ಬೆಂಗಳೂರು: ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿರುವ ಬಿಜೆಪಿಯ ಮೊದಲ ಹಂತದ 72 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ ಬೆನ್ನಲ್ಲೇ ಪಕ್ಷದೊಳಗೆ ಅಸಮಾಧಾನ, ಬಂಡಾಯ ಬಿಸಿ ಭುಗಿಲೆದ್ದಿದೆ.
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಎನ್ ಆರ್ ರಮೇಶ್ ಆಕ್ರೋಶ ವ್ಯಕ್ತಪಡಿಸಿದ್ದು, ತನಗೆ ಟಿಕೆಟ್ ತಪ್ಪಲು ಕೇಂದ್ರ ಸಚಿವ ಅನಂತ್ ಕುಮಾರ್ ಅವರೇ ಕಾರಣ ಎಂದು ಆರೋಪಿಸಿದ್ದಾರೆ. ಚಿಕ್ಕಪೇಟೆಯಲ್ಲಿ ಉದಯ ಗರುಡಾಚಾರ್ಯಗೆ ಬಿಜೆಪಿ ಟಿಕೆಟ್ ಖಚಿತವಾಗಿರುವುದು ರಮೇಶ್ ಕೋಪಕ್ಕೆ ಕಾರಣವಾಗಿದೆ.
ಎನ್ ಆರ್ ರಮೇಶ್ ಗೆ ಬಿಜೆಪಿ ಟಿಕೆಟ್ ಕೊಡಬೇಕೆಂದು ಆಗ್ರಹಿಸಿ ರಮೇಶ್ ಪರ ಕಾರ್ಯಕರ್ತರು ಚಿಕ್ಕಪೇಟೆಯಲ್ಲಿ ಬಂದ್ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.
ಮತ್ತೊಂದೆಡೆ ಬಿಎಸ್ ಯಡಿಯೂರಪ್ಪ ಅವರನ್ನು ಹೊರತುಪಡಿಸಿ ಇತರೆ ಯಾವುದೇ ಸಂಸದರಿಗೆ ವಿಧಾನಸಭಾ ಚುನಾವಣಾ ಟಿಕೆಟ್ ಇಲ್ಲ ಎಂದು ಬಿಜೆಪಿ ಹೈಕಮಾಂಡ್ ತೀರ್ಮಾನಿಸಿತ್ತು. ಆದರೆ ನಿಲುವು ಸಡಿಲಿಸಿರುವ ಬಿಜೆಪಿ ವರಿಷ್ಠರು ಸಂಸದ ಶ್ರೀರಾಮುಲುಗೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಅಂತಿಮಗೊಳಿಸಿದ್ದಾರೆ. ಇದರಿಂದಾಗಿ ಹಾಲಿ ಶಾಸಕರಾಗಿದ್ದ ಎನ್ .ತಿಪ್ಪೇಸ್ವಾಮಿ ಅಸಮಾಧಾನಗೊಂಡಿದ್ದು, ಪಕ್ಷದ ಹಿರಿಯರ ಜೊತೆ ಮಾತುಕತೆ ನಡೆಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಬಸವಕಲ್ಯಾಣದಲ್ಲಿ ಬಿಜೆಪಿ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ವಿರುದ್ಧ ಎಂಜಿ ಮೂಳೆ ಸೆಡ್ಡು ಹೊಡೆಯಲು ಮುಂದಾಗಿದ್ದರೆ, ಶಿಗ್ಗಾಂವ್ ವಿಧಾನಸಭಾ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ ವಿರುದ್ಧ ಸೋಮಣ್ಣ ಬೇವಿನ ಮರದ್ ಪಕ್ಷೇತರರಾಗಿ ಸ್ಪರ್ಧಿಸಲು ಚಿಂತನೆ ನಡೆಸುತ್ತಿದ್ದಾರೆ.
ಮತ್ತೊಂದೆಡೆ ಮೊದಲ ಪಟ್ಟಿ ಬಿಡುಗಡೆಯಾದ ಬಳಿಕ ಪಕ್ಷದೊಳಗೆ ಯಾವುದೇ ಅಸಮಾಧಾನ ಇಲ್ಲ, ಆ ರೀತಿ ಏನಾದರು ಇದ್ದರೆ ಅಂತಹ ಮುಖಂಡರನ್ನು ಕರೆದು ಮಾತುಕತೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.