Advertisement

ಕುಮಾರಸ್ವಾಮಿ ವಿರುದ್ಧ ಬಿಜೆಪಿ ಆಕ್ರೋಶ

11:23 PM Jan 10, 2020 | Team Udayavani |

ಮಂಗಳೂರು ಗಲಭೆಗೆ ಸಂಬಂಧಿಸಿದಂತೆ ಎಚ್‌.ಡಿ.ಕುಮಾರಸ್ವಾಮಿ ಸಿಡಿ ಬಿಡುಗಡೆ ಮಾಡಿರುವುದಕ್ಕೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಮಾರಸ್ವಾಮಿ ಖಾಲಿ ಇರುವುದರಿಂದ ಸರ್ಕಾರದ ಮೇಲೆ ಆರೋಪ ಮಾಡಲು ಈ ರೀತಿ ಸಿಡಿ ಬಿಡುಗಡೆ ಮಾಡಿದ್ದಾರೆಂದು ಡಿಸಿಎಂ ಗೋವಿಂದ ಕಾರಜೋಳ ಆರೋಪಿಸಿದ್ದಾರೆ. ಅವರು ಎಷ್ಟೇ ವಿಡಿಯೋ ರಿಲೀಸ್‌ ಮಾಡಿದರೂ, ಮತ್ತೆ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಸಚಿವ ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ. ಸಿಡಿಯನ್ನು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಬೇಕೆಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

Advertisement

ಸಮಗ್ರ ತನಿಖೆಯಾಗಲಿ
ಬೆಂಗಳೂರು: ಮಂಗಳೂರು ಗಲಭೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಸಿಡಿಯನ್ನು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿ, ಇದು ಕೇರಳ, ಪಶ್ಚಿಮ ಬಂಗಾಲ ಅಥವಾ ಜೆಎನ್‌ಯುನಲ್ಲಿ ಸಿದ್ಧವಾಗಿದೆಯೇ ಎನ್ನುವುದರ ಸಮಗ್ರ ತನಿಖೆಯಾಗಬೇಕು ಎಂದು ಸಂಸದೆ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಆಗ್ರಹಿಸಿದರು. ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಸಿಡಿ ಕಟ್‌ ಅಂಡ್‌ ಪೇಸ್ಟ್‌ ಸಿಡಿಯಾಗಿದೆ.

ಆರೇಳು ವರ್ಷಗಳಿಂದ ಅನೇಕ ಬಾರಿ ಸಿಡಿಗಳನ್ನು ಬಿಡುಗಡೆ ಮಾಡಿದ್ದಾರೆ. ಆದರೆ, ಯಾವುದನ್ನೂ ತಾರ್ಕಿಕ ಅಂತ್ಯಕ್ಕೆ ಮುಟ್ಟಿಸಲಿಲ್ಲ. ಮಂಗಳೂರು ಗಲಭೆಗೂ ಕುಮಾರಸ್ವಾಮಿಗೂ ಏನು ಸಂಬಂಧ ಎಂದು ಪ್ರಶ್ನಿಸಿದರು. ಪಿಎಫ್ಐನವರು ಮಂಗಳೂರನ್ನು ತಮ್ಮ ಅಡ್ಡಾ ಮಾಡಿಕೊಳ್ಳಲು ಹೊರಟಿದ್ದಾರೆ. ನೀವು ನಿಮ್ಮ ಶಾಸಕರನ್ನು ನಂಬಲ್ಲ. ಪೊಲೀಸರನ್ನೂ ನಂಬಲ್ಲ. ಅದಕ್ಕಾಗಿಯೇ ಆಡಳಿತದಿಂದ ಕೇಳಗಿಳಿಯಬೇಕಾಯಿತು. ನಿಮಗೆ ಯಾರ ಮೇಲೂ ನಂಬಿಕೆ ಇಲ್ಲ. ಅದಕ್ಕೆ ಅಧಿಕಾರ ಕಳೆದು ಕೊಳ್ಳಬೇಕಾಗಿದೆ. ಯಾವ ಮುಸುಕುಧಾರಿಗಳು ಕಾಶ್ಮೀರದಲ್ಲಿ ಪತ್ತೆಯಾಗಿದ್ದರೋ ಅವರು ಮಂಗಳೂರಲ್ಲಿ ಪತ್ತೆಯಾಗಿದ್ದಾರೆ ಎಂದು ದೂರಿದರು.

