Advertisement

ಗೋಹತ್ಯೆ ನಿಷೇಧಿಸಲಿ; ಸಿದ್ದರಾಮಯ್ಯರಿಗೆ ಯೋಗಿ ಸವಾಲು

06:00 AM Jan 08, 2018 | |

ಬೆಂಗಳೂರು: ತಾವೊಬ್ಬ ಹಿಂದೂ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲು ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಮಾಡಿ ತೋರಿಸಲಿ!ಹೀಗೆಂದು ಬಹಿರಂಗ ಸವಾಲು ಹಾಕಿದ್ದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌.

Advertisement

ನಗರದಲ್ಲಿ ಬಿಜೆಪಿ ಭಾನುವಾರ ಹಮ್ಮಿಕೊಂಡಿದ್ದ ಪರಿವರ್ತನಾ ಯಾತ್ರೆಯ ಸಮಾವೇಶ ಉದ್ಘಾಟಿಸಿ ಮಾತನಾಡಿದ ಯೋಗಿ ಆದಿತ್ಯನಾಥ್‌, ಚುನಾವಣಾ ಸಂದರ್ಭದಲ್ಲಿ ನಾನು ಹಿಂದೂ, ನನ್ನ ಹೆಸರಿನಲ್ಲೂ ರಾಮ ಇದ್ದಾನೆ ಎಂದು ಪದೇ ಪದೆ ಹೇಳಿಕೆ ನೀಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನೇರವಾಗಿ ಕೆಣಕಿದರು.

“”ಗುಜರಾತ್‌ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿಯವರಿಗೆ ದೇವಸ್ಥಾನ, ಮಂದಿರಗಳ ನೆನಪಾಗಿತ್ತು. ಕರ್ನಾಟಕದ ಚುನಾವಣೆ ಸಮೀಪಿಸುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಹಿಂದೂಗಳ ಮತ್ತು ಹಿಂದುತ್ವದ ಸ್ಮರಣೆ ಮಾಡುತ್ತಿದ್ದಾರೆ. ಹಿಂದುತ್ವ ಎಂದರೆ ಏನು ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಿ” ಎಂದು ಸೂಕ್ಷ್ಮವಾಗಿ ಟೀಕಿಸಿದರು.

ಹಿಂದುತ್ವ ಎಂದರೆ ಜಾತಿ, ಮತ, ಸಮುದಾಯವಲ್ಲ. ಅದೊಂದು ವಿಶ್ವಶ್ರೇಷ್ಠ ಭಾರತೀಯ ಜೀವನ ಪದ್ಧತಿ. ಹಿಂದುತ್ವದಲ್ಲಿ ಗೋಭಕ್ಷಣೆ ಮತ್ತು ಗೋಹತ್ಯೆಗೆ ಅವಕಾಶ ಇಲ್ಲ ಎಂದ ಯೋಗಿ, “”ಸಿದ್ದರಾಮಯ್ಯ ಅವರೇ, ನೀವು ಹಿಂದುವಾಗಿದ್ದರೆ ಮೊದಲು ಕರ್ನಾಟಕದಲ್ಲಿ  ಗೋಹತ್ಯೆ ನಿಷೇಧ ಮಾಡಿ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಗೋಹತ್ಯೆ ಕಾಯ್ದೆಯನ್ನು ವಾಪಾಸ್‌ ಪಡೆದಿದ್ದು ಏಕೆ” ಎಂದು ಪ್ರಶ್ನಿಸಿದರು.

ಸಮಾನ ವಿಚಾರಧಾರೆಯ ಸರ್ಕಾರ ಇರಬೇಕು:
ರಾಜ್ಯದ ಅಭಿವೃದ್ಧಿಯಾಗಬೇಕಾದರೆ ಕೇಂದ್ರ ಮತ್ತು ರಾಜ್ಯದಲ್ಲಿ ಸಮಾನ ವಿಚಾರಧಾರೆಯ ಸರ್ಕಾರಗಳು ಅಧಿಕಾರದಲ್ಲಿ ಇರಬೇಕು. ಆಗ ಕೇಂದ್ರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ರಾಜ್ಯವೊಂದು ಅಭಿವೃದ್ಧಿ ಹೊಂದಲು ಸಾಧ್ಯ. ಕರ್ನಾಟಕದ ಕಾಂಗ್ರೆಸ್‌ ಸರ್ಕಾರವು ಕೇಂದ್ರದ ಅನುದಾನ‌ ಸದ್ಭಳಕೆ ಮಾಡಿಕೊಳ್ಳುತ್ತಿಲ್ಲ ಎಂದು ಯೋಗಿ ಆದಿತ್ಯನಾಥ್‌ ಆರೋಪಿಸಿದರು.

