Advertisement

ಬಾದಾಮಿಯಲ್ಲಿ ಸಿದ್ದ -ರಾಮಾಯಣ

06:00 AM Apr 25, 2018 | |

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯ ಮುಗಿದಿದ್ದು, ಕಡೇ ದಿನವೂ ಬಾದಾಮಿ, ವರುಣಾ ಕ್ಷೇತ್ರದ ಸಸ್ಪೆನ್ಸ್‌ ಇಡೀ ರಾಜ್ಯವನ್ನೇ ತುದಿಗಾಲಲ್ಲಿ ನಿಲ್ಲಿಸಿತು. ಬಾದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೋ ಅಥವಾ ಕೊಪ್ಪಳಕ್ಕೆ ಹೋಗುತ್ತಾರೋ ಎಂಬ ಗೊಂದಲಗಳ ನಡುವೆಯೇ ಬಿಜೆಪಿ ಅಭ್ಯರ್ಥಿಯಾಗಿ ರಾಮುಲು ಅವರು ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಕೇಂದ್ರ ನಾಯಕ ಪ್ರಕಾಶ್‌ ಜಾಬ್ಡೇಕರ್‌ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು. ಅತ್ತ ಕಾಂಗ್ರೆಸ್‌ನಿಂದಲೂ ಸಿದ್ದರಾಮಯ್ಯ ಅವರು ಕಡೇ ಕ್ಷಣದಲ್ಲಿ ಬಾದಾಮಿಗೆ ಬಂದು ನಾಮಪತ್ರ ಸಲ್ಲಿಸಿದರು. ಈ ಮೂಲಕ ಸಿಎಂ ಸಿದ್ದರಾಮಯ್ಯ ಮತ್ತು ಶ್ರೀರಾಮುಲು “ಜೋಡಾಟ’ಕ್ಕೆ ಅಣಿಯಾದರು.


ಪಕ್ಷದ ನಾಯಕರ ಜತೆ ರಾಮುಲುರಿಂದ ಬಾದಾಮಿಯಲ್ಲಿ ಉಮೇದುವಾರಿಕೆ

Advertisement

ಅತ್ತ ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಸ್ಪೆನ್ಸ್‌ ಮಂಗಳವಾರ ಬೆಳಗ್ಗೆ ಮತ್ತೆ ಕಂಡುಬಂದರೂ ಬಿಜೆಪಿ ವರಿಷ್ಠರು ತೋಟದಪ್ಪ ಬಸವರಾಜು ಅವರಿಗೆ ಟಿಕೆಟ್‌ ನೀಡಿ, ವಿಜಯೇಂದ್ರ ಸ್ಪರ್ಧೆ ಕುರಿತ ಗೊಂದಲಗಳನ್ನು ನಿವಾರಿಸಿದರು. ಆದರೂ ಬಿಜೆಪಿ ಕಾರ್ಯಕರ್ತರ ಆಕ್ರೋಶ ಮುಂದುವರಿದು ಬಿಜೆಪಿ ಕಚೇರಿ ಮೇಲೆ ಕಲ್ಲು ತೂರಾಟದಂಥ ಪ್ರಸಂಗಗಳೂ ನಡೆದವು.

