ಚಿಕ್ಕಮಗಳೂರು: ಗ್ರಾಮಗಳಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಕಂದಾಯ ನಿರೀಕ್ಷಕರು ಹಾಗೂ ಗ್ರಾಮಲೆಕ್ಕಾಧಿಕಾರಿಗಳು ಸದಾ ಕಾಲ ನಗರದಲ್ಲಿಯೇ ಇರುತ್ತಾರೆಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ತಹಶೀಲ್ದಾರ್ ಕೊಠಡಿ ಮುಂದೆ ಧರಣಿ ನಡೆಸಿದರು.
ಕಂದಾಯ ನೀರೀಕ್ಷಕರು ಹಾಗೂಗ್ರಾಮ ಲೆಕ್ಕಾಧಿಕಾರಿಗಳು ಕಾರ್ಯಕ್ಷೇತ್ರ ಬಿಟ್ಟು ನಗರ ಪ್ರದೇಶದ,ನಗರದ ಕೆಲವೊಂದು ಬಡಾವಣೆಗಳಲ್ಲಿ ಬಾಡಿಗೆ ರೂಂ ಪಡೆದು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ತಮಗೆ ಸಂಬಂಧಪಟ್ಟ ತಮ್ಮ ಕಾರ್ಯ ವ್ಯಾಪ್ತಿಯ ನಾಡಕಚೇರಿ ಅಥವಾ ಹೋಬಳಿ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸದೆ, ನಗರ ಪ್ರದೇಶಗಳಲ್ಲಿ ತಮ್ಮ ಕಾರ್ಯಕ್ಷೇತ್ರಗಳನ್ನು ಮಾಡಿಕೊಂಡಿದ್ದಾರೆ. ಇದರಿಂದ ಸಂಬಂಧಪಟ್ಟ ಕಚೇರಿಗೆ ಬರುವ ಸಾರ್ವಜನಿಕರು ಹಾಗೂ ರೈತಾಪಿ, ಬಡ ಕೂಲಿಕಾರ್ಮಿಕರು ಆದಾಯ ದೃಢೀಕರಣ ಪತ್ರ, ಜಾತಿ ಪ್ರಮಾಣ ಪತ್ರ, ಖಾತೆ ವರ್ಗಾವಣೆಗೆ ನಗರಕ್ಕೆ ಬಂದು ಅಧಿಕಾರಿಗಳನನ್ನು ಹುಡುಕಲು ಒಂದು ದಿನವೇ ಕಳೆದು ಹೋಗುತ್ತದೆ. ಹಾಗಾಗಿ, ಸಾರ್ವಜನಿಕರಿಗೆ ಹಾಗೂ ರೈತಾಪಿ ವರ್ಗಕ್ಕೆ ಬಹಳ ಅನಾನುಕೂಲವಾಗುತ್ತಿದೆ ಎಂದು ಹೇಳಿದರು. ಸಾರ್ವಜನಿಕರು ಹಾಗೂ ರೈತಾಪಿ ವರ್ಗದ ಸಮಯ ಹಾಗೂ ಹಣ ವ್ಯರ್ಥವಾಗುತ್ತದೆ. ಅಲ್ಲದೆ, ಅವರು ಕಾರ್ಯ ನಿರ್ವಹಿಸುತ್ತಿರುವ ಸ್ಥಳದಲ್ಲಿ ಯಾವುದೇ ಅಂತರ್ಜಾಲದ ವ್ಯವಸ್ಥೆ, ಗಣಕಯಂತ್ರ ಇಲ್ಲ. ಅವರು ಪುನಃ ಸಂಬಂಧಪಟ್ಟ ನಾಡಕಚೇರಿ ಹಾಗೂ ತಹಶೀಲ್ದಾರ್ ಕಚೇರಿಗೆ ಬಂದೇ ದಾಖಲೆಗಳನ್ನು ತೆಗೆಸಬೇಕು. ಅಧಿಕಾರಿಗಳು ಯಾವ ಕಾರಣಕ್ಕಾಗಿ ಅನಧಿಕೃತ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ? ಇದಕ್ಕೆ ಕಾನೂನಿನಲ್ಲಿ ಅವಕಾಶ ಇದೆಯಾ ಎಂಬುದನ್ನು ಕೂಲಂಕುಷವಾಗಿ ಪರಿಶೀಲಿಸಿ ರೈತಾಪಿ ವರ್ಗಕ್ಕೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ರಾಜಪ್ಪ, ಜಿಲ್ಲಾ ವಕ್ತಾರ ವರಸಿದ್ಧ ವೇಣುಗೋಪಾಲ್, ನಗರ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಇತರರು ಪಾಲ್ಗೊಂಡಿದ್ದಾರೆ.