ಸುಬ್ರಹ್ಮಣ್ಯ: ಕಿದು ಸಂಶೋಧನ ಸಂಸ್ಥೆಯನ್ನು ಮುಂದಿನ ಎರಡು ವರ್ಷಗಳಲ್ಲಿ ಕೃಷಿ ವಿಶ್ವವಿದ್ಯಾಲಯವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು ಭರವಸೆ ನೀಡಿದರು.
ಸಿಪಿಸಿಆರ್‌ಐ ನೇತೃತ್ವದಲ್ಲಿ ಕಿದುವಿನಲ್ಲಿ ನಡೆದ ಎರಡು ದಿನಗಳ ಕೃಷಿ ಮತ್ತು ತೋಟಗಾರಿಕೆ ಮೇಳಕ್ಕೆ ರವಿವಾರ ಭೇಟಿ ನೀಡಿದ ಅವರು ಕೃಷಿಕರನ್ನು ಉದ್ದೇಶಿಸಿ ಮಾತನಾಡಿದರು.
ಕೃಷಿ ಅಭಿವೃದ್ಧಿಗಾಗಿ ಕೊçಲದ ಪಶು ವೈದ್ಯಕೀಯ ಕೇಂದ್ರ ಮತ್ತು ಕಿದುವಿನ ತೆಂಗು ಅಭಿವೃದ್ಧಿ ಸಂಶೋಧನ ಕೇಂದ್ರಗಳೆರಡನ್ನೂ ಅಭಿವೃದ್ಧಿಪಡಿಸುವ ಅಗತ್ಯವಿದೆ. ಪ್ರಸ್ತುತ ಕೇಂದ್ರ ಮತ್ತು ರಾಜ್ಯ ಎರಡೂ ಕಡೆ ಬಿಜೆಪಿಯೇ ಆಡಳಿತದಲ್ಲಿರುವುದರಿಂದ ಈ ಸಂಸ್ಥೆಗಳ ಅಭಿವೃದ್ಧಿ ಸುಲಭಸಾಧ್ಯ. ಮುಂದಿನ ದಿನಗಳಲ್ಲಿ ಕಿದು ಸಂಸ್ಥೆ ಕೃಷಿ ವಿಶ್ವವಿದ್ಯಾಲಯವಾಗಿ ಅಭಿವೃದ್ಧಿ ಕಾಣಲಿದ್ದು, ಪೂರಕ ಸೌಕರ್ಯ, ಅನುದಾನ ಒದಗಿಸಲು ಶ್ರಮಿಸುವುದಾಗಿ ನಳಿನ್ ಹೇಳಿದರು.
2002ರಿಂದ ಕಿದು ಸಂಸ್ಥೆ ತೊಂದರೆ ಅನುಭವಿಸುತ್ತಿದ್ದು, ಕಾನೂನು ತೊಡಕುಗಳೂ ಇವೆ. ಅವುಗಳ ನಿವಾರಣೆಗೆ ಮತ್ತು ಹೊಸ ಬೇಡಿಕೆಯಾಗಿ ವಿಶ್ವವಿದ್ಯಾಲಯವಾಗಿ ಅಭಿವೃದ್ಧಿಪಡಿಸಲು ಸಚಿವ ಸದಾನಂದ ಗೌಡರ ನೇತೃತ್ವದಲ್ಲಿ ಕೇಂದ್ರ ವಿತ್ತ ಸಚಿವ, ಅರಣ್ಯ ಮತ್ತು ಕೃಷಿ ಸಚಿವರ ಜತೆ ಚರ್ಚಿಸಿದ್ದೇವೆ. ಕೃಷಿ ವಿಶ್ವವಿದ್ಯಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ಲಭಿಸಿದೆ ಎಂದರು.
ಮುಖ್ಯಮಂತ್ರಿ ಜತೆ ಚರ್ಚೆ: ಅಂಗಾರ
ಕೃಷಿ ಮೇಳಕ್ಕೆ ಶಾಸಕ ಎಸ್. ಅಂಗಾರ ಅವರೂ ಭೇಟಿ ನೀಡಿದರು. ಭಾರತ ಕೃಷಿ ಪ್ರಧಾನ ಆರ್ಥಿಕ ಶಕ್ತಿಯಾಗಿದೆ. ಅದನ್ನು ಸದೃಢಗೊಳಿಸಲು ಕಾಲ ಸನ್ನಿಹಿತಗೊಂಡಿದ್ದು, ಇಂತಹ ಕೃಷಿ ಮೇಳಗಳು ಇದಕ್ಕೆ ಸಹಕಾರಿ ಎಂದರು. ಕಿದು ಕೇಂದ್ರದ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿದ್ದು, ಸಮಸ್ಯೆ ಶೀಘ್ರ ಪರಿಹಾರ ಕಾಣಲಿದೆ ಎಂದರು.
ಐಸಿಎಆರ್ ನಿರ್ದೇಶಕಿ ಡಾ| ಅನಿತ ಕರೂನ್ ಸಂಸ್ಥೆ ಎದುರಿಸುತ್ತಿರುವ ಸಮಸ್ಯೆ ಗಳನ್ನು ಸಂಸದರು, ಶಾಸಕರ ಗಮನಕ್ಕೆ ತಂದರು. ಅಧಿ ಕಾರಿಗಳಾದ ಡಾ| ಮುರಳೀಧರ್, ಡಾ| ರವಿ ಭಟ್, ಡಾ| ವಿನಿರಾಳ್, ಡಾ| ಕೆ. ಸಂಶುದ್ದೀನ್ ಉಪಸ್ಥಿತರಿದ್ದರು.