ಲಕ್ನೋ: ಇತ್ತೀಚೆಗಷ್ಟೇ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಆಡಳಿತಾರೂಢ ಬಿಜೆಪಿ ಪಕ್ಷದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸ್ವಾಮಿ ಪ್ರಸಾದ್ ಮೌರ್ಯ ಶುಕ್ರವಾರ (ಜನವರಿ 14) ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಇದನ್ನೂ ಓದಿ:ಕೋವಿಡ್ 19 ಪರಿಣಾಮ: ಜನವರಿ 31ರವರೆಗೆ ಮಧ್ಯಪ್ರದೇಶದಲ್ಲಿ 1ರಿಂದ 12ನೇ ತರಗತಿವರೆಗೆ ಬಂದ್
ಈ ಸಂದರ್ಭದಲ್ಲಿ ಬಿಜೆಪಿಯ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಧರಂ ಸಿಂಗ್ ಸೈನಿ, ಭಗ್ವತಿ ಸಾಗರ್ ಮತ್ತು ವಿನಯ್ ಸಾಂಖ್ಯಾ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಕಾರ್ಯಕ್ರಮದಲ್ಲಿ ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ಉಪಸ್ಥಿತರಿದ್ದರು.
ರಾಜ್ಯದಲ್ಲಿ ಹಿಂದುಗಳಿದ ವರ್ಗ ಮತ್ತು ದಲಿತ ಮತದಾರರನ್ನು ಕಡೆಗಣಿಸಿರುವುದಾಗಿ ಆರೋಪಿಸಿ ಮೌರ್ಯ ಸೇರಿದಂತೆ ಹಲವು ಶಾಸಕರು ಬಿಜೆಪಿಗೆ ರಾಜೀನಾಮೆ ನೀಡಿದ್ದರು. ಬಿಜೆಪಿಗೆ ರಾಜೀನಾಮೆ ನೀಡಿದ್ದ ಬೆನ್ನಲ್ಲೇ ಎಂಟು ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ರಹಿತ ವಾರಂಟ್ ಅನ್ನು ಜಾರಿಗೊಳಿಸಿರುವುದಾಗಿ ಮೌರ್ಯ ಹೇಳಿದರು.
ರಾಜೀನಾಮೆ ನೀಡಿದ ಎರಡನೇ ದಿನಕ್ಕೆ ನನ್ನ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದ್ದರು. ಇನ್ನೂ 10-12 ಕೇಸ್ ಗಳನ್ನು ನನ್ನ ಮೇಲೆ ಹಾಕಲಿ. ನನ್ನ ನೈತಿಕತೆಯನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ. ಹೆಚ್ಚು ತೊಂದರೆ ಕೊಟ್ಟಷ್ಟೂ ನಾನು ಮತ್ತಷ್ಟು ಬಲಿಷ್ಠನಾಗುವ ಮೂಲಕ ಬಿಜೆಪಿಯನ್ನು ಪರಾಜಯಗೊಳಿಸುವುದಾಗಿ ಹೇಳಿದರು.