Advertisement

ಪ.ಬಂ: BJP ಬೃಹತ್‌ ರಾಲಿ; ಕಾಲ್‌ತುಳಿತದಿಂದಾಗಿ ಮೋದಿ ಭಾಷಣ ಮೊಟಕು

10:14 AM Feb 02, 2019 | Team Udayavani |

ಠಾಕೂರ್‌ನಗರ : ಭಾರೀ ಕರತಾಡನ, ಮುಗಿಲೇರಿದ ಉಘೇ ಉಘೇ, ಬೃಹತ್‌ ಬೆಂಬಲದ ನಡುವೆ ನೆರೆದ ಜನಜಂಗುಳಿಯಲ್ಲಿ ಕಾಲ್‌ತುಳಿತದಂತಹ ಗಂಭೀರ ಸ್ಥಿತಿ ಏರ್ಪಟ್ಟ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರಿಂದು ಪಶ್ಚಿಮ ಬಂಗಾಲದ ಉತ್ತರ 24 ಪರಗಣ ಜಿಲ್ಲೆಯ ಠಾಕೂರ್‌ಗಂಜ್‌ ನಲ್ಲಿನ ತಮ್ಮ ಭಾಷಣವನ್ನು ಅರ್ಧಕ್ಕೇ ನಿಲ್ಲಿಸಬೇಕಾಯಿತು.

Advertisement

ನೆರೆದ ಬೃಹತ್‌ ಜನಸಮೂಹದಲ್ಲಿ ಅನೇಕ ಮಹಿಳೆಯರು ಗಾಯಗೊಂಡರೆಂದು ಹಿರಿಯ ಪೊಲೀಸ್‌ ಅಧಿಕಾರಿ ಹೇಳಿದರು. 

ಬಂಗಾಲಿ ಭಾಷೆಯಲ್ಲೇ ತನ್ನ ಚುನಾವಣಾ ಪ್ರಚಾರ ಭಾಷಣ ಆರಂಭಿಸಿದ ಪ್ರಧಾನಿ ಮೋದಿ ಅವರನ್ನು ನೆರೆದ ಬೃಹತ್‌ ಜನಸಮೂಹ ಭಾರೀ ಕರತಾಡನ ಮತ್ತು ಅಭಿನಂದನೆಗಳೊಂದಿಗೆ ಸ್ವಾಗತಿಸಿತು. ಪರಿಶಿಷ್ಟ ಜಾತಿಯ ಮಥುವಾ ಸಮುದಾಯದ ಜನರು ಬೃಹತ್‌ ಸಂಖ್ಯೆಯಲ್ಲಿ ಜಮಾಯಿಸಿದ್ದು ಅವರು ಪ್ರಧಾನಿ ಬಂಗಾಲಿಯಲ್ಲಿ ಭಾಷಣ ಆರಂಭಿಸುತ್ತಿದ್ದಂತೆಯೇ ಭಾರೀ ಕರತಾಡನಗೈದು ಮುಗಿಲುಮುಟ್ಟುವ ರೀತಿಯಲ್ಲಿ ಅಭಿನಂದನೆ ಸೂಚಿಸಿದರು. 

ಮೋದಿ ಭಾಷಣ ಮಾಡುತ್ತಿದ್ದಂತೆಯೇ  ರಾಲಿ ತಾಣದ ಹೊರಗೆ, ಬೇಲಿಯಾಚೆ ನೆರೆದಿದ್ದ ಮಥುವಾ ಸಮುದಾಯದ ಜನರು ಮೈದಾನದ ಒಳನುಗ್ಗಲು ಪ್ರಯತ್ನಿಸಿದರು. ಆಗ ಕಾಲ್‌ ತುಳಿತದಂತಹ ಸನ್ನಿವೇಶ ಏರ್ಪಟ್ಟಿತು.

ಮೋದಿ ಅವರು ರಾಲಿ ಮೈದಾನದಲ್ಲಿದ್ದ ನೆರೆದಿದ್ದ ಜನರಿಗೆ ಶಾಂತಿ ಮತ್ತು ಸಭಾ ಘನತೆಯನ್ನು ಕಾಪಿಡುವಂತೆ ಪದೇ ಪದೇ ಕೋರಿದರು. ‘ನೀವೆಲ್ಲ ನಿಂತಲ್ಲೇ ನಿಂತಿರಿ, ಯಾರೂ ರಾಲಿಯ ಒಳ ವೃತದೊಳಗೆ ನುಗ್ಗಿ ಬರಲು ಯತ್ನಿಸಬೇಡಿ’ ಎಂದು ಮೋದಿ ಜನಸಮೂಹವನ್ನು ಶಾಂತಗೊಳಿಸಲು ಯತ್ನಿಸಿದರು. ಆದರೆ ಯಾವುದೂ ಫ‌ಲಕಾರಿ ಆಗದಿದ್ದಾಗ ಹೆಚ್ಚಿನ ಅನಾಹುತ ಆಗದಿರಲೆಂಬ ಕಾರಣಕ್ಕೆ ತಮ್ಮ ಭಾಷಣವನ್ನು ಅರ್ಧದಲ್ಲೇ ನಿಲ್ಲಿಸಿದರು. ಆಗಿನ್ನೂ ಮೋದಿ ಅವರು ಭಾಷಣ ಆರಂಭಿಸಿ ಕೇವಲ 14 ನಿಮಿಷಗಳು ಮಾತ್ರವೇ ಆಗಿದ್ದವು. 

Advertisement

ಜನಸಂದೋಹದಲ್ಲಿ ಸಿಲುಕಿಕೊಂಡ ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸಲು ಬಿಜೆಪಿ ಕಾರ್ಯಕರ್ತರು ಮತ್ತು ಸ್ವಯಂ ಸೇವಕರು  ಮುನ್ನುಗ್ಗಿದರು. 

ಪಶ್ಚಿಮ ಬಂಗಾಲದಲ್ಲಿ ಮಥುವಾ ಸಮುದಾಯದವರು 30 ಲಕ್ಷದಷ್ಟಿದ್ದು ಉತ್ತರ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳ ಕನಿಷ್ಠ ಐದು ಲೋಕ ಸಭಾ ಸೀಟುಗಳ ಮೇಲೆ ಇವರ ನಿರ್ಣಾಯಕ ಪ್ರಭಾವ ಇದೆ. 

Advertisement

Udayavani is now on Telegram. Click here to join our channel and stay updated with the latest news.

Next