Advertisement

ಕಾಂಗ್ರೆಸ್‌ ಪಕ್ಷ ದೇಶಕ್ಕೆ ಒಂದು ಸಮಸ್ಯೆ ಇದ್ದಂತೆ. ಗುಜರಾತ್‌ ಹಾಗೂ ಹಿಮಾಚಲ ಪ್ರದೇಶದ ಚುನಾವಣೆಯಲ್ಲೂ ಕಾಂಗ್ರೆಸ್‌ ಮೂಲೆಗುಂಪಾಗಿದೆ. ಆ ಪಕ್ಷದ ವಿನಾಶ ನೀತಿ ಮತ್ತು ಭ್ರಷ್ಟ ಆಡಳಿತದಿಂದ ಭಾರತ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ದೇಶದಲ್ಲಿ ವಿಕಾಸ ಪರ್ವ ಆರಂಭವಾಗಿದೆ. ಕರ್ನಾಟಕವನ್ನು ವಿಕಾಸದ ಹಾದಿಗೆ ಕೊಂಡೊಯ್ಯಲು ಬಿಜೆಪಿಯನ್ನು ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ತರುವಂತೆ ಕರೆ ನೀಡಿದರು.

ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಬಿಜೆಪಿ ಹಾಗೂ ಹಿಂದು ಸಂಘಟನೆಯ 20 ಮಂದಿ ಕಾರ್ಯಕರ್ತರನ್ನು ಕೊಲೆ ಮಾಡಲಾಗಿದೆ. ಉತ್ತರ ಪ್ರದೇಶದಲ್ಲೂ ಕಾನೂನು ಸುವ್ಯವಸ್ಥೆ ಸಂಪೂರ್ಣ ತಳಹಿಡಿದಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾನೂನು ಸುವ್ಯವಸ್ಥೆ ನಿಯಂತ್ರಣಕ್ಕೆ ತರಲಾಗಿದೆ. ಹೊಸ ಸರ್ಕಾರ ರಚನೆಯಾದ ನಂತರ ಗಲಭೆ, ಕೋಮು ಸಂಘರ್ಷ ನಡೆದಿಲ್ಲ ಎಂದರು.

ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಿಯಾಗಿ¨ªಾಗ ಕರ್ನಾಟಕಕ್ಕೆ ಮೆಟ್ರೋ ರೈಲನ್ನು ಮಂಜೂರು ಮಾಡಿದ್ದರು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಚಾಲನೆ ನೀಡಿದ್ದರು. ಈಗಿನ ಪ್ರಧಾನಿ ಮೋದಿಯವರು ಬೆಂಗಳೂರಿಗೆ ಸ್ಮಾರ್ಟ್‌ಸಿಟಿ ಯೋಜನೆ ಒದಗಿಸಿಕೊಟ್ಟಿದ್ದಾರೆ. ಕರ್ನಾಟಕದ ಇನ್ನಷ್ಟು ಅಭಿವೃದ್ದಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಚುನಾವಣಾ ಉಸ್ತುವಾರಿ ಪ್ರಕಾಶ್‌ ಜಾವಡೇಕರ್‌, ಕೇಂದ್ರ ಸಚಿವರಾದ ಅನಂತ ಕುಮಾರ್‌, ಡಿ.ವಿ.ಸದಾನಂದಗೌಡ, ಬಿಜೆಪಿ ಮುಖಂಡರಾದ ಜಗದೀಶ್‌ ಶೆಟ್ಟರ್‌, ಆರ್‌.ಅಶೋಕ್‌, ಶೋಭಾ ಕರಂದ್ಲಾಜೆ, ಕೆ.ಎಸ್‌.ಈಶ್ವರಪ್ಪ, ವಿ.ಸೋಮಣ್ಣ, ಸಿ.ಟಿ.ರವಿ, ಪಿ.ಸಿ.ಮೋಹನ್‌, ಸುರೇಶ್‌ ಕುಮಾರ್‌ ಮೊದಲಾದವರು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಾಥ ಪಂಥದ ವರ್ಣನೆ:
ಸೀತೆಯನ್ನು ರಾವಣ ಅಪಹರಿಸಿದ ಸಂದರ್ಭದಲ್ಲಿ ಉತ್ತರದ ಶ್ರೀರಾಮನಿಗೆ ಕರ್ನಾಟಕದ ಆಂಜನೇಯ ದಾರಿ ತೋರಿಸಿದ್ದನು. ಹಾಗೆಯೇ ಉತ್ತರ ಪ್ರದೇಶದ ಗೋರಕನಾಥರು ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ನಾಥಪಂಥದ ಪ್ರತಿಪಾದನೆಯ ಮೂಲಕ ಅನೇಕ ಕೊಡುಗೆ ನೀಡಿ ಮಠಗಳನ್ನು ಸ್ಥಾಪಿಸಿದ್ದಾರೆ. ಉತ್ತರದ ಗೋರಕನಾಥರನ್ನು ಕರ್ನಾಟಕದಲ್ಲಿ ಮಂಜುನಾಥ ಎಂದು ಕರೆಯುತ್ತಾರೆ. ಧರ್ಮಸ್ಥಳದ ಮಂಜುನಾಥನೇ ಗೋರಕನಾಥರ ರೂಪದಲ್ಲಿದ್ದಾರೆ. ಹೀಗಾಗಿಯೇ ಕರ್ನಾಟಕಕ್ಕೂ ಉತ್ತರಪ್ರದೇಶದ ಗೋರಕನಾಥ ಪೀಠಕ್ಕೆ ಅವಿನಾಭಾವ ಸಂಬಂಧವಿದೆ. ಆದಿಚುಂಚನಗಿರಿ ಮಠವು ನಾಥ ಪರಂಪರೆಯ ಮಠವಾಗಿದೆ. ಆದಿಚುಂಚನಗಿರಿ ಪೀಠದ ಬಾಲಗಂಗಾಧರನಾಥ ಸ್ವಾಮೀಜಿಗಳು ನಮ್ಮಗೆಲ್ಲರಿಗೂ ಮಾರ್ಗದರ್ಶಕರಾಗಿದ್ದರು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಬಣ್ಣಿಸಿದರು.

