Advertisement

ಆಡಿಯೋ ಪ್ರಕರಣದ ಎಸ್‌ಐಟಿ ತನಿಖೆಗೆ ಬಿಜೆಪಿ ವಿರೋಧ

12:30 AM Feb 13, 2019 | Team Udayavani |

ವಿಧಾನಸಭೆ: ಆಡಿಯೋ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ಗೆ ವಹಿಸುವುದನ್ನು ಬಿಜೆಪಿ ಮಂಗಳವಾರವೂ ಸದನದಲ್ಲಿ ವಿರೋಧಿಸಿತು. ಬದಲಿಗೆ ಸದನ ಸಮಿತಿ ಇಲ್ಲವೇ ಹಾಲಿ ನ್ಯಾಯಾಧೀಶರಿಂದ ತನಿಖೆಗೆ ಒಳಪಡಿಸಬೇಕೆಂದು ಇಡೀ ದಿನ ಒತ್ತಾಯಿಸಿತು.

Advertisement

ಸದನ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಜೆ.ಸಿ. ಮಾಧುಸ್ವಾಮಿ, “ಆಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್‌ಐಟಿ ತನಿಖೆಗಿಂತ ಸದನ ಸಮಿತಿಗೆ ವಹಿಸುವುದು ಸೂಕ್ತ. ಹಾಗೆಯೇ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ತನಿಖೆಗಿಂತ ಹಾಲಿ ನ್ಯಾಯಾಧೀಶರ ನೇತೃತ್ವದ ಸಮಿತಿಯಿಂದ ತನಿಖೆ ನಡೆಸುವುದು ಸೂಕ್ತ. ಎಸ್‌ಐಟಿಗೆ ವಹಿಬೇಕಾದರೆ ಪಿರ್ಯಾದುದಾರರಿಬೇಕು. ಎಫ್ಐಆರ್‌ ದಾಖಲಾಗುತ್ತಿದ್ದಂತೆ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಾಗುತ್ತದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದಟಛಿದ ಪ್ರಕರಣವೊಂದರಲ್ಲಿ ಎಸ್‌ಐಟಿ ತನಿಖೆಗೆ ತಡೆಯಾಜ್ಞೆಯಿದ್ದು, ಈವರೆಗೆ ಇತ್ಯರ್ಥವಾಗಿಲ್ಲ. ಸಿಆರ್‌ಪಿಸಿ ಸೆಕ್ಷನ್‌ನಡಿ ದಾಖಲಾಗುವ ಪ್ರಕರಣಗಳನ್ನು ಮೂರನೇ ಸಂಸ್ಥೆಯ ತನಿಖೆಗೆ ಒಳಪಡಿಸಲು ಅವಕಾಶವಿಲ್ಲ’ ಎಂದು ಹೇಳಿದರು.

ಎಸ್‌ಐಟಿ ತನಿಖೆ ನಡೆಸಬೇಕಾದರೆ ದೂರು ದಾಖಲಾಗಬೇಕು, ಎಫ್ಐಆರ್‌ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಬೇಕಾಗುತ್ತದೆ. ಶಾಸಕರನ್ನು ಪೊಲೀಸರ ತನಿಖೆಗೆ ಒಳಪಡಿಸುವುದು ಬೇಡ. ಒಂದೊಮ್ಮೆ ವಹಿಸಿದರೆ ಶಾಸಕರಿಗೆ ನೋಟಿಸ್‌ ನೀಡಬಹುದು. ಅದನ್ನು ಪ್ರಶ್ನಿಸಿ ನಾಯಾಲಯದಿಂದ ಜಾಮೀನು ಪಡೆಯಬಹುದಾಗಿದೆ. ಎಸ್‌ಐಟಿ ತನಿಖೆಗೆ ವಹಿಸಿದರೆ ಸಮಸ್ಯೆ ಸೃಷ್ಟಿಯಾಗಬಹುದು. ಶಾಸಕರು ಹೇಳಿಕೆ ನೀಡಲು ನಿರಾಕರಿಸಬಹುದು. ಧ್ವನಿ ಮುದ್ರಣಕ್ಕೆ ಸಹಕರಿಸದಿರಬಹುದು. ತನಿಖೆಗಿರುವ ಅಧಿಕಾರ ಪ್ರಶ್ನಿಸಬಹುