Advertisement

ಸದಾಶಿವ ಆಯೋಗ ಕುರಿತು ಬಿಜೆಪಿ ಅಪಪ್ರಚಾರ: ಪ್ರಿಯಾಂಕ್‌

04:02 PM Mar 15, 2018 | |

ಚಿತ್ತಾಪುರ: ನ್ಯಾ| ಸದಾಶಿವ ಆಯೋಗದ ವರದಿ ಕುರಿತು ಬಿಜೆಪಿ ಸಮಾಜದಲ್ಲಿ ಅಪಪ್ರಚಾರ ಮಾಡುತ್ತಿದೆ. ಪರಿಶಿಷ್ಟ ಜಾತಿ ಪಟ್ಟಿಯಿಂದ ಯಾವುದೇ ಜಾತಿ ಕೈ ಬಿಡುವ ಪ್ರಸ್ತಾವ ಸರ್ಕಾರದ ಮುಂದಿಲ್ಲ. ಯಾವ ಜಾತಿಯನ್ನು ಕೈ ಬಿಡುವುದಿಲ್ಲ. ಈಗಿರುವ ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ ಯಾವುದೇ ಒಂದು ಜಾತಿಯನ್ನು ಪಟ್ಟಿಯಿಂದ ಕೈ ಬಿಡಬೇಕಾದರೆ ಸಂವಿಧಾನ ತಿದ್ದುಪಡಿ ಮಾಡಬೇಕಾಗುತ್ತದೆ ಎಂದು ಐಟಿ-ಬಿಟಿ ಹಾಗೂ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

Advertisement

ಪಟ್ಟಣದ ಸ್ಟೇಷನ್‌ ತಾಂಡಾದಲ್ಲಿ ಆಯೋಜಿಸಿದ್ದ ಬಂಜಾರಾ ಸಮಾಜದ ಅನೇಕ ಮುಖಂಡರು, ಯುವಕರು ಕಾಂಗ್ರೆಸ್‌ ಸೇರ್ಪಡೆಯಾಗುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗೋವಾ ರಾಜ್ಯದಲ್ಲಿ ಬಿಜೆಪಿಯವರು
ಬಂಜಾರಾ ಜನರು ಭಯೋತ್ಪಾದಕರು ಅವರನ್ನು ಗಡಿಪಾರು ಮಾಡಬೇಕು ಎಂದು ಹೇಳಿದ್ದಾರೆ. 

ಇದು ಈ ಜನಾಂಗಕ್ಕೆ ಮಾಡಿದ ದೊಡ್ಡ ಅವಮಾನ. ಇದನ್ನು ನಾನು ಮತ್ತು ಶಾಸಕ ಡಾ| ಉಮೇಶ ಜಾಧವ ಮಾತ್ರ ಖಂಡಿಸಿದ್ದೇವೆ. ಆದರೆ ರಾಜ್ಯದ ಬಿಜೆಪಿ ನಾಯಕರ್ಯಾರು ವಿರೋಧಿಸಿಲ್ಲ. ಬಿಜೆಪಿಯಲ್ಲಿರುವ ಬಂಜಾರಾ ಮುಖಂಡರು
ಮೌನ ಮುರಿದಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು. 

ಬಂಜಾರಾ ಜನಾಂಗವು ಕಾಂಗ್ರೆಸ್‌ಗೆ ಬೆನ್ನೆಲುಬು ಇದ್ದಂತೆ. ಎಪ್ಪತ್ತರ ದಶಕದಲ್ಲಿ ದೇಶದಲ್ಲಿ ಉಂಟಾದ ಭೀಕರ ಬರಗಾಲದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಮಾಡಿರುವ ಜನಪರ ಕೆಲಸ ಮತ್ತು ನೆರವು ಗಮನಿಸಿ ಈ ಜನಾಂಗ ಇಂದಿಗೂ ಕಾಂಗ್ರೆಸ್‌ನ್ನು ಬೆಂಬಲಿಸುತ್ತಿದ್ದಾರೆ. ಬಂಜಾರಾ ಜನಾಂಗದಲ್ಲಿ ಇಂದಿರಾ ಬಗ್ಗೆ ಇರುವ ಅಭಿಮಾನ
21ನೇ ಶತಮಾನದಲ್ಲೂ ಮುಂದುವರಿದಿದೆ. ಇದು ಕಾಂಗ್ರೆಸ್‌ ಪಕ್ಷ ಬಡವರ ಕುರಿತು ತೋರುತ್ತಿರುವ ಜನಪರ ನಿಲುವಿಗೆ ನಿದರ್ಶನ ಎಂದು ಹೇಳಿದರು.