ಕರ್ನಾಟಕ ಕಾಂಗ್ರೆಸ್‌ಗೆ ಎಟಿಎಂ ಇದ್ದಂತೆ!
ದೇಶದ ಒಂದೊಂದೇ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರ ಕಳೆದುಕೊಳ್ಳುತ್ತಿದೆ. ಈಗ ಉಳಿದಿರುವ ದೊಡ್ಡ ರಾಜ್ಯ ಕರ್ನಾಟಕ ಮಾತ್ರ. ರಾಜ್ಯದಲ್ಲಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ, ಕಾಂಗ್ರೆಸ್‌ ಪಕ್ಷಕ್ಕೆ ಎಟಿಎಂ ಇದ್ದಂತೆ. ಬೇರೆ ರಾಜ್ಯದ ಕಾರ್ಯಕ್ರಮಕ್ಕೆ ಕರ್ನಾಟಕದಿಂದಲೇ ಹಣ ಪಡೆಯಬೇಕಾದ ಪರಿಸ್ಥಿತಿ ಕಾಂಗ್ರೆಸ್‌ಗೆ ಬಂದಿದೆ. ರಾಷ್ಟ್ರೀಯ ಪಕ್ಷದ ಆರ್ಥಿಕ ಹೊಣೆಯನ್ನು ರಾಜ್ಯ ಸರ್ಕಾರ ನಿಭಾಯಿಸುತ್ತಿದೆ. ಕಾಂಗ್ರೆಸ್‌ ಹೈಕಮಾಂಡ್‌ ಕರ್ನಾಟಕವನ್ನು ಎಟಿಎಂ ರೀತಿ ಬಳಸಿಕೊಳ್ಳುತ್ತಿದೆ ಎಂದು ಯೋಗಿ ಆದಿತ್ಯನಾಥ್‌ ಆರೋಪಿಸಿದರು.

ಉತ್ತರದ ಗೋರಕನಾಥ ಪೀಠಕ್ಕೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದೆ. ಉತ್ತರ ಭಾರತದ ಬಹುತೇಕ ರಾಜ್ಯದಲ್ಲಿ ಬಿಜೆಪಿ ಅಧಿಕಾರ ನಡೆಸುತ್ತಿದೆ. ಪುಣ್ಯಭೂಮಿ ಕರ್ನಾಟಕವನ್ನೂ ಕಾಂಗ್ರೆಸ್‌ ಮುಕ್ತಗೊಳಿಸಿ.
– ಯೋಗಿ ಆದಿತ್ಯನಾಥ್‌, ಉತ್ತರಪ್ರದೇಶ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next