Advertisement

ಬಿಜೆಪಿ ಕುದುರೆ ಕಟ್ಟಿಹಾಕ್ತೇವೆ

12:55 PM Apr 01, 2018 | Team Udayavani |

ಬೆಂಗಳೂರು: ಬಿಜೆಪಿಯು ದೇಶದ ಹತ್ತೂಂಬತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುಬಹುದು. ಆದರೆ, ಕರ್ನಾಟಕದಲ್ಲಿ ಅವರ ಅಶ್ವಮೇಧ “ಕುದುರೆ’ ಕಾಂಗ್ರೆಸ್‌ ಕಟ್ಟಿಹಾಕಲಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಶಾನ್ಯ ರಾಜ್ಯಗಳು ಸೇರಿದಂತೆ ಹತ್ತೂಂಬತ್ತು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ನಡೆಸುತ್ತಿರಬಹುದು. ಆದರೆ, ಕರ್ನಾಟಕದಲ್ಲಿ ಬಿಜೆಪಿಯನ್ನು ಖಂಡಿತವಾಗಿಯೂ ಕಟ್ಟಿಹಾಕುವ ಶಕ್ತಿ ಕಾಂಗ್ರೆಸ್‌ಗೆ ಇದೆ ಎಂದು ತಿಳಿಸಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಚುನಾವಣೆ ದೃಷ್ಟಿಯಿಂದಲೇ ಮಠ, ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಇದರಲ್ಲಿ ಹೊಸತೇನು ಇಲ್ಲ. ಕರ್ನಾಟಕ್ಕಕೆ ಬಿಜೆಪಿ ಕೊಡುಗೆ ಏನು ಎಂಬುದನ್ನು ಮುಂದಿನ ದಿನದಲ್ಲಿ ನಾವು ಮತದಾರರ ಮುಂದೆ ಬಿಚ್ಚಿಡಲಿದ್ದೇವೆ ಎಂದು ಹೇಳಿದರು.

ಅಮಿತ್‌ ಶಾ ಈ ಹಿಂದೆ ಕರ್ನಾಟಕಕ್ಕೆ ಬಂದಾಗ ತುಮಕೂರು ಮಾರ್ಗವಾಗಿ ಪ್ರವಾಸ ಮಾಡಿದ್ದರೂ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿರಲಿಲ್ಲ. ಚುನಾವಣೆ ಘೋಷಣೆಯಾದ ನಂತರ ಸಿದ್ಧಗಂಗಾ ಮಠಕ್ಕೆ ಭೇಟಿ ಮಾಡಿದ್ದಾರೆ. ಅನೇಕ ಬಾರಿ ಮೈಸೂರು ಪ್ರವಾಸ ಮಾಡಿದ್ದರೂ, ಮಹಾರಾಜರ ಕುಟುಂಬ ಸದಸ್ಯರನ್ನು ಭೇಟಿ ಮಾಡಿರಲಿಲ್ಲ.  ಈಗ ಅರಮನೆಗೆ ಭೇಟಿ ನೀಡಿದ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿದ ಅವರು, ಇದೆಲ್ಲವೂ ಬಿಜೆಪಿಯ ನಾಟಕ ಎಂದು ಟೀಕಿಸಿದರು.

ಹಿಂದೂಪರ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ ಎಂದು ಬೊಬ್ಬೆ ಹೊಡೆಯುವ ಬಿಜೆಪಿಯವರು, ಸಂಘ ಪರಿವಾರದವರು 22 ಜನರನ್ನು ಕೊಂದಿರುವ ಬಗ್ಗೆ ಯಾಕೆ ಮಾತನಾಡುವುದಿಲ್ಲ. ಅವರ ಜೀವಕ್ಕೆ ಬೆಲೆ ಇಲ್ಲವೇ? ಕೊಲೆಯ ಆರೋಪಿಗಳಾಗಿರುವ ಸಂಘ ಪರಿವಾರದವರನ್ನು ಬಂಧಿಸಿ ಎಂದು ಬಿಜೆಪಿ ನಾಯಕರು ಯಾಕೆ ಹೇಳುತ್ತಿಲ್ಲ ಏಕೆ? ಎಂದು ಕೇಳಿದರು.

