Advertisement

ಭಯೋತ್ಪಾದನೆ ವಿರುದ್ಧ ಬಿಜೆಪಿ ಪ್ರತಿಭಟನೆ

07:27 AM Feb 18, 2019 | Team Udayavani |

ಮಂಡ್ಯ: ಜಮ್ಮುಕಾಶ್ಮೀರದ ಪುಲ್ವಾಮದ ಆವಂತಿಪುರದ ಹೆದ್ದಾರಿಯಲ್ಲಿ ನಡೆದ ಉಗ್ರರ ದಾಳಿಯಲ್ಲಿ 44 ಮಂದಿ ಸೈನಿಕರು ಹುತಾತ್ಮರಾದ ಹಿನ್ನಲೆಯಲ್ಲಿ ದೇಶದಲ್ಲಿನ ಭಯೋತ್ಪಾದನೆಯನ್ನು ಬುಡಮಟ್ಟದಿಂದ ಕಿತ್ತು ಹಾಕಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Advertisement

ನಗರದ ಜಯಚಾಮರಾಜ ಒಡೆಯರ್‌ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಧರಣಿ ನಡೆಸಿದರು. ಬಿಜೆಪಿ ಮುಖಂಡ ಡಾ.ಸಿದ್ದರಾಮಯ್ಯ ಮಾತನಾಡಿ, ಫೆ.14ರ ಘಟನೆ ನಂತರ ದೇಶದಲ್ಲಿ ಗಂಭೀರ ಸ್ಥಿತಿ ನಿರ್ಮಾಣವಾಗಿದೆ.

ಉಗ್ರವಾದದ ವಿರುದ್ಧ ಸೆಣೆಸುತ್ತಿರುವ ಭಾರತೀಯ ಸೇನೆ, ಅರೆಮೀಸಲು ಪಡೆ ಮತ್ತಿತರರ ಭದ್ರತಾ ಸಂಸ್ಥೆಗಳಿಗೆ ಸಂಪೂರ್ಣ ಬೆಂಬಲ ನೀಡಬೇಕು. ಕೇಂದ್ರ ಸರ್ಕಾರ ಕೈಗೊಳ್ಳುವ ನಿರ್ಣಯಗಳಿಗೆ ಎಲ್ಲ ರೀತಿಯ ಬೆಂಬಲವನ್ನು ಪûಾತೀತವಾಗಿ ನೀಡಬೇಕು ಎಂದರು.

ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಪಕ್ಷ, ಜಾತಿ, ಬೇದ, ಧರ್ಮ ಮರೆತು ಸ್ಪಂದಿಸಬೇಕಾಗಿದೆ. ದೇಶದ್ರೋಹಿ ಶಕ್ತಿಗಳ ವಿರುದ್ಧ ಹೋರಾಡುತ್ತಿರುವ ನಮ್ಮ ಸೈನಿಕರು ಹೋರಾಟದಲ್ಲಿ ನಿರ್ಣಯಾತ್ಮಕ ವಿಷಯ ಸಾಧಿಸುವ ದೃಷ್ಟಿಯಿಂದ ಸೈನಿಕ ನೈತಿಕ ಸ್ಥೆçರ್ಯ ಹೆಚ್ಚಿಸಬೇಕು ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ, ಉಗ್ರವಾದದ ವಿರುದ್ಧ ನಿರ್ಧಾಕ್ಷೀಣ್ಯ ಕ್ರಮ ಕೈಗೊಳ್ಳುವುದಾಗಿ ದೇಶದ ಜನರಿಗೆ ಭರವಸೆ ನೀಡಿದ್ದಾರೆ. ಭಾರತೀಯ ಸೇನೆ ಗಡಿಯಾಚೆ ದಾಟಿ ಉಗ್ರರನ್ನು ಸದೆ ಬಡಿಯಲಿದ್ದಾರೆ. ಈಗಾಗಲೇ ಮಣಿಪುರದಲ್ಲಿ ನಾಗಾ ಉಗ್ರರು ಹಾಗೂ ಉರಿ ವಲಯದಲ್ಲಿ ಸೈನಿಕರ ಮೇಲೆ ದಾಳಿ ನಡೆಸಿದ ಉಗ್ರಗಾಮಿಗಳ ಹುಟ್ಟಡಗಿಸಿದ್ದಾರೆ.

Advertisement

ಈಗ ಪುಲ್ವಾಮದ ದಾಳಿಗೆ ಸಮರ್ಥವಾಗಿ ಪ್ರತ್ಯುತ್ತರ ನೀಡಲು ಭಾರತೀಯ ಸೇನೆಗೆ ಎಲ್ಲ ರೀತಿಯ ಸಹಕಾರ ನೀಡಬೇಕು ಎಂದು ತಿಳಿಸಿದರು. ಜಿಲ್ಲಾಧ್ಯಕ್ಷ ನಾಗಣ್ಣಗೌಡ ಮಾತನಾಡಿ, ಪಾಕಿಸ್ತಾನವು ಉಗ್ರವಾದವನ್ನು ಅಧಿಕೃತ ನೀತಿಯನ್ನಾಗಿ ಬಳಸುತ್ತಿದೆ. ಹಿಂದಿನ ಸರ್ಕಾರಗಳು ಉಗ್ರವಾದ ಪಿಡುಗನ್ನು ಗಂಭೀರವಾಗಿ ಪರಿಗಣಿಸದೇ ಇದ್ದುದು ಕಾರಣವಾಗಿದೆ.

ಪ್ರಸ್ತುತ ಕೇಂದ್ರ ಸರ್ಕಾರ ಉಗ್ರವಾದವನ್ನು ಬೇರು ಸಮೇತ ಕಿತ್ತು ಹಾಕಲು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಪರಿಸ್ಥಿತಿಯನ್ನು ಯಾವುದೇ ರಾಜಕೀಯಕ್ಕೆ ಬಳಸದಂತೆ ಎಚ್ಚರಿಕೆಯಿಂದ ಭಾರತೀಯ ಸೇನೆಗೆ ಸಂಪೂರ್ಣ ಬೆಂಬಲ ನೀಡಬೇಕಾಗಿದೆ ಎಂದರು.

ಧರಣಿಯಲ್ಲಿ ಬಿಜೆಪಿ ನಗರ ಘಟಕ ಅಧ್ಯಕ್ಷ ಹೆಚ್‌.ಆರ್‌.ಅರವಿಂದ್‌, ಮುಖಂಡರಾದ ಕೆ.ಜೆ.ವಿಜಯಕುಮಾರ್‌, ಶಿವಕುಮಾರ್‌ ಆರಾಧ್ಯ, ಸಿದ್ದರಾಜುಗೌಡ, ಕೆ.ಎಸ್‌.ಶಿವಶಂಕರ್‌, ಪರಮಾನಂದ, ಸುರೇಶ್‌, ನಾಗಣ್ಣ, ಮಂಜುನಾಥ್‌, ಮನು, ವರದರಾಜು, ಆನಂದ, ಮಹಾಂತಪ್ಪ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next