ಯಾದಗಿರಿ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಉಗ್ರಗಾಮಿಗಳು ಎಂಬ ಹೇಳಿಕೆ ಖಂಡಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಬಿಜೆಪಿ ಕಚೇರಿಯಿಂದ ಕಾಂಗ್ರೆಸ್ ಕಚೇರಿವರೆಗೆ ಬೃಹತ್ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಕಾಂಗ್ರೆಸ್ ಸರಕಾರ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಬಿಜೆಪಿಯ ಸುಮಾರು 50ಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್ ಕಚೇರಿ ನುಗ್ಗಲು ಯತ್ನಿಸಿದಾಗ ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.
ಪ್ರತಿಭಟನೆ ವೇಳೆ ಜಿಲ್ಲಾ ಚುನಾವಣೆ ಉಸ್ತುವಾರಿ ನಾಗರಾವ್ ನಾಮೋಜಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರ್. ಎಸ್.ಎಸ್ ಮತ್ತು ಬಿಜೆಪಿ ಅವರು ಉಗ್ರರು ಎಂದ ಹೇಳಿರುವ ಹೇಳಿಕೆಯನ್ನು ಕೂಡಲೇ ಹಿಂಪಡೆದು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಮಾತನಾಡಿ, ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಒಂದು
ಸಮುದಾಯವನ್ನು ಒಲೈಸಿಕೊಳ್ಳಲು ಬಿಜೆಪಿ, ಆರ್.ಎಸ್.ಎಸ್ ವಿರುದ್ಧ ಆರೋಪ ಮಾಡುವುದು ಸರಿಯಲ್ಲ ಎಂದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಡಾ| ವೀರಬಸಂತರಡ್ಡಿ ಮುದ್ನಾಳ, ವೆಂಕಟರಡ್ಡಿಗೌಡ ಮುದ್ನಾಳ, ಡಾ| ಶರಣ ಭೂಪಾಲರಡ್ಡಿ ನಾಯ್ಕಲ್, ಸಾಯಿಬಣ್ಣ ಬೋರಬಂಡ, ದೇವಿಂಧ್ರನಾಥ ನಾದ, ಖಂಡಪ್ಪ ದಾಸನ, ಶರಣ ಗೌಡ ಬಾಡಿಯಾಳ, ಅಯ್ಯಣ್ಣ ಹುಂಡೇಕಾರ್, ಸುರೇಶ ಕೋಟಿಮನಿ, ಹಣಮಂತ ಇಟಗಿ, ಅಡಿವೆಪ್ಪ ಜಾಕಾ, ಗೋಪಾಲ ದಾಸನಕೇರಿ, ಶ್ರೀಕಾಂತ ಸುಬೇದಾರ, ಸ್ವಾಮಿದೇವ ದಾಸನಕೇರಿ, ವೀಣಾ ಮೋದಿ ಇತರರು ಇದ್ದರು.