Advertisement

ಇಂದು ಸಿಎಂ ಕಚೇರಿ ಮುತ್ತಿಗೆ

01:21 AM Jun 16, 2019 | Team Udayavani |

ಬೆಂಗಳೂರು: ಸರ್ಕಾರಿ ಭೂಮಿಯನ್ನು ಜಿಂದಾಲ್ ಸಂಸ್ಥೆಗೆ ನೀಡುತ್ತಿರುವ ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ ಬಿಜೆಪಿ ಹಮ್ಮಿಕೊಂಡಿದ್ದ ಅಹೋರಾತ್ರಿ ಪ್ರತಿಭಟನೆ ಎರಡನೇ ದಿನ ಪೂರೈಸಿದ್ದು, ಭಾನುವಾರ ಬೆಳಗ್ಗೆ ಬಿಜೆಪಿ ಮುಖಂಡರು ಮುಖ್ಯಮಂತ್ರಿ ಗೃಹಕಚೇರಿ ಕೃಷ್ಣಾಗೆ ಮುತ್ತಿಗೆ ಹಾಕಲಿದ್ದಾರೆ.

Advertisement

ಜತೆಗೆ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹವು ಜೂನ್‌ 16ರ ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಮುತ್ತಿಗೆ ಹಾಕುವುದರೊಂದಿಗೆ ಮುಕ್ತಾಯಗೊಳ್ಳಲಿದೆ.

ಸರ್ಕಾರದ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಂಸದೆ ಶೋಭಾ ಕರಂದ್ಲಾಜೆ, ಕಾನೂನಿನ ಜ್ಞಾನವಿಲ್ಲದ ಎಂ.ಬಿ.ಪಾಟೀಲ್ ರಾಜ್ಯದ ಗೃಹಮಂತ್ರಿಯಾಗಿದ್ದಾರೆ. ಇದು ನಮ್ಮ ದುರ್ದೈವ. ಜಿಂದಾಲ್ಗೆ ನಾವು ಭೂಮಿ ಮಾರಾಟ ಮಾಡಿಲ್ಲ. ಭೋಗ್ಯಕ್ಕೆ ನೀಡಿದ್ದೆವು. ಆ ಕಡತಗಳು ವಿಧಾನಸೌಧದಲ್ಲೇ ಇದೆ. ತೆರೆದು ನೋಡಬಹುದು ಎಂದು ಸರ್ಕಾರಕ್ಕೆ ಸವಾಲು ಹಾಕಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ನಿವಾಸಕ್ಕೆ ಭಾನುವಾರ ಮುತ್ತಿಗೆ ಹಾಕಲಿದ್ದೇವೆ. ಆದರೆ, ಮುಖ್ಯಮಂತ್ರಿಗಳು ಯಾವ ನಿವಾಸದಲ್ಲಿ ಇರುತ್ತೀರಿ ಎಂಬುದನ್ನು ನಮಗೆ ತಿಳಿಸಿ ಎಂದು ವ್ಯಂಗ್ಯವಾಡಿದರು.

ಜಿಂದಾಲ್ ಭೂಮಿ ಪರಭಾರೆ ವಿಚಾರಕ್ಕೆ ಆನಂದ್‌ ಸಿಂಗ್‌ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ಪಂಚತಾರಾ ಹೋಟೆಲ್ನಲ್ಲಿ ಕುಳಿತು ವ್ಯಾಪಾರ ಮಾಡುತ್ತಿದ್ದಾರೆ. ಅಲ್ಲಿಗೆ ಜಿಂದಾಲ್ನಂಥವರು ಮಾತ್ರ ಬರುತ್ತ್ತಾರೆ, ಬಡವರು ಬರುವುದಿಲ್ಲ. ಮುಖ್ಯಮಂತ್ರಿಗಳೇ ತಾಜ್‌ ವೆಸ್ಟೆಂಡ್‌ ಬಿಟ್ಟು ಹೊರಗೆ ಬಂದು ಬಡವರ ಕಷ್ಟ ಕೇಳಿ. ಶಾಲೆಯಲ್ಲಿ ಮಲಗಿದರೆ ಬಡವರ ಕಷ್ಟ ಅರ್ಥ ಆಗುವುದಿಲ್ಲ. ವಿಧಾನಸೌಧ ಅಥವಾ ಕೃಷ್ಣಾದಲ್ಲಿ ಕೂತು ಬಡವರ ಕಷ್ಟ ಕೇಳಿ ಎಂದು ಶೋಭಾ ಕರಂದ್ಲಾಜೆ ಆಗ್ರಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next