Advertisement

ಮಿನಿವಿಧಾನ ಸೌಧದ ಅವ್ಯವಸ್ಥೆ  ವಿರುದ್ಧ  ಬಿಜೆಪಿ ಪ್ರತಿಭಟನೆ 

01:43 PM Oct 27, 2017 | Team Udayavani |

ಮಹಾನಗರ: ಮಿನಿವಿಧಾನ ಸೌಧದಲ್ಲಿ ಸಾರ್ವಜನಿಕರಿಗೆ ಸಮರ್ಪಕವಾಗಿ ಸೇವೆ ಲಭಿಸುತ್ತಿಲ್ಲ ಎಂದು ಆರೋಪಿಸಿ ಬಿಜೆಪಿ ಜಿಲ್ಲಾ ಸಮಿತಿ ವತಿಯಿಂದ ಗುರುವಾರ ಸಂಜೆ ಮಿನಿವಿಧಾನಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ಬಿಜೆಪಿ ಮಂಗಳೂರು ನಗರ ದಕ್ಷಿಣ ಅಧ್ಯಕ್ಷ ವೇದವ್ಯಾಸ ಕಾಮತ್‌ ಮಾತನಾಡಿ, ವಿದ್ಯುತ್‌ ಬಿಲ್‌ ಪಾವತಿಸದ ಹಿನ್ನಲೆಯಲ್ಲಿ ಇಂದು ಮೆಸ್ಕಾಂ ಸಿಬಂದಿಗಳು ಫ್ಯೂಸ್‌ ತೆಗೆದುಕೊಂಡು ಹೋಗಿದ್ದರು. ಇದರಿಂದ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ವಿದ್ಯುತ್‌ ಇಲ್ಲದೆ ಬಹುತೇಕ ಕೆಲಸಗಳು ಸ್ಥಗಿತಗೊಂಡಿದ್ದವು. ಕೆಲಸಗಳಿಗಾಗಿ ಸಾಲುಗಟ್ಟಿ ನಿಂತಿದ್ದ ಜನರ ಸ್ಥಿತಿಯ ಬಗ್ಗೆ ಅಧಿಕಾರಿಗಳು ಚಿಂತಿಸುತ್ತಿಲ್ಲ. ಈವರೆಗೆ ಮಿನಿ ವಿಧಾನಸೌಧದಲ್ಲಿ ಜನರೇಟರ್‌ ವ್ಯವಸ್ಥೆಯೇ ಇಲ್ಲ ಎಂದರೆ ಅಚ್ಚರಿಯಾಗುತ್ತದೆ. ಸಿಬಂದಿಗಳ ಕೊರತೆಯಿಂದಾಗಿ ಸರಕಾರಿ ದಾಖಲೆಗಳನ್ನು ಸಾರ್ವಜನಿಕರೇ ಹುಡುಕಿ ತೆಗೆದುಕೊಳ್ಳುವ ವ್ಯವಸ್ಥೆ ಇಲ್ಲಿ ಮಾತ್ರ ಇದೆ ಎಂದರು.

ಜಿಲ್ಲಾ ವಕ್ತಾರ ಜೀತೇಂದ್ರ ಕೊಟ್ಟಾರಿ, ಭಾಸ್ಕರ್‌ ಚಂದ್ರ ಶೆಟ್ಟಿ, ದೀಪಕ್‌ ಪೈ, ಸಂಜಯ್‌ ಪ್ರಭು, ಕಿರಣ್‌ ರೈ, ಅನಿಲ್‌ ಕುಮಾರ್‌ ಅತ್ತಾವರ, ಪುರುಷೋತ್ತಮ್‌ ಭಟ್‌ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಿಂಗಳುಗಟ್ಟಲೆ ಕಾಯಬೇಕಾದ ಸ್ಥಿತಿ 
ನೋಡಲು ಅಂದವಾಗಿರುವ ಮಿನಿವಿಧಾನಸೌಧದಲ್ಲಿ ಸರಕಾರಿ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ. ಸಾರ್ವಜನಿಕರು ತಮ್ಮ ದಾಖಲೆ ಪಡೆದುಕೊಳ್ಳಲು ತಿಂಗಳುಗಟ್ಟಲೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.ಒಂದು ದಾಖಲೆಗಾಗಿ ಹಲವು ಬಾರಿ ಓಡಾಡಬೇಕಾಗಿದೆ. ಇಲ್ಲಿಗೆ ಬರುವ ಸಾರ್ವಜನಿಕರ ವಾಹನ ನಿಲುಗಡೆಗಾಗಿ ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಇಲ್ಲ. ಇಬ್ಬರು ಸಚಿವರ ಜಿಲ್ಲೆಯಲ್ಲಿಯೇ ಇಷ್ಟು ಅವ್ಯವಸ್ಥೆಗಳಿದ್ದರೂ ಈ ಬಗ್ಗೆ ಸಚಿವರುಗಳು ಗಮನಕೊಡದೆ ಪಕ್ಷದ ಕೆಲಸದಲ್ಲಿಯೇ ತಲ್ಲೀನರಾಗಿದ್ದಾರೆ. ಮುಂದಿನ ದಿನಗಳಲ್ಲಿ ಇಲ್ಲಿನ ಅವ್ಯವಸ್ಥೆ ಸರಿಪಡಿಸದೆ ಇದ್ದಲ್ಲಿ ತಾಲೂಕು ಪಂಚಾಯತ್‌ ಬಂದ್‌ ಮಾಡಿ ಪ್ರತಿಭಟನೆ ನಡೆಸಲಾಗುವುದು.
ಮೋನಪ್ಪ ಭಂಡಾರಿ , ಬಿಜೆಪಿ ಮಾಜಿ ವಿಧಾನ ಪರಿಷತ್‌ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next