ಸಿಎಂ ನಾಮಪತ್ರ: ಮಂಗಳವಾರ ಬೆಳಗ್ಗೆ ಯಿಂದಲೂ ಸಿಎಂ ಸಿದ್ದರಾಮಯ್ಯ ಅವರ ಬಾದಾಮಿ ಸ್ಪರ್ಧೆ ಬಗ್ಗೆ ಗುಟ್ಟು ರಟ್ಟಾಗಿರಲೇ ಇಲ್ಲ. ಅಪರಾಹ್ನ 2.15ಕ್ಕೆ ತಹಶೀಲ್ದಾರ್‌ ಕಚೇರಿಗೆ ತೆರಳಿದ ಸಿಎಂ, 2.20ಕ್ಕೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಸಿಎಂ ಜತೆ ಆರ್‌.ಬಿ.ತಿಮ್ಮಾಪುರ, ಎಸ್‌.ಆರ್‌. ಪಾಟೀಲ್‌, ಸಿ.ಎಂ. ಇಬ್ರಾಹಿಂ, ಎಚ್‌.ಎಂ.ರೇವಣ್ಣ, ಎಚ್‌.ಕೆ.ಪಾಟೀಲ್‌ ಸಹಿತ ಹಲವು ನಾಯಕರು ಇದ್ದರು. ಇದಕ್ಕೂ ಮುನ್ನ ಹುಬ್ಬಳ್ಳಿಯಿಂದ ನೇರವಾಗಿ ಬನಶಂಕರಿ ಗ್ರಾಮಕ್ಕೆ ತೆರಳಿ, ಬನಶಂಕರಿಗೆ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲಿಂದ ನೇರವಾಗಿ ಹಾಲಿ ಶಾಸಕ ಚಿಮ್ಮನಕಟ್ಟಿ ನಿವಾಸಕ್ಕೆ ತೆರಳಿ ಚರ್ಚೆ ನಡೆಸಿದರು. ಈ ವೇಳೆ ಮಾಧ್ಯಮದ ವರೊಂದಿಗೆ ಮಾತ ನಾಡಿದ ಅವರು, ನಾನು ಉತ್ತರ ಕರ್ನಾಟಕದಿಂದ ಸ್ಪರ್ಧೆ ಮಾಡಬೇಕು ಎಂಬುದಾಗಿ ಈ ಭಾಗದ ಮುಖಂಡರ ಆಗ್ರಹವಾಗಿತ್ತು. ಇಲ್ಲಿನ ಎಲ್ಲ ಪ್ರಮುಖರ ಒತ್ತಾಸೆ ಮೇರೆಗೆ ನಾಮಪತ್ರ ಸಲ್ಲಿಸಿದ್ದೇನೆ. ರಾಜ್ಯದಲ್ಲಿ ಬಿಜೆಪಿಗರಿಗೆ ಸೋಲಿನ ಭೀತಿ ಇದೆ. ಅವರು ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಲ್ಲ  ಎಂದು ಪುನರುಚ್ಚರಿಸಿದರು.

ರಾಮುಲು ಉಮೇದುವಾರಿಕೆ: ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರು ತೋಟರ ಓಣಿಯ ಚಾವಡಿ ಹನುಮಪ್ಪನಿಗೆ ಪೂಜೆ ಸಲ್ಲಿಸಿದ ಬಳಿಕ ತಹಶೀಲ್ದಾರ್‌ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಅವರೊಂದಿಗೆ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್‌, ಕೇಂದ್ರ ಸಚಿವ ಪ್ರಕಾಶ್‌ ಜಾಬ್ಡೇಕರ್‌, ಪಕ್ಷದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಸಹಿತ ಹಲವು ಮುಖಂಡರಿದ್ದರು. ಬಳಿಕ ಬೃಹತ್‌ ಮೆರವಣಿಗೆ, ಬಿಜೆಪಿ ಪ್ರಮುಖರ ಸಭೆಯಲ್ಲಿ ಪಾಲ್ಗೊಂಡು ಬನಶಂಕರಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಕೇಂದ್ರ ನಾಯಕರೊಂದಿಗೆ ಒಂದು ನಾಮಪತ್ರ ಸಲ್ಲಿಸಿದ ಬಳಿಕ ಸ್ಥಳೀಯ ನಾಯಕರೊಂದಿಗೆ ತೆರಳಿ ಮತ್ತೂಂದು ಸೆಟ್‌ ನಾಮಪತ್ರ ಸಲ್ಲಿಕೆ ಮಾಡಿದರು.

