಡೆದುಕೊಳ್ಳಲು ನಾವೆಲ್ಲರೂ ಬದ್ಧತೆ ತೋರಬೇಕು. ಸುಳ್ಳು, ಕಾಲ್ಪನಿಕ ಮತ್ತು ರಾಜಕೀಯಪ್ರೇರಿತ ನಿರ್ಣಯವನ್ನು ಖಂಡಿಸುತ್ತೇವೆ. ರಾಜ್ಯ ಸರಕಾರ ತೆರಿಗೆ ಸಂಗ್ರಹ, ಹಂಚಿಕೆ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಸಂಪೂರ್ಣ ವಿಫ‌ಲವಾಗಿದ್ದು, ಅದನ್ನು ಮರೆಮಾಚಲು ಕೇಂದ್ರವನ್ನು ದೂಷಿಸುವುದನ್ನು ಕೈಬಿಡಬೇಕೆಂದು ಒತ್ತಾಯ ಮಾಡುತ್ತೇವೆ.

Advertisement

ವ್ಯಂಗ್ಯ ಮಾಡಿದ ಸ್ಪೀಕರ್‌
ವಿಪಕ್ಷಗಳ ಧರಣಿ ಮಧ್ಯೆಯೇ ವರದಿ ಮಂಡನೆ, ಮಸೂದೆಗಳ ಅನುಮೋದನೆಯ ಅನಂತರ ವಿಪಕ್ಷಗಳನ್ನು ವ್ಯಂಗ್ಯ ಮಾಡಿದ ಸ್ಪೀಕರ್‌, ಸದಸ್ಯರು ಘೋಷಣೆಗಳನ್ನು ಕೂಗಿ, ಹಾಡು ಹಾಡಿ, ಸ್ಪೀಕರ್‌ ಪೀಠವನ್ನು ಅಣಕಿಸಿ ಒಳ್ಳೆಯ ಮನೋರಂಜನೆ ನೀಡಿದ್ದೀರಿ. ಯಾವುದಾದರೂ ಒಂದು ದಿನ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸೋಣ. ನಿಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿ ಎನ್ನುತ್ತ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.

ಪ್ರತಿನಿರ್ಣಯ ಏನು?

ಕೇಂದ್ರದಿಂದ ಜಿಎಸ್‌ಟಿ ತೆರಿಗೆ ಹಂಚಿಕೆ ಅನ್ಯಾಯ ಆರೋಪಕ್ಕೆ ತಿರಸ್ಕಾರ.
15ನೇ ಹಣಕಾಸು ಆಯೋಗದ ರಚನೆ ವೇಳೆ ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರವೇ ಇತ್ತು. ಆಗ ವಿರೋಧಿಸದೆ ಈಗ ರಾಜಕೀಯ ಕಾರಣಗಳಿಗೆ ವಿರೋಧ. ರಾಜ್ಯ ಸರಕಾರದ ಸುಳ್ಳು, ಕಾಲ್ಪನಿಕ ಮತ್ತು ರಾಜಕೀಯಪ್ರೇರಿತ ನಿರ್ಣಯವನ್ನು ಖಂಡಿಸುತ್ತೇವೆ. ಸರಕಾರವು ತನ್ನ ವೈಫ‌ಲ್ಯ ಮರೆಮಾಚಲು ಕೇಂದ್ರವನ್ನು ದೂಷಿಸುವ ಪ್ರವೃತ್ತಿ ಕೈಬಿಡಬೇಕು.

ಸರಕಾರದ ನಿರ್ಣಯದಲ್ಲಿ ಕರ್ನಾಟಕ ಹಿತ ರಕ್ಷಣೆ ಮಾಡುವ ಅಂಶಗಳಿವೆ. ಯಾವುದನ್ನೂ ಮುಚ್ಚುಮರೆ ಮಾಡಿಲ್ಲ. ಇಡೀ ಸದನ ನಾವು ಮಂಡಿಸಿದ ನಿರ್ಣಯವನ್ನು ಒಪ್ಪಿದೆ. ಇದು ಕರ್ನಾಟಕದ ಒಕ್ಕೊರಲ ಧ್ವನಿ.
-ಎಚ್‌.ಕೆ. ಪಾಟೀಲ್‌, ಕಾನೂನು ಸಚಿವ

ಸಭಾಧ್ಯಕ್ಷ ಪೀಠ ಹಾಗೂ ಸದನಕ್ಕೆ ಗೌರವ ಕೊಟ್ಟು ನಾವೂ ಸಹಕರಿಸಿದ್ದೇವೆ. ಜನಪರವಾದ ಮಸೂದೆಗಳಿಗೆ ಒಪ್ಪಿಗೆ ಕೊಟ್ಟಿ ದ್ದೇವೆ. ಆದರೆ ಕಾನೂನು ಸಚಿವರು ಏಕಾಏಕಿ ನಿರ್ಣಯ ಓದಿದ್ದರ ಅರ್ಥವೇನು? ಕದ್ದು ಮುಚ್ಚಿ ವ್ಯಾಪಾರ ಮಾಡುವಂಥದ್ದೇನಿತ್ತು?
-ಆರ್‌. ಅಶೋಕ್‌, ವಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next