ಕೋಲಾರ: ರಾಮನಗರದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಸಿಎಂ ಮುಂದೆಯೇ ಸಂಸದ ಡಿ.ಕೆ. ಸುರೇಶ್, ಸಚಿವ ಅಶ್ವತ್ಥನಾರಾಯಣ ಮೇಲೆ ವಾಗ್ಯುದ್ಧ ನಡೆಸಿದ್ದನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನಗರದ ಹೊಸ ಬಸ್ ನಿಲ್ದಾಣದ ಬಳಿ ಡಿ.ಕೆ. ಸುರೇಶ್ ಭೂತದಹಿಸುವ ಮೂಲಕ ಪ್ರತಿಭಟಿಸಿದರು.
ಗೂಂಡಾಗಿರಿ: ಬಿಜೆಪಿ ಜಿಲ್ಲಾಧ್ಯಕ್ಷ ವೇಣುಗೋಪಾಲ್ ಮಾತನಾಡಿ, ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಗೂಂಡಾಗಿರಿಯ ಸಂಸ್ಕೃತಿಯಲ್ಲಿ ಬೆಳೆದಿದೆ. ಇದು ರಾಜ್ಯಕ್ಕೆ ಅಪಾಯದ ಸಂಕೇತವಾಗಿದೆ. ಒಬ್ಬ ಜವಾಬ್ದಾರಿಯುತ ಸಂಸದರಾಗಿ ಮುಖ್ಯಮಂತ್ರಿ ಎದುರು ಹೇಗೆ ವರ್ತಿಸಬೇಕು ಎಂಬ ಪರಿಜ್ಞಾನವೂ ಇಲ್ಲ. ಮಂತ್ರಿಯೊಬ್ಬರು ಮಾತನಾಡುತ್ತಿರುವಾಗ ಮೈಕ್ ಕಸಿದು
ಹಲ್ಲೆಗೆ ಮುಂದಾಗಿದ್ದಾರೆ. ಇಂತಹ ಗೂಂಡಾ ಸಂಸ್ಕೃತಿಯ ವ್ಯಕ್ತಿಯ ನಡೆ ಖಂಡನೀಯವಾಗಿದೆ ಎಂದು ಹೇಳಿದರು. ರಾಮನಗರ ಜಿಲ್ಲೆ ಬಿಜೆಪಿಯಿಂದ ಮಾತ್ರ ಅಭಿವೃದ್ಧಿಯಾಗಿದೆ ಎಂದು ಉಸ್ತುವಾರಿ ಸಚಿವ ಮಾತಾಡುವಾಗ ಈ ರೀತಿಯಲ್ಲಿ ವರ್ತಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಸಂವಿಧಾನದ ಆಶಯಗಳಲ್ಲಿ ಮಾತನಾಡುವ ಅವಕಾಶವಿದೆ. ಆದರೆ, ಸಂಸದ ಡಿ.ಕೆ.
ಸುರೇಶ್ ಸುಮ್ಮನೆ ಜಟಾಪಟಿ ಮಾಡಿದ್ದಾರೆ ಎಂದು ದೂರಿದರು.
ಕಾರ್ಯಕ್ರಮ ಹಾಳು ಮಾಡಲು ವರ್ತನೆ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ನಾಡಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣದ ಕಾರ್ಯಕ್ರಮದಲ್ಲಿ ಸುರೇಶ್ ಈ ರೀತಿ ನಡೆದುಕೊಂಡಿರುವುದು ಮಹಾನ್ ವ್ಯಕ್ತಿಗಳಿಗೆ ಮಾಡಿದ ಅವಮಾನವಾಗಿದೆ. ಕಾರ್ಯಕ್ರಮವನ್ನು ಹಾಳು ಮಾಡುವ ಉದ್ದೇಶದಿಂದಲೇ ಇಂತಹ ವರ್ತನೆಯನ್ನು ತೋರಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಬಿಜೆಪಿ ಕೋರ್ ಕಮಿಟಿ ಸದಸ್ಯ ವಿಜಿಕುಮಾರ್ ಮಾತನಾಡಿ, ಬಿಜೆಪಿ ಪಕ್ಷಕ್ಕೆ ಶಿಸ್ತು ಸಂಯಮ ಇದೆ ಆದರೆ ಕಾಂಗ್ರೆಸ್ ಪಕ್ಷಕ್ಕೆ ಗುಂಡಾಗಿರಿ ಸಂಸ್ಕೃತಿ ಇದೆ ಗಲಭೆಗಳು ಗಲಾಟೆಗಳನ್ನು ಸೃಷ್ಟಿ ಮಾಡಿ ಅಧಿಕಾರಕ್ಕೆ ಬರುತ್ತೇವೆ ಎಂಬುವುದು ಇದರ ಉದ್ದೇಶವಾಗಿದೆ ರಾಜ್ಯದಲ್ಲಿ ಗಲಭೆಗಳಿಗೆ ಬಿಜೆಪಿ ಪಕ್ಷ ಅದಕ್ಕೆ ಅವಕಾಶಗಳನ್ನು ನೀಡುವುದಿಲ್ಲ ಇಂತಹ ವರ್ತನೆಗಳನ್ನು ಬಿಜೆಪಿ ಸಹಿಸುವುದಿಲ್ಲ. ಬದಲಿಗೆ ತಕ್ಕ ಪಾಠ ಕಲಿಸಲಿದೆ ಮುಂದೆ ಯಾರೇ ಆಗಲಿ ಎಚ್ಚರಿಕೆಯಿಂದ ಮಾತನಾಡಬೇಕು ಎಂದರು.
ಪ್ರತಿಭಟನೆ ನೇತೃತ್ವವನ್ನು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಯುವ ಮೋರ್ಚಾಧ್ಯಕ್ಷ ಬಾಲಾಜಿ, ಜಿಲ್ಲಾ ವಕ್ತಾರ ಎಸ್.ಬಿ ಮುನಿವೆಂಕಟಪ್ಪ, ನಗರ ಅಧ್ಯಕ್ಷ ತಿಮ್ಮರಾಯಪ್ಪ, ಮುಖಂಡರಾದ ಶಿವಕುಮಾರ್, ಮಮತಮ್ಮ, ರಾಜೇಶ್ ಸಿಂಗ್, ಮಹೇಶ್ ಮುಂತಾದವರು ಇದ್ದರು.