ತಿಳಿಯದ ಸಿಎಂ ಗುಟ್ಟು; ಬಿಜೆಪಿಯಲ್ಲಿ ಬಂಡಾಯ
ಸಿಎಂ ಬಾದಾಮಿಗೆ ಬರುವುದು ತಡವಾದ ಹಿನ್ನೆಲೆಯಲ್ಲಿ ಅವರು ಕೊಪ್ಪಳ ಇಲ್ಲವೇ ಕುಷ್ಟಗಿಗೆ ಹೋಗಿ ನಾಮಪತ್ರ ಸಲ್ಲಿಸಲಿದ್ದಾರೆ ಎಂಬ ವದಂತಿ ಹರಡಿತ್ತು. ಹೀಗಾಗಿ ಬಿಜೆಪಿ ನಾಯಕರು ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಹಾಂತೇಶ ಮಮದಾಪುರ ಅವರಿಂದ ಮತ್ತೂಂದು ನಾಮಪತ್ರ ಕೊಡಿಸಿದರು. ಇದರಿಂದ ಆಕ್ರೋಶಗೊಂಡ ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ತಕರಾರು ತೆಗೆದು ತಾವೂ ಒಂದು ನಾಮಪತ್ರ ಸಲ್ಲಿಕೆ ಮಾಡಿದರು.

Advertisement

ಜೆಡಿಎಸ್‌ನಲ್ಲಿ ಬಿ ಫಾರಂ ಗೊಂದಲ
ಜೆಡಿಎಸ್‌ನಲ್ಲಿ ಬಿ-ಫಾರಂ ಗೊಂದಲ ಕಾಣಿಸಿಕೊಂಡು ಅಭ್ಯರ್ಥಿಗಳ ಬದಲಾವಣೆಯಾಗಿ ಅಸಮಾಧಾನದ ಹೊಗೆಯೂ ಕಾಣಿಸಿದೆ. ಜಯನಗರದಲ್ಲಿ ತನ್ವೀರ್‌ ಅಹಮದ್‌ ಅವರನ್ನು ಅಭ್ಯರ್ಥಿ ಎಂದು ಘೋಷಿಸಿ, ಕಾಳೇಗೌಡ ಅವರಿಗೆ ಬಿ ಫಾರಂ ನೀಡಲಾಗಿದೆ. ಹಾಗೆಯೇ ಶಿಡ್ಲಘಟ್ಟದಲ್ಲಿ ಎಂ.ರಾಜಣ್ಣ ಬದಲಿಗೆ ರವಿಕುಮಾರ್‌ಗೆ, ಕಾಗವಾಡದಲ್ಲಿ ಶ್ರೀಶೈಲ ತುಗಶೆಟ್ಟಿ ಬದಲಾಗಿ ಕಲ್ಲಪ್ಪ ಪಾರಿಸ್‌ ಮೇಘಣ್ಣವರ್‌ಗೆ ಬಿ ಫಾರಂ ನೀಡಲಾಗಿದೆ. ಕೆ.ಆರ್‌.ಪೇಟೆಯಲ್ಲಿ ನಾರಾಯಣಗೌಡ ಮತ್ತು ದೇವರಾಜ್‌ಗೆ, ಕಿತ್ತೂರಿನಲ್ಲಿ ಬಾಬಾ ಸಾಹೇಬ್‌ ದೇವನಗೌಡ ಪಾಟೀಲ್‌ ಮತ್ತು ಸುರೇಶ್‌ ಶಿವರುದ್ರಪ್ಪ ಮಾರಿಹಾಳ್‌ಗೆ ಬಿ ಫಾರಂ ನೀಡಲಾಗಿದ್ದು ನಾಮಪತ್ರ ಸಲ್ಲಿಸಿದ್ದಾರೆ. ದೇವನಹಳ್ಳಿಯಲ್ಲಿ ಹಾಲಿ ಶಾಸಕ ಪಿಳ್ಳಮುನಿಶಾಮಪ್ಪ ಜತೆಗೆ ನಿಸರ್ಗ ನಾರಾಯಣಸ್ವಾಮಿಗೂ ಬಿ ಫಾರಂ ಹಂಚಿಕೆ ಮಾಡಲಾಗಿದೆ. ಇದರಿಂದ ಬೇಸರಗೊಂಡಿರುವ ಪಿಳ್ಳಮುನಿಶಾಮಪ್ಪ ಕಣದಿಂದ ಹಿಂದೆ ಸರಿಯುವ ಬಗ್ಗೆ ಯೋಚಿಸಿದ್ದಾರೆ. ತುರುವೇಕೆರೆಯಲ್ಲಿ ಬಿ ಫಾರಂ ಸಿಕ್ಕಿದ್ದ ಕಾಂಗ್ರೆಸ್‌ನಿಂದ ಬಂದಿದ್ದ ಚಿತ್ರ ನಿರ್ಮಾಪಕ ಕೆ. ಮಂಜು ಬೊಮ್ಮನಹಳ್ಳಿಯಿಂದ ಕಣಕ್ಕಿಳಿಯುತ್ತಾರೆ ಎಂದು ಹೇಳಲಾಗಿತ್ತಾದರೂ ಕಡೆಗೆ ಹಿಂದೆ ಸರಿದಿದ್ದಾರೆ.

