Advertisement

ಬಿಜೆಪಿ ಮೀಸಲಾತಿ ವಿರೋಧಿ: ಮುಖ್ಯಮಂತ್ರಿ

12:03 PM Aug 21, 2017 | |

ಬೆಂಗಳೂರು: ಕೇಂದ್ರ ಸರ್ಕಾರ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಸೂದೆಗೆ ತಿದ್ದುಪಡಿ ತರಲು ಹೊರಟಿದ್ದು, ಇದಕ್ಕೆ ನಮ್ಮ ವಿರೋಧವಿದೆ ಎಂದು ಹೇಳಿರುವ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರು ಮೀಸಲಾತಿ ವಿರೋಧಿಗಳು ಎಂದು ಟೀಕಿಸಿದ್ದಾರೆ.

Advertisement

ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗ ಭಾನುವಾರ ಟೌನ್‌ಹಾಲ್‌ನಲ್ಲಿ ಆಯೋಜಿಸಿದ್ದ ಮಾಜಿ ಪ್ರಧಾನಮಂತ್ರಿ ರಾಜೀವ್‌ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಹಿಂದುಳಿದ ವರ್ಗಗಳ ಗುಂಪಿಗೆ ಯಾವ ಸಮುದಾಯ ಸೇರಿಸಬೇಕೆಂಬ ಅಧಿಕಾರ ರಾಜ್ಯ ಸರ್ಕಾರಕ್ಕೆ ಇರಬೇಕು. ಆದರೆ ಈಗ ಕೇಂದ್ರ ಸರ್ಕಾರ ಈ ಅಧಿಕಾರವನ್ನೇ ಕಿತ್ತುಕೊಳ್ಳಲು ಹೊರಟಿದೆ. ಅದನ್ನು
ನಾವು ವಿರೋಧಿಸಿದ್ದೇವೆ. ಆದರೆ, ಅಮಿತ್‌ ಶಾ ನಾವು ಮೀಸಲಾತಿ ವಿರೋಧಿಗಳು ಎಂದು ಹೇಳುತ್ತಿದ್ದಾರೆ ಎಂದರು.

ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಕಾಯ್ದೆ ಜಾರಿಗೊಳಿಸುವ ಮೂಲಕ ಆಯೋಗದ ಅಧಿಕಾರ ಕಿತ್ತುಕೊಳ್ಳುವ ಹುನ್ನಾರವನ್ನು ಬಿಜೆಪಿ ನಡೆಸುತ್ತಿದೆ. ಈಶ್ವರಪ್ಪ ಹಿಂದುಳಿದ ವರ್ಗಗಳಿಗೆ ರಾಯಣ್ಣ ಬ್ರಿಗೇಡ್‌ ಅಂತ ಮಾಡಿದರು. ಆದರೆ, ಹಿಂದುಳಿದ ವರ್ಗಗಳಿಗೆ ಯಾವುದೇ ಸಹಾಯ ಮಾಡಲಿಲ್ಲ. ಬಿಜೆಪಿಯವರು ಮೀಸಲಾತಿ ವಿರೋಧಿಗಳು ಎಂದ ಅವರು, ಒಂದು ಕಡೆ ಮೀಸಲಾತಿ ವಿರೋಧಿಸುವ ಬಿಜೆಪಿಯವರು, ಇನ್ನೊಂದು ಕಡೆ ದಲಿತರ ಮನೆಗೆ ಊಟಕ್ಕೆ ಹೋಗುತ್ತಾರೆ. ದಲಿತರ ಮನೆಗೆ ಊಟಕ್ಕೆ ಹೋದ ಮೇಲೆ ಅವರ  ಮನೆಯ ಊಟ ಮಾಡ್ಬೇಕಲ್ವಾ? ಹೋಟೆಲ್‌ ಊಟ
ತರಿಸಿಕೊಂಡು ಊಟ ಮಾಡುತ್ತಾರೆ. “ದಲಿತರ ಮನೆಯ ಹೆಣ್ಣು ಮಕ್ಕಳನ್ನು ನಿಮ್ಮ ಗಂಡು ಮಕ್ಕಳಿಗೆ ಮದುವೆ ಮಾಡಿ ಅಂದೆ. ಅಂದಿನಿಂದ ಬಿಜೆಪಿಯವರು ದಲಿತರ ಮನೆಗಳಿಗೆ ಊಟಕ್ಕೆ ಹೋಗುವುದನ್ನೇ ಬಿಟ್ಟುಬಿಟ್ಟರು’ ಎಂದು ನಗೆ ಚಟಾಕಿ ಹಾರಿಸಿದರು.

