ಬಂಟ್ವಾಳ: ಸಿಎಂ ಸಿದ್ದರಾಮಯ್ಯ ಅವರು ಬಿ.ಸಿ.ರೋಡ್‌ಗೆ ಬರುವ ವೇಳೆಯೇ ಅವರ ಗಮನ ಸೆಳೆಯಲು ನಡೆಸಲುದ್ದೇಶಿಸಿದ್ದ ಪ್ರತಿಭಟನೆ ವಾಪಸ್ ಪಡೆಯಲಾಗಿದೆ. ಬಂಟ್ವಾಳ ಪುರಸಭೆ ಆಡಳಿತ ವಿರುದ್ಧ ಜಿಲ್ಲಾಧಿಕಾರಿಗೆ ಮನವಿ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆ ಯಲ್ಲಿ ಬಂಟ್ವಾಳ ಬಿಜೆಪಿ ಪುರಸಭಾ ಸದಸ್ಯರು ಪ್ರತಿಭಟನೆಗೆ ಉದ್ದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ವಾಪಸ್ ಪಡೆವಂತೆ ಜಿಲ್ಲಾಡಳಿತ ಮನವೊಲಿಸಿದ್ದು, ಯಶಸ್ವಿಯಾಗಿದೆ. ಎಸ್ಪಿ ಸೂಚನೆಯ ಮೇರೆಗೆ ಬಂಟ್ವಾಳ ಇನ್‌ಸ್ಪೆಪೆಕ್ಟರ್ ಪ್ರಕಾಶ್, ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ರವಿವಾರ ಮುಂಜಾನೆ ಪುರಸಭಾ ಸದಸ್ಯ ಗೋವಿಂದ ಪ್ರಭು ಮತ್ತು ಬಿ. ದೇವದಾಸ ಶೆಟ್ಟಿ ಅವರ ಜತೆ ಮಾತುಕತೆ ನಡೆಸಿದ್ದರು. ಜಿಲ್ಲಾಧಿಕಾರಿ ಅವರೂ ದೂರವಾಣಿಯಲ್ಲಿ ಅಹವಾಲು ಗಮನಿಸುವ ಭರವಸೆ ನೀಡಿದ್ದರು.
ಕಾರನ್ನು ಎತ್ತಿಟ್ಟ ಪೊಲೀಸರು !
ಸಿಎಂ ಬಿ.ಸಿ.ರೋಡ್‌ಗೆ ಆಗಮಿಸುವ ಮುನ್ನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬದಿಯಲ್ಲಿ ನಿಲ್ಲಿಸಿದ್ದ ಒಂದುಕಾರು, ದ್ವಿಚಕ್ರ ವಾಹನ ತೆರವುಗೊಳಿಸುವಂತೆ ಕಾರ್ಯಕ್ರಮ ಸಂಘಟಕರು ಪದೇ ಪದೇ ಸೂಚಿಸಿದರೂ ಸಂಬಂಧಿಸಿದವರು ಸ್ಪಂದಿಸಲಿಲ್ಲ. ಕೊನೆಗೆ ಸಿಬಂದಿಯೇ ವಾಹನ ಎತ್ತಿ ತೆರವು ಗೊಳಿಸಿದರು! ಇದರೊಂದಿಗೆ ನೂಕುನುಗ್ಗಲಿನಿಂದಾಗಿ ಬಿ.ಸಿ.ರೋಡ್ ಮಿನಿ ವಿಧಾನ ಸೌಧ ಮುಖದ್ವಾರದ ಬಾಗಿಲ ಚೌಕಟ್ಟಿಗೇ ಹಾನಿಯಾಗಿದ್ದು, ಸಂಜೆ ಹೊತ್ತಿಗೆ ಬದಲಿಸಿ ಹಾಕಲಾಗಿದೆ.