Advertisement

BJP Politics: ಇನ್ಮೇಲೆ ನಾನು ಸೈಲೆಂಟ್, ರಮೇಶ ಜಾರಕಿಹೊಳಿ ವೈಲೆಂಟ್ ಎಂದ ಬಸನಗೌಡ ಯತ್ನಾಳ್‌

09:16 PM Dec 06, 2024 | Team Udayavani |

ಹುಬ್ಬಳ್ಳಿ: ನಾನು ಸದ್ಯಕ್ಕೆ ಸೈಲೆಂಟ್ ಆಗುತ್ತೇನೆ. ಮುಂದೆ ಒಬ್ಬೊಬ್ಬರಾಗಿ ವೈಲೆಂಟ್ ಆಗುತ್ತಾ ಹೋಗುತ್ತೇವೆ. ಆ ರೀತಿಯ ಪ್ಲಾನ್ ಹಾಕಿಕೊಂಡಿದ್ದೇವೆ. ಇನ್ಮೇಲೆ ನಾನು ಸೈಲೆಂಟ್, ರಮೇಶ ಜಾರಕಿಹೊಳಿ ವೈಲೆಂಟ್ ಆಗಲಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದರು.

Advertisement

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ ನನ್ನ ಮೇಲೆ ಪಕ್ಷದ ಹೈಕಮಾಂಡ್‌ಗೆ ಯಾವಾಗಲೂ ಪ್ರೀತಿ ಇದೆ. ನನ್ನನ್ನು ಮುಗಿಸುತ್ತೇನೆ ಅನ್ನುವವರಿಂದ ಏನೂ ಆಗಲ್ಲ, ಯಾರಿಂದಲೂ ನನಗೆ ಏನು ಮಾಡಲು ಆಗಲ್ಲ. ಯಾರು ಯಾರು ಏನು ಉತ್ತರ ಕೊಡುತ್ತಾರೋ ನೋಡೋಣ. ಎಲ್ಲರಿಗೂ ಉತ್ತರ ಕೊಡಲು ನಾನು ಸದಾ ಸಿದ್ಧನಿದ್ದೇನೆ. ನಾನು ಅಂಜಿಲ್ಲ, ಅಳುಕಿಲ್ಲ, ಮುಖ ಸಪ್ಪಗೆ ಮಾಡಿಲ್ಲ. ದೆಹಲಿಯಿಂದ ಹಸನ್ಮುಖಿಯಾಗಿ ಬರುತ್ತಿದ್ದೇನೆ ಅನ್ನುವುದು ಅರ್ಥ ಮಾಡಿಕೊಳ್ಳಿ.‌ ನನಗೆ ಯಾರು ತರಾಟೆಗೆ ತೆಗೆದುಕೊಂಡಿಲ್ಲ. ದೆಹಲಿ ನಾಯಕರು ನನಗೆ ಶಹಬ್ಬಾಸ್ ಗಿರಿ ಕೊಟ್ಟಿದ್ದಾರೆ.‌ ಕೇಂದ್ರದ ಶಿಸ್ತು ಸಮಿತಿ ವರಿಷ್ಠರು ಕೊಟ್ಟ ನೋಟಿಸ್‌ಗೆ ಉತ್ತರ ಕೊಟ್ಟಿದ್ದೇನೆ ಎಂದರು.

ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ: 

ನಮ್ಮ ನಡುವೆ ಯಾರು ಸಂಧಾನ ಮಾಡುವವರಿದ್ದಾರೆ? ಶಿಸ್ತು ಸಮಿತಿ ಅಧ್ಯಕ್ಷ ಮತ್ತು ರಾಜನಾಥ್ ಸಿಂಗ್‌ರನ್ನು ಭೇಟಿಯಾಗಿದ್ದು ಬಿಟ್ಟರೆ ಬೇರೆ ಯಾರನ್ನು ಭೇಟಿಯಾಗಿಲ್ಲ ಎಂದರು. ವಕ್ಫ್ ಕಾನೂನಿನ ಬಗ್ಗೆ ನಾವು ಹೆಚ್ಚು ಗಮನ ಕೊಟ್ಟಿದ್ದೇವೆ. ನನಗೆ ಪರ್ಮನೆಂಟ್ ಆಗಿ ಸೈಲೆಂಟ್ ಆಗಿರೋಕೆ ಹೇಳಿದ್ದಾರೆ.‌ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದರು.