ಎಚ್ಡಿಕೆ ಮತ್ತೆ ಸಿಎಂ ಆಗಲ್ಲ
ಶಿವಮೊಗ್ಗ: ಕುಮಾರಸ್ವಾಮಿ ಎಷ್ಟೇ ವಿಡಿಯೋ ರಿಲೀಸ್‌ ಮಾಡಿದರೂ, ಇನ್ನೂ ಹತ್ತು ಜನ್ಮ ಹೆತ್ತು ಬಂದರೂ ಮತ್ತೆ ಮುಖ್ಯಮಂತ್ರಿ ಯಾಗುವುದಿಲ್ಲ ಎಂದು ಸಚಿವ ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಅವರ ಪಕ್ಷದಿಂದ ಅಲ್ಲೊಬ್ಬ, ಇಲ್ಲೊಬ್ಬ ಶಾಸಕರು ಚುನಾಯಿತ ರಾಗುತ್ತಿದ್ದು, ಮುಂದೆ ಅವರೆಲ್ಲ ಬಿಜೆಪಿಗೆ ಬರುತ್ತಾರೆ. ಇದೆಲ್ಲ ಗೊತ್ತಾಗಿ ತಮ್ಮ ಪಕ್ಷ ಜೀವಂತವಾಗಿದೆ ಎಂಬುದನ್ನು ತೋರಿಸಿಕೊಳ್ಳಲು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ.

ಮಂಗಳೂರಿನಲ್ಲಿ ನಡೆದ ಘಟನೆ ಬಗ್ಗೆ ಬಿಜೆಪಿ ಸರ್ಕಾರದ ಮೇಲೆ ಕುಮಾರಸ್ವಾಮಿ ಆರೋಪ ಮಾಡುತ್ತಿದ್ದಾರೆ. ಗೂಂಡಾಗಳು ಪ್ರತಿಭಟನೆ ಹೆಸರಲ್ಲಿ ಸಂಚು ರೂಪಿಸಿ, ಗಲಭೆ ಮಾಡಿದ್ದನ್ನು, ಪೊಲೀಸರ ಮೇಲೆ ಹಲ್ಲೆ ನಡೆಸಿದ್ದನ್ನು ಜನ ನೋಡಿದ್ದಾರೆ. ಅವರು ಹೇಳಿದಂತೆಯೇ ಘಟನೆಯನ್ನು ನ್ಯಾಯಾಂಗ ತನಿಖೆಗೆ ವಹಿಸಲಾಗಿದೆ. ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವ ಎಚ್ಡಿಕೆ ಹೇಳಿಕೆ ತಪ್ಪು
ಬಳ್ಳಾರಿ: ಮಂಗಳೂರಲ್ಲಿ ನಡೆದ ಗಲಭೆಗೆ ಪೊಲೀಸರು ಕಾರಣ ಎಂಬ ಅರ್ಥದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿದ್ದು ಸರಿಯಲ್ಲ ಎಂದು ಸಚಿವ ಸಿ.ಟಿ.ರವಿ ಹೇಳಿದರು. ಹಂಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಂಗಳೂರಿನ ರಸ್ತೆಗಳಲ್ಲಿ ಟೈರ್‌ಗೆ ಬೆಂಕಿ ಹಚ್ಚಿದವರು, ರಾಶಿ ರಾಶಿ ಕಲ್ಲುಗಳನ್ನು ಹಾಕಿ ತೂರಿದವರು, 144 ಸೆಕ್ಷನ್‌ ಜಾರಿಯಲ್ಲಿದ್ದರೂ ಬೀದಿಗಿಳಿದವರು ಪೊಲೀಸರಲ್ಲ. ಕುಮಾರಸ್ವಾಮಿ ಎರಡು ಅವ ಧಿಗೆ ಸಿಎಂ ಆದವರು. ಅವರು ಯಾವ ಹಿನ್ನೆಲೆಯಲ್ಲಿ ಮಾತನಾಡಿದ್ದಾರೋ ಗೊತ್ತಿಲ್ಲ. ಪೊಲೀಸರು ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌ ಸರ್ಕಾರದ ಪೊಲೀಸರಲ್ಲ. ಕರ್ನಾಟಕ ರಾಜ್ಯ ಸರ್ಕಾರದ ಪೊಲೀಸರು. ಯಾವುದೋ ಒಂದು ಕಟ್‌ ಆ್ಯಂಡ್‌ ಪೇಸ್ಟ್‌ ವೀಡಿಯೋ ಹಿಡಿದುಕೊಂಡು ಹೀಗೆಯೇ ಎಂದು ಪೊಲೀಸರ ಬಗ್ಗೆ ನಿರ್ಣಯಕ್ಕೆ ಬರುವುದು ಸರಿಯಲ್ಲ ಎಂದರು.