ಹಿಂದುಳಿದ, ಶೋಷಿತ ಜನರಿಗೆ ನ್ಯಾಯ ಸಿಗುವಂತೆ ಮಾಡಿದ್ದ ದೇವರಾಜ ಅರಸು ಅವರು ಸಾಮಾಜಿಕ ನ್ಯಾಯದ ಹರಿಕಾರ. ಹಿಂದುಳಿದವರು, ಶೋಷಿತರು, ದಲಿತರಿಗೆ ಸಾಮಾಜಿಕ ನ್ಯಾಯ ನೀಡಿದ್ದರು. ಎಷ್ಟೇ ಅಡೆತಡೆ ಬಂದರೂ ಹಲವು ಕ್ರಾಂತಿಕಾರಕ ಬದಲಾವಣೆಗಳನ್ನು ತಂದರು. ಅವರೊಬ್ಬ ಅಪರೂಪದ ಧೀಮಂತ ರಾಜಕಾರಣಿ ಎಂದರು. ಮೀಸಲಾತಿ ವಿರೋಧಿಗಳು: ಮಾಜಿ ರಾಜ್ಯಪಾಲರಾದ ನ್ಯಾ.ರಾಮಾಜೋಯಿಸ್‌ ಸುಪ್ರೀಂ ಕೋರ್ಟಿನಲ್ಲಿ ಮೀಸಲಾತಿ ಬೇಡವೆಂದು ಅರ್ಜಿ ಹಾಕಿದ್ದರು. ಅದೃಷ್ಟವಶಾತ್‌ ರಾಮಾಜೋಯಿಸ್‌ ಅರ್ಜಿಯನ್ನು ಕೋರ್ಟ್‌ ತಿರಸ್ಕರಿಸಿತು. ಇಲ್ಲದಿದ್ದರೆ ಹಿಂದುಳಿದ ವರ್ಗಗಳಿಗೆ ತುಂಬಾ ಅನ್ಯಾಯವಾಗುತ್ತಿತ್ತು. ಬಿಜೆಪಿಯವರಿಗೆ ಹಿಂದುಳಿದ ವರ್ಗಗಳ ಹೆಸರು ಹೇಳುವ ನೈತಿಕತೆಯಿಲ್ಲ. ಹಿಂದುಳಿದ ವರ್ಗಗಳು ಬಿಜೆಪಿ ಕಡೆಗೆ ತಲೆ ಹಾಕಿಯೂ ಮಲಗಬಾರದು ಎಂದರು.

ರಾಜೀವ್‌ ಗಾಂಧಿ ಅವರು ಯುವ ಶಕ್ತಿಯ ಮೇಲೆ ಅಪಾರವಾದ ನಂಬಿಕೆ ಇಟ್ಟುಕೊಂಡಿದ್ದರು. ಅದಕ್ಕಾಗಿಯೇ ಅವರು ಮತದಾನ ಮಾಡಲು ಇದ್ದ 21 ವರ್ಷ ವಯೋಮಿತಿಯನ್ನು 18ಕ್ಕೆ ಇಳಿಸಿದರು. ಆ ಮೂಲಕ ಯುವಕರಿಗೆ ಮತದಾನದ ಹಕ್ಕು ನೀಡಿ ದೇಶವನ್ನು ಆಳುವ ನಾಯಕರನ್ನು ಆಯ್ಕೆ ಮಾಡುವ ಅಧಿಕಾರ ನೀಡಿದರು ಎಂದು ನೆನಪಿಸಿಕೊಂಡರು.

Advertisement

ಎಚ್ಚರಿಕೆಯಿಂದ ನೋಡಿಕೊಳ್ಳಿ..
ಮುಂದಿನ ಸಲ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ. ಬಿಜೆಪಿಯವರು ಏನೇ ತಿಪ್ಪರಲಾಗ ಹಾಕಿದರೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಚುನಾವಣೆ ಬಂತಲ್ಲ ಅಂತ ಬಿಜೆಪಿಯವರು ಏನೇನೋ ಆರೋಪ ಮಾಡ್ತಿದ್ದಾರೆ. ಬಹಳ ಎಚ್ಚರಿಕೆಯಿಂದ ಇಂದಿರಾ ಕ್ಯಾಂಟೀನ್‌ ನೋಡಿಕೊಳ್ಳಿ ಎಂದು ಹೇಳಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next