ನಮ್ಮ ಟಾರ್ಗೆಟ್ ವಿಜಯೇಂದ್ರ ಅಲ್ಲ:

ನಮ್ಮ ನಾಯಕರ ವಿರುದ್ಧ ಗುಪ್ತ ಪತ್ರಗಳನ್ನು ಬರೆಯುತ್ತೇನೆ. ವಿಜಯೇಂದ್ರ ಸೇರಿ ಎಲ್ಲರ ಬಗ್ಗೆಯೂ ಬರೆಯುತ್ತೇವೆ.‌ ನಮ್ಮ ಟಾರ್ಗೆಟ್ ವಿಜಯೇಂದ್ರ ಅಲ್ಲ.‌ ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಅನ್ನುವುದೇ ನಮ್ಮ ಟಾರ್ಗೆಟ್. ನಾವು ಅಧಿಕಾರಕ್ಕೆ ಬಂದಾಗ ಪ್ರಾಮಾಣಿಕರನ್ನು ಸಿಎಂ ಮಾಡುವ ಗುರಿಯಿದೆ. ಭ್ರಷ್ಟರು ಸಿಎಂ ಆಗಬಾರದು ಅನ್ನುವ ಉದ್ದೇಶವಿದೆ. ಮನೆಯಲ್ಲಿ ಗದ್ದಲ ಮಾಡಬೇಡ ಅಂತ ಹೇಳುತ್ತಾರೆ ಅಲ್ವಾ..? ಹಾಗೆ ನನಗೂ ಹೈಕಮಾಂಡ್ ಹೇಳಿ ಕಳಿಸಿದ್ದಾರೆ ಎಂದರು.

ನನ್ನ ವಿರುದ್ಧ ಶಿಸ್ತು ಕ್ರಮದ ಪ್ರಶ್ನೆಯೇ ಇಲ್ಲ: 
ವಿಜಯೇಂದ್ರರನ್ನು ರಾಜ್ಯಾಧ್ಯಕ್ಷರನ್ನಾಗಿ ಒಪ್ಪಲ್ಲ ಅನ್ನುವ ರಮೇಶ ಜಾರಕಿಹೊಳಿ ಹೇಳಿಕೆ ವಿಚಾರವಾಗಿ, ಸದ್ಯ ನಾನು ಸೈಲೆಂಟ್, ಜಾರಕಿಹೊಳಿ ವೈಲೆಂಟ್. ಅವರಿಗೆ ಒಂದು ಪಿರಿಯೇಡ್ ಕೊಟ್ಟಿದ್ದೇವೆ.‌ ಅವರ ನಂತರ ಮತ್ತೊಬ್ಬರು ವೈಲೆಂಟ್ ಆಗುತ್ತಾರೆ.‌ ಯತ್ನಾಳ ತಣ್ಣಗಾಗಿದ್ದರೆ ಅಂತ ಹೇಳುವ ಬದಲಿಗೆ ಬರ್ಫ್ ಆಗಿದ್ದಾರೆ ಅಂತ ಬರೆಯಿರಿ. ನನ್ನಲಿರುವ ಹುರುಪು ನೋಡಿಯಾದರೂ ಬರೆಯಿರಿ. ನನ್ನದು 35 ವರ್ಷದ ರಾಜಕೀಯ ಜೀವನವಿದೆ.‌ ಕೆಟ್ಟ ಕಾಲದಲ್ಲಿ ಏನಾದರೂ ಆಗಿರಬಹುದು. ಆದರೆ ಯತ್ನಾಳರನ್ನು ಹೊರಗೆ ಹಾಕುತ್ತೀನಿ ಅನ್ನುವುದು ಮೂರ್ಖತನ. ನನ್ನ ವಿರುದ್ಧ ಶಿಸ್ತು ಕ್ರಮದ ಪ್ರಶ್ನೆಯೇ ಇಲ್ಲ. ಒಳ್ಳೆಯ ಕೆಲಸ ಮಾಡೋಕೆ ಹೇಳಿದ್ದು, ಮುಂದೆ ಒಳ್ಳೆಯ ಭವಿಷ್ಯವಿದೆ ಅಂತಾನೂ ಹೇಳಿದ್ದಾರೆ ಎಂದರು.

ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಮೊದಲಿಗೆ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಗಳಾಗಬೇಕು.‌ ನಂತರ ಇನ್ನುಳಿದ ಭಾಗದ್ದು, ಆ ಬಗ್ಗೆ ಒತ್ತಾಯಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next