Advertisement

Sagara: ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಪ್ರತಿಭಟನೆ

04:01 PM Feb 13, 2024 | Team Udayavani |

ಸಾಗರ: ಪ್ರಧಾನಿ ನರೇಂದ್ರ ಮೋದಿಯವರು ಓಬಿಸಿಗೆ ಸೇರಿದವರಲ್ಲ ಎಂದು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ನೀಡಿರುವ ಹೇಳಿಕೆ ಖಂಡಿಸಿ ಫೆ. 13ರ ಮಂಗಳವಾರ ಬಿಜೆಪಿ ಓಬಿಸಿ ಮೋರ್ಚಾದಿಂದ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

Advertisement

ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ನಗರಸಭೆ ಮಾಜಿ ಅಧ್ಯಕ್ಷೆ ಮಧುರಾ ಶಿವಾನಂದ್, ಕಾಂಗ್ರೆಸ್ ಪಕ್ಷದವರು ತೀವ್ರ ಹತಾಶೆಗೆ ಒಳಗಾಗಿದ್ದಾರೆ. ಕೇಂದ್ರ ಸರ್ಕಾರ ಮತ್ತು ಪ್ರಧಾನ ಮಂತ್ರಿಯವರ ಜನಪ್ರಿಯತೆ ಸಹಿಸದೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಜಾತಿನಿಂದನೆ ಮಾಡಿ, ಸುಳ್ಳು ಆರೋಪವನ್ನು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಹೊರೆಸಿ ಅವರ ಜನಪ್ರಿಯತೆ ಕುಗ್ಗಿಸಬಹುದು ಎನ್ನುವ ಕಾಂಗ್ರೆಸ್ ಕನಸು ಯಾವತ್ತೂ ನನಸಾಗುವುದಿಲ್ಲ. ಈ ಬಾರಿ ಸಹ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ 400ಕ್ಕೂ ಹೆಚ್ಚು ಸ್ಥಾನವನ್ನು ಬಿಜೆಪಿ ಪಡೆಯಲಿದೆ. ಸುಳ್ಳು ಆರೋಪ ಮಾಡಿರುವ ರಾಹುಲ್ ಗಾಂಧಿ ವಿರುದ್ಧ ಸೂಕ್ತ ಕಾನೂನುಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಮುಖಂಡ ಕೆ.ಎಸ್.ಪ್ರಶಾಂತ್ ಮಾತನಾಡಿ, ಕಾಂಗ್ರೆಸ್ ಜಾತಿಯನ್ನು ಆಧರಿಸಿ ಚುನಾವಣೆಯನ್ನು ಗೆಲ್ಲಬೇಕು ಎನ್ನುವ ಸಂಕಲ್ಪ ಕೈಗೊಂಡಂತೆ ಕಾಣುತ್ತಿದೆ. ಕಳೆದ ಹತ್ತುವರ್ಷದ ಅವಧಿಯಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿರುವ ಅಭಿವೃದ್ಧಿ ಕೆಲಸಗಳು ಕಳೆದ ೬೫ ವರ್ಷದಲ್ಲಿ ನಡೆದಿರಲಿಲ್ಲ. ಇದೀಗ ರಾಹುಲ್ ಗಾಂಧಿ ಹತಾಶರಾಗಿ ನರೇಂದ್ರ ಮೋದಿಯವರ ಜಾತಿ ಬಗ್ಗೆ ವಿಶ್ಲೇಷಣೆಗೆ ಇಳಿದು ಕೀಳುಮಟ್ಟದ ರಾಜಕೀಯಕ್ಕೆ ಇಳಿದಿದ್ದಾರೆ. ನರೇಂದ್ರ ಮೋದಿಯವರಿಗೆ ಅಗೌರವ ತರಿಸುವ ರೀತಿಯಲ್ಲಿ ಮಾತನಾಡಿರುವ ರಾಹುಲ್ ಗಾಂಧಿ ದೇಶವಾಸಿಗಳ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರಾಜಶೇಖರ ಗಾಳಿಪುರ ಮಾತನಾಡಿ, ನರೇಂದ್ರ ಮೋದಿ ವಿಶ್ವವೇ ಮೆಚ್ಚುವ ನಾಯಕರಾಗಿ ಹೊರಹೊಮ್ಮಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗದೆ ರಾಹುಲ್ ಗಾಂಧಿ ಪದೇಪದೇ ಮೋದಿಯವರಿಗೆ ಅಗೌರವ ತರುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ದೇಶದ ಜನರಿಗೆ ನರೇಂದ್ರ ಮೋದಿಯವರ ವ್ಯಕ್ತಿತ್ವ ಪರಿಚಯವಿದ್ದು ರಾಹುಲ್ ಗಾಂಧಿ ಹೇಳಿಕೆಯನ್ನು ಜನರು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದರು.

ಕೆ.ಆರ್.ಗಣೇಶ‌ ಪ್ರಸಾದ್, ಶ್ರೀನಿವಾಸ್ ಮೇಸ್ತ್ರಿ ಮಾತನಾಡಿದರು. ಪ್ರಮುಖರಾದ ಆನಂದ ಜನ್ನೆಹಕ್ಲು, ಅರುಣ ಕುಗ್ವೆ, ಸತೀಶ್, ಸವಿತಾ ವಾಸು, ಪ್ರೇಮಾ ಸಿಂಗ್, ಅಕ್ಷರ, ಕೃಷ್ಣ ಶೇಟ್ ಇನ್ನಿತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next