ಪಾಟ್ನಾ: ಕೋವಿಡ್ 19 ಸೋಂಕಿನ ಸುರಕ್ಷತಾ ಕ್ರಮದೊಂದಿಗೆ ಬಿಹಾರ ವಿಧಾನಸಭಾ ಕ್ಷೇತ್ರದ ಮೊದಲ ಹಂತದ ಮತದಾನ ಬುಧವಾರ(ಅಕ್ಟೋಬರ್ 28, 2020) ಬೆಳಗ್ಗೆ ಆರಂಭಗೊಂಡಿದ್ದು, ಹಿಸುವಾ ವಿಧಾನಸಭಾ ಕ್ಷೇತ್ರದ ಫುಲ್ಮಾ ಗ್ರಾಮದಲ್ಲಿ ಬಿಜೆಪಿ ಮತಗಟ್ಟೆ ಅಧಿಕಾರಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬಿಜೆಪಿ ಮತಗಟ್ಟೆ ಅಧಿಕಾರಿ ಕೃಷ್ಣಾ ಕುಮಾರ್ ಸಿಂಗ್ ಮತಗಟ್ಟೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಕುಟುಂಬ ಸದಸ್ಯರ ಹೇಳಿಕೆ ಪ್ರಕಾರ, ಮತಗಟ್ಟೆಯಲ್ಲಿ ಕುಳಿತಿದ್ದ ಸಂದರ್ಭದಲ್ಲಿ ದಿಢೀರನೆ ಎದೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಸದಾರ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಅಷ್ಟರಲ್ಲಿಯೇ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ ಎಂದು ವರದಿ ಹೇಳಿದೆ.
ಬಿಹಾರ ಮೊದಲ ಹಂತದ ಚುನಾವಣೆಯಲ್ಲಿ ಬೆಳಗ್ಗೆ 9ಗಂಟೆಯವರೆಗೆ ಶೇ.7ರಷ್ಟು ಮತದಾನ ನಡೆದಿದ್ದು, ಸಂಜೆ 6ಗಂಟೆವರೆಗೆ ಮತದಾನ ನಡೆಯಲಿದೆ. ಮತ್ತೊಂದೆಡೆ ಪ್ರಥಮ ಹಂತದ ಚುನಾವಣೆಯಲ್ಲಿ ಮತದಾನ ಮಾಡಲು ಆಗಮಿಸಿದ್ದ ಮತದಾರ ಸಾವನ್ನಪ್ಪಿರುವ ಘಟನೆ ಸಸಾರಾಮ್ ಕ್ಷೇತ್ರದಲ್ಲಿ ನಡೆದಿದೆ.
ಇದನ್ನೂ ಓದಿ:ಮಂಗಳೂರು: ದುಬೈನಿಂದ ಅಕ್ರಮವಾಗಿ ಚಿನ್ನ ತಂದು, ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದ ಪ್ರಯಾಣಿಕ
ಮೊದಲ ಹಂತದ ಚುನಾವಣೆಯಲ್ಲಿ 71 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಆರ್ ಜೆಡಿಯ 42, ಜೆಡಿಯುನ 35, ಬಿಜೆಪಿಯ 29, ಕಾಂಗ್ರೆಸ್ ನ 21, ಸಿಪಿಐಎಂ, 8 ಸೇರಿದಂತೆ ಒಟ್ಟು 1066 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.