ವಿಜಯಪುರ : ಬಿಜೆಪಿ ಬಂಡಾಯ ಅಭ್ಯರ್ಥಿ ಡಾ.ಬಾಬುರಾಜೇಂದ್ರ ನಾಯಿಕ ಪಕ್ಷೇತರರಾಗಿ ತಾವು ಸಲ್ಲಿಸಿದ್ದ ನಾಮಪತ್ರ ಸೋಮವಾರ ಹಿಂಪಡೆದ ಬೆನ್ನಲ್ಲೇ ನಾಳೆ ಕಾಂಗ್ರೆಸ್ ಸೇರುವುದಾಗಿ ಘೋಷಿಸಿದ್ದಾರೆ.
ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದ್ದ ಸೋಮವಾರ ಬಂಜಾರಾ ಸಮುದಾಯದ ಕಾಂಗ್ರೆಸ್ ಮುಖಂಡರಾದ ಜಿ.ಪಂ. ಮಾಜಿ ಅಧ್ಯಕ್ಷ ಅರ್ಜುನ ರಾಠೋಡ ಜತೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ, ಜಿಲ್ಲಾ ಚುನಾವಣಾ ಅಧಿಕಾರಿ ಭೂಬಾಲನ್ ಅವರಿಗೆ ಅರ್ಜಿ ಸಲ್ಲಿಸಿ ನಾಮಪತ್ರ ಹಿಂಪಡೆದರು.
ಉದಯವಾಣಿ ಜತೆ ಮಾತನಾಡಿದ ಡಾ.ಬಾಬುರಾಜೇಂದ್ರ ನಾಯಿಕ್, ವ್ಯಕ್ತಿ ಗೌರವ, ಸೌಜನ್ಯತೆ ಇಲ್ಲದ ಸ್ಥಳದಲ್ಲಿ ನಾನು ಇರಲು ಇಷ್ಟಪಡುವುದಿಲ್ಲ. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ನನ್ನೊಂದಿಗೆ ನೇರವಾಗಿ ಮಾತನಾಡಿದ್ದು, ಯಾವುದೇ ಷರತ್ತಿಲ್ಲದೇ ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿದ್ದೇನೆ ಎಂದರು.
ಬಂಜಾರಾ ಸಮುದಾಯಕ್ಕೆ ಬಿಜೆಪಿ ಅಭ್ಯರ್ಥಿ- ಸಂಸದ ರಮೇಶ ಜಿಗಜಿಣಗಿ ಅಪಮಾನ ಮಾಡಿದ ಹಿನ್ನೆಲೆಯಲ್ಲಿ ಸ್ವಾಭಿಮಾನಕ್ಕಾಗಿ ನಾಮಪತ್ರ ಸಲ್ಲಿಸಿದ್ದೆ. ಆದರೆ ಸಮಾಜದ ಮುಖಂಡರ ಸಲಹೆ ಮೇರೆಗೆ ನಾಮಪತ್ರ ಸಲ್ಲಿಸಿದ್ದೆ. ಸಮುದಾಯದ ಜನರೊಂದಿಗೆ ಹೆಜ್ಜೆ ಹಾಕಲಿದ್ದು, ಬಿಜೆಪಿ ಪಕ್ಷದಲ್ಲಿ ನಡೆಯುತ್ತಿರುವ ವ್ಯಕ್ತಿ ಆಧಾರಿತ ಹಿಡಿತದ ರಾಜಕೀಯದ ವಿರುದ್ಧ ನನ್ನ ಹೋರಾಟ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಸೇರ್ಪಡೆಗೆ ಮುನ್ನ ನಾನೂ ಯಾವುದೇ ಬೇಡಿಕೆ ಇಟ್ಟಿಲ್ಲ, ಕಾಂಗ್ರೆಸ್ ನಾಯಕರೂ ನಿರ್ದಿಷ್ಟವಾಗಿ ಯಾವುದೇ ಭರವಸೆ ನೀಡಿಲ್ಲ. ಆದರೆ ಭವಿಷ್ಯದಲ್ಲಿ ಗೌರವಯುತ ಅವಕಾಶ ನೀಡುವುದಾಗಿ ಹೇಳಿದ್ದು, ಸೌಜನ್ಯದ ಸ್ಪಂದನೆಗೆ ನಾನು ಸಮ್ಮತಿ ನೀಡಿದ್ದೇನೆ ಎಂದು ಡಾ.ನಾಯಿಕ್ ವಿವರಿಸಿದರು.