ಬುದ್ಧ, ಬಸವ, ಅಂಬೇಡ್ಕರ ಅವರ ನೀತಿ, ತತ್ವಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಆಡಳಿತದಲ್ಲಿ ಪಾಲಿಸಿ ಅನುಷ್ಠಾನಕ್ಕೆ ತಂದಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗಾಗಿ ಕೇಂದ್ರದ ಬಿಜೆಪಿ ಸರ್ಕಾರ ಇಡೀ ದೇಶಕ್ಕೆ 49 ಸಾವಿರ ಕೋಟಿ ರೂ. ಅನುದಾನ ಮೀಸಲಿಟ್ಟಿದ್ದರೆ ರಾಜ್ಯ ಸರ್ಕಾರ 29 ಸಾವಿರ ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಪರಿಶಿಷ್ಟರ ಪರವಾಗಿ ಯಾರು ಇದ್ದಾರೆ ಎಂದು ಜನರು ಆಲೋಚನೆ ಮಾಡಬೇಕು ಎಂದರು. ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್‌, ತಾಪಂ ಸದಸ್ಯ ನಾಮದೇವ ರಾಠೊಡ, ಭೀಮಸಿಂಗ್‌ ಚವ್ಹಾಣ ಮಾತನಾಡಿದರು.

Advertisement

ಪುರಸಭೆ ಮಾಜಿ ಸದಸ್ಯರಾದ ಗೋವಿಂದ ನಾಯಕ ರಾಠೊಡ, ಶಿವರಾಂ ಚೌವ್ಹಾಣ ಸೇರಿದಂತೆ ಸ್ಟೇಷನ್‌ ತಾಂಡಾದ 101 ಕಾರ್ಯಕರ್ತರು ಹಾಗೂ ಮೊಗಲಾ ತಾಂಡಾದ 29 ಜನ ಕಾರ್ಯಕರ್ತರು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದರು.  ಜಿಪಂ ಸದಸ್ಯ ಶಿವಾನಂದ ಪಾಟೀಲ, ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಹೋತಿನಮಡಿ, ಉಪಾಧ್ಯಕ್ಷ ಮಹ್ಮದ್‌ ರಸೂಲ್‌ ಮುಸ್ತಫಾ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ಸಾಲಿ, ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ಮರಗೋಳ ಮುಖಂಡರಾದ ಶಂಭುಲಿಂಗ ಗುಂಡಗುರ್ತಿ, ಸುನೀಲ ದೊಡ್ಡಮನಿ, ಸೂರ್ಯಕಾಂತ ಪೂಜಾರಿ, ಚಂದ್ರಶೇಖರ ಕಾಶಿ, ನಾಗರೆಡ್ಡಿ ಗೋಪಸೇನ್‌, ಬಾಬು ನಾಗಾಯಿ, ಬಸವರಾಜ ಚಿನ್ನಮಳ್ಳಿ, ಶಂಕರ ಚೌವ್ಹಾಣ, ಶೇಖ
ಬಬ್ಲು, ಸಲೀಂ ಇದ್ದರು.

ಪಕ್ಷಪಾತ-ತಾರತಮ್ಯ ಮಾಡಿಲ್ಲ
2013ರ ಚುನಾವಣೆಯಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಿದ್ದೇನೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಕಣ್ಣಿಗೆ ಕಾಣುವಂತೆ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಇನ್ನೂ ಅನೇಕ ಕೆಲಸ ಮಾಡಬೇಕಿದೆ. ಕಳೆದ ಚುನಾವಣೆಯಲ್ಲಿ ತಾಂಡಾವೊಂದರಲ್ಲಿ ನನಗೆ ಕೇವಲ 14 ಮತಗಳು ಮಾತ್ರ ಬಂದಿದ್ದವು. ಅದನ್ನು ನಾನು ಕೆಟ್ಟದೆಂದು ಭಾವಿಸದೆ ಸಕರಾತ್ಮಕವಾಗಿ ಪರಿಗಣಿಸಿ ಆ ತಾಂಡಾದ ಅಭಿವೃದ್ಧಿ ಮಾಡುವಲ್ಲಿ ಪಕ್ಷಪಾತ, ತಾರಾತಮ್ಯ, ದ್ವೇಷದ ರಾಜಕಾರಣ ಮಾಡಿಲ್ಲ. ಅಭಿವೃದ್ಧಿಯೇ ನನ್ನ ಮೂಲ ಉದ್ದೇಶ ಎಂದು ತಿಳಿದು ಅಭಿವೃದ್ಧಿ ಪಡಿಸಿದ್ದೇನೆ.
 ಪ್ರಿಯಾಂಕ್‌ ಖರ್ಗೆ, ಐಟಿ-ಬಿಟಿ ಹಾಗೂ ಪ್ರವಾಸೋದ್ಯಮ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next