Advertisement

ಅಮಿತ್‌ ಶಾ ಜನರನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಯಶಸ್ಸು ಆಗುವುದಿಲ್ಲ. ಪ್ರಧಾನಿ ಮೋದಿ ಹಾಗೂ ಅಮಿತ್‌ ಶಾ ಕೃಪಾಕಟಾಕ್ಷದಿಂದ ಬ್ಯಾಂಕುಗಳಲ್ಲಿ ಸಾವಿರಾರು ಕೋಟಿ ರೂ. ಸಾಲ ಪಡೆದವರು ವಿದೇಶಕ್ಕೆ ಪರಾರಿಯಾಗಿದ್ದಾರೆ. ಮೋದಿ ಹಾಗೂ ಅಮಿತ್‌ ಶಾ ಇಬ್ಬರೂ ವ್ಯಾಪಾರಿಗಳು, ಈಸ್ಟ್‌ ಇಂಡಿಯಾ ಕಂಪನಿ ಇದ್ದಂತೆ. ಇವರ ಸಹವಾಸ ಕರ್ನಾಟಕಕ್ಕೆ ಬೇಡ ಎಂದು ಹೇಳಿದರು.

ರೆಡ್ಡಿ-ಬಿಜೆಪಿ ಒಳ ಒಪ್ಪಂದ: ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಬಿಜೆಪಿಗೂ ಸಂಬಂಧ ಇಲ್ಲ ಎಂದು ಅಮಿತ್‌ ಶಾ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಚಿವ ರಾಮಲಿಂಗಾರೆಡ್ಡಿ, ಜನಾರ್ದನ ರೆಡ್ಡಿ ಮತ್ತು ಬಿಜೆಪಿ ಮಧ್ಯೆ ಒಳ ಒಪ್ಪಂದ ಆಗಿದೆ.

ಮೇಲ್ನೋಟಕ್ಕೆ ಬಿಜೆಪಿ ನಾಯಕರು ಸುಮ್ಮನೆ ಹೇಳುತ್ತಿದ್ದಾರೆ. ಜನಾರ್ದನ ರೆಡ್ಡಿ ಬಿಜೆಪಿ ಪರ ಪ್ರಚಾರ ಮಾಡಿಕೊಂಡು  ಓಡಾಡುತ್ತಿರುವುದು ಏಕೆ?, ಯಡಿಯೂರಪ್ಪಅವರನ್ನು ಮತ್ತೆ ಮುಖ್ಯಮಂತ್ರಿ ಮಾಡುತ್ತೇನೆ ಎಂದು ಹೇಳಿಕೆ ನೀಡುತ್ತಿರುವುದು ಏಕೆ?  ಜನಾರ್ದನ ರೆಡ್ಡಿ ನನ್ನ ಕ್ಷೇತ್ರಕ್ಕೂ ಬಂದು ಬಿಜೆಪಿ ಪರ ಪ್ರಚಾರ ಮಾಡಿದ್ದಾರೆ ಎಂದು ಹೇಳಿದರು.

ನನ್ನ ಮಗಳಿಗೆ ಜಯನಗರ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಕೇಳಿದ್ದೇವೆ. ಪಕ್ಷದಿಂದ ಟಿಕೆಟ್‌ ಸಿಗುವ ವಿಶ್ವಾಸ ಇದೆ. ನೀಡದೇ ಇದ್ದರೆ ಕಾಂಗ್ರೆಸ್‌ನ ಅಭ್ಯರ್ಥಿ ಪರ ಪ್ರಚಾರ ಹಾಗೂ ಕೆಲಸ ಮಾಡುತ್ತೇವೆ. ಬೇರೆ ಯಾವ ಕ್ಷೇತ್ರದಲ್ಲೂ ಸ್ಪರ್ಧೆ ಮಾಡುವ ಮಾತಿಲ್ಲ. 
-ರಾಮಲಿಂಗಾರೆಡ್ಡಿ, ಗೃಹ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next