Advertisement

ಸರಣಿ ಹಿನ್ನಡೆಯಿಂದ ಕಂಗೆಟ್ಟ ಕಮಲ ಪಕ್ಷ

06:00 AM Sep 30, 2018 | |

ಬೆಂಗಳೂರು: “ಆಪರೇಷನ್‌ ಕಮಲ’ ಮೂಲಕ ರಾಜ್ಯದಲ್ಲಿ ಸರ್ಕಾರ ರಚನೆ ಕಸರತ್ತು, ಪರಿಷತ್‌ನ ಮೂರೂ ಸ್ಥಾನ ಗೆಲ್ಲುವ ಕಾರ್ಯತಂತ್ರ, ಬಿಬಿಎಂಪಿಯಲ್ಲಿ ಆಡಳಿತ ಚುಕ್ಕಾಣಿ ಹಿಡಿಯುವ ಬಿಜೆಪಿ ಕನಸು ಭಗ್ನವಾಗಿ ಇದು ಪಕ್ಷದಲ್ಲಿ ಆಂತರಿಕ ಕಚ್ಚಾಟಕ್ಕೆ ಕಾರಣವಾಗಿದೆ.

Advertisement

ಈ ಮೂರೂ ಕಾರ್ಯಾಚರಣೆ ಬಗ್ಗೆ ಪಕ್ಷದ ನಾಯಕರೇ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮುಖಂಡರಿಗೆ ಮಾಹಿತಿ ಕೊಟ್ಟಿದ್ದರು. ಇದರಿಂದಾಗಿಯೇ ಬಿಜೆಪಿಗೆ ಹಿನ್ನೆಡೆಯುಂಟಾಯಿತು ಎಂಬ ಮಾತುಗಳು ಕೇಳಿಬರುತ್ತಿವೆ.

ಕೆಲವು  ನಾಯಕರ ಒಣ ಪ್ರತಿಷ್ಠೆ, ಒಳಜಗಳದಿಂದ ಯಾವುದೇ ಕಾರ್ಯತಂತ್ರ ಯಶಸ್ಸು ಕಾಣುತ್ತಿಲ್ಲ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಈ ಹಿನ್ನೆಡೆಯಿಂದ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ನಾಯಕರ ಬಗ್ಗೆ ಆಕ್ರೋಶವುಂಟುಮಾಡಿದೆ ಎಂದು ಹೇಳಲಾಗಿದೆ.

ವಿಧಾನಸಭೆಯಲ್ಲಿ 104 ಸ್ಥಾನ ಹೊಂದಿದ್ದರೂ, ಬಿಬಿಎಂಪಿಯಲ್ಲಿ 101 ಸ್ಥಾನ ಹೊಂದಿದ್ದರೂ ಪ್ರತಿಪಕ್ಷ ಸ್ಥಾನದಲ್ಲಿ ಕೂರಬೇಕಾದ ಸ್ಥಿತಿ ಬಂದಿದ್ದರಿಂದ ರಾಜ್ಯದಲ್ಲಿ ಹಾಗೂ ರಾಜಧಾನಿಯಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್‌, ಜೆಡಿಎಸ್‌, ಪಕ್ಷೇತರರನ್ನು ಸೆಳೆಯಲು ಬಿಜೆಪಿಯ ಕೆಲ ಮುಖಂಡರು ಯತ್ನಿಸಿದ್ದರು. ಆದರೆ ನಿರೀಕ್ಷಿತ ಯಶಸ್ಸು ಸಾಧಿಸುವ ಮುನ್ನವೇ ಪಕ್ಷ ಕೆಲ ನಾಯಕರು ಮಾಹಿತಿ ಬಹಿರಂಗಪಡಿಸಿದ್ದರಿಂದ ಅಪ್ರಯತ್ನ ವಿಫ‌ಲವಾಯಿತು ಎನ್ನಲಾಗಿದೆ.

ಅಸಹಾಕಾರವೇ ಕಾರಣ?
ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ ಶಾಸಕರನ್ನು ಸೆಳೆದು ಸರ್ಕಾರ ರಚನೆಗೆ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಪ್ರಯತ್ನಿಸಿದಾಗ ಇತರೆ ನಾಯಕರು ಸೂಕ್ತ ಸಹಕಾರ ನೀಡಲಿಲ್ಲ. ಬದಲಿಗೆ ಕಾರ್ಯತಂತ್ರದ ಮಾಹಿತಿ ಬಹಿರಂಗಗೊಳಿಸಿದರು. ಆದೇ ರೀತಿ ಬಿಬಿಎಂಪಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ತಮ್ಮ ನಾಯಕತ್ವ ಸಾಬೀತುಪಡಿಸಲು ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌ ಮುಂದಾಗಿದ್ದರು. ಆದರೆ, ಅಲ್ಲೂ ಪಕ್ಷದ ನಾಯಕರೇ ಕಾರ್ಯತಂತ್ರ ಬಹಿರಂಗೊಳಿಸಿ ವಿಫ‌ಲಗೊಳಿಸಿದರು. ಎರಡೂ ಪ್ರಕರಣಗಳಲ್ಲೂ ಏಕ ವ್ಯಕ್ತಿ ಪ್ರತಿಷ್ಠೆ ಕಾರಣವಾಯಿತು. ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ . ಯಡಿಯೂರಪ್ಪ, ಆನಂತಕುಮಾರ್‌, ಡಿ.ವಿ.ಸದಾನಂದಗೌಡ ಒಂದೊಂದು ತೀರ ಎಂಬಂತಾಗಿತ್ತು. ಇದೇ ಕಾರಣದಿಂದ ಪರಿಷತ್‌ನಲ್ಲಿ ಮೂರು ಸ್ಥಾನ ಗೆಲ್ಲುವ ಕಾರ್ಯತಂತ್ರವೂ ವಿಫ‌ಲವಾಯಿತು ಎನ್ನಲಾಗಿದೆ.

Advertisement

ಮೂರು ಪ್ರಯತ್ನದಲ್ಲೂ ಬಿಜೆಪಿ ವಿಫ‌ಲವಾಗಿ ರಾಜಕೀಯವಾಗಿ ಹಿನ್ನಡೆ ಉಂಟಾಗಿರುವುದರಿಂದ ನಾಯಕರಲ್ಲಿ ಅಸಮಾಧಾನ ಭುಗಿಲೆದ್ದಿದ್ದು,  ಇಂತಹ ಪ್ರಯತ್ನಗಳ ಮೂಲಕ ಪಕ್ಷಕ್ಕೂ ಮುಜುಗರ ತರುತ್ತಿರುವುದಕ್ಕೆ ಕಡಿವಾಣ ಹಾಕಬೇಕು ಎಂಬ ಒತ್ತಾಯ ಕೇಳಿಬಂದಿದೆ. ಇದನ್ನು ಬಿಟ್ಟು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಒಟ್ಟಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡು ಪಕ್ಷದ ಬಲವರ್ಧನೆಗೆ ಮುಂದಾಗುವುದು ಸೂಕ್ತ.  ಇಲ್ಲದಿದ್ದರೆ ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿತ ಸಾಧನೆಗೆ ಅಡ್ಡಿಯಾಗಬಹುದು ಎಂಬ ಆತಂಕವನ್ನೂ ಕೇಂದ್ರ ನಾಯಕರ ಮುಂದೆ ತೋಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next