ಬೊಮ್ಮಾಯಿ, ಡಿಸಿಎಂ ಆಕ್ಷೇಪ
ಬೆಂಗಳೂರು: ಮಂಗಳೂರಿನಲ್ಲಿ ನಡೆದ ಹಿಂಸಾಚಾರಕ್ಕೆ ಪೊಲೀಸರು ಹಾಗೂ ಸರ್ಕಾರದ ಕುಮ್ಮಕ್ಕು ಕಾರಣ ಎಂದು ಆರೋಪಿಸಿರುವ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿಯವರು ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂಬ ದೃಶ್ಯಾವಳಿಯುಳ್ಳ ಸಿ.ಡಿ ಬಿಡುಗಡೆ ಮಾಡಿರುವುದಕ್ಕೆ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಶುಕ್ರವಾರ ಪ್ರತಿಕ್ರಿಯಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮಂಗಳೂರು ಹಿಂಸಾಚಾರ ಸಂಬಂಧ ಎಚ್‌.ಡಿ.ಕುಮಾರಸ್ವಾಮಿಯವರು ಬಿಡುಗಡೆ ಮಾಡಿರುವ ವಿಡಿಯೋ ಸಮರ್ಪಕವಾಗಿಲ್ಲ. ಅದನ್ನು ತಿರುಚಲಾಗಿದೆ. ಮಾಜಿ ಮುಖ್ಯಮಂತ್ರಿಯಾಗಿ ಪೊಲೀಸರ ಮೇಲೆಯೇ ತಪ್ಪು ಹೊರಿಸಲು ಮುಂದಾಗಿರುವುದು ಬೇಜವಾಬ್ದಾರಿ ನಡವಳಿಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತನಿಖಾಧಿಕಾರಿಗೆ ಸಿ.ಡಿ ನೀಡಲಿ: ಎಚ್‌.ಡಿ.ಕುಮಾರಸ್ವಾಮಿಯವರು ಬಿಡುಗಡೆ ಮಾಡಿರುವ ಸಿ.ಡಿ ವಿವರವನ್ನು ಪ್ರಕರಣದ ತನಿಖಾಧಿಕಾರಿಗಳಿಗೆ ನೀಡಿದರೆ ಪರಿಶೀಲಿಸಿ ವರದಿ ನೀಡಲಿದ್ದಾರೆ. ಎಲ್ಲವೂ ಕಾನೂನಿನ ಚೌಕಟ್ಟಿನಲ್ಲಿ ನಡೆಯಲಿದ್ದು, ತನಿಖಾ ಸಮಿತಿಗೆ ಮಾಹಿತಿ ನೀಡಬೇಕು. ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದರೆ ಅವರು ಉತ್ತಮ ವರದಿ ನೀಡಲು ಸಾಧ್ಯವಾಗಲಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಹೇಳಿದರು.

ಎಚ್ಡಿಕೆ ಆರೋಪ ನಿರಾಧಾರ
ಕಲಬುರಗಿ: ಮಾಜಿ ಸಿಎಂ ಕುಮಾರಸ್ವಾಮಿ ಖಾಲಿ ಇದ್ದಾರೆ. ಆದ್ದರಿಂದ ಸರ್ಕಾರದ ಮೇಲೆ ಏನಾದರೂ ಆರೋಪ ಮಾಡಬೇಕೆಂಬ ಕಾರಣಕ್ಕೆ ಮಂಗಳೂರು ಗಲಭೆಗೆ ಸಂಬಂ ಧಿಸಿದಂತೆ ಸಿಡಿ ಬಿಡುಗಡೆ ಮಾಡಿ, ಆರೋಪ ಮಾಡುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಟೀಕಿಸಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರು ಮಾಡಿದ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಬಿಜೆಪಿ ಜನರ ಭಾವನೆಗಳನ್ನು ಅರಿತು ಆಡಳಿತ ನಡೆಸುವ ಪಕ್ಷ. ಕಾನೂನು ಸುವ್ಯವಸ್ಥೆ ಕಾಪಾಡಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಪೊಲೀಸ್‌ ಅಧಿಕಾರಿಗಳು ತೆಗೆದುಕೊಳ್ಳುತ್ತಿದ್ದಾರೆ ಎಂದರು.

ಮಂಗಳೂರು ಗಲಭೆಗೆ ಶಾಸಕ ಯು.ಟಿ.ಖಾದರ್‌ ಅವರ ಪ್ರಚೋದನಕಾರಿ ಭಾಷಣ ಮತ್ತು ಕಾಂಗ್ರೆಸ್‌ನವರ ಕುತಂತ್ರವೇ ಮುಖ್ಯ ಕಾರಣ. ಅಲ್ಪಸಂಖ್ಯಾತರ ಓಲೈಕೆಗಾಗಿ ಕೋಮು ಗಲಭೆಗೆ ಪ್ರಚೋದನೆ ನೀಡಿದ್ದಾರೆ.
-ಲಕ್ಷ್ಮಣ ಸವದಿ, ಉಪ ಮುಖ್ಯಮಂತ್ರಿ

ಕುಮಾರಸ್ವಾಮಿ ಬಿಡುಗಡೆಗೊಳಿಸಿದ ಸಿಡಿ ರಾಜಕೀಯ ಸರಿಯಲ್ಲ. ಎಚ್ಡಿಕೆ ತಮ್ಮ ಸಣ್ಣತನ ತೋರಿದ್ದಾರೆ. ಸಿಡಿಯಲ್ಲಿ ಏನಿದೆಯೋ ಗೊತ್ತಿಲ್ಲ. ಆದರೆ, ಪೊಲೀಸರ ನೈತಿಕಸ್ಥೈರ್ಯ ಕುಗ್ಗಿಸುವ ಕಾರ್ಯ ಮಾಡಬಾರದು. ಘಟನೆ ಬಗ್ಗೆ ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ.
-ಜಗದೀಶ ಶೆಟ್ಟರ್‌, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next