ವಿಜಯೇಂದ್ರ ಯುವ ಪ್ರಧಾನ ಕಾರ್ಯದರ್ಶಿ
ಬಿಎಸ್‌ವೈ ಪುತ್ರ ವಿಜಯೇಂದ್ರ ಅವರನ್ನೇ ಕಣಕ್ಕಿಳಿಸಬೇಕು ಎಂದು ಮೈಸೂರು-ಚಾಮರಾಜನಗರ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳು ಒತ್ತಾಯಿಸಿದ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿಯೇ ಮೈಸೂರಿಗೆ ಬಂದ ಕೇಂದ್ರ ವರಿಷ್ಠರಾದ ಮುರಳೀಧರ ರಾವ್‌, ಪ್ರಕಾಶ್‌ ಜಾಬ್ಡೇಕರ್‌ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಮಂಗಳವಾರ ಬೆಳಗ್ಗೆ ಎಲ್ಲ ಅಭ್ಯರ್ಥಿಗಳ ಜತೆ ಸಮಾಲೋಚನೆ ನಡೆಸಿದರು. ಬಳಿಕ ವಿಜಯೇಂದ್ರ ಸ್ಪರ್ಧೆ ಇಲ್ಲ, ತೋಟದಪ್ಪ ಬಸವರಾಜು ಸ್ಪರ್ಧಿಸಲಿದ್ದಾರೆ ಎಂದು ಘೋಷಿಸಿದರು. ಅನಂತರವೂ ಕಾರ್ಯಕರ್ತರು ದಾಂಧಲೆ ಎಬ್ಬಿಸಿದರು. ಕಡೆಗೆ ಸಂಜೆ ವಿಜಯೇಂದ್ರ ಪತ್ರಿಕಾ ಗೋಷ್ಠಿ ಮಾಡಿ ವರಿಷ್ಠರ ನಿರ್ಧಾರಕ್ಕೆ ಬದ್ಧನಾಗಿದ್ದೇನೆ ಎಂದು ಹೇಳಿದ್ದಷ್ಟೇ ಅಲ್ಲ, ವರುಣಾದಲ್ಲಿ ಕೆಲಸ ಮಾಡುವುದಾಗಿ ಘೋಷಿಸಿದರು. ಇದರ ನಡುವೆಯೇ ವರುಣಾದಲ್ಲಿ ಜೆಡಿಎಸ್‌ನ ಜಿ.ಟಿ.ದೇವೇಗೌಡರ ಪುತ್ರನನ್ನು ಕಣಕ್ಕಿಳಿಸುವಂತೆ ಒತ್ತಾಯಿಸಲಾಯಿತು. ಆದರೆ ಇದಕ್ಕೆ ಒಪ್ಪಿಗೆ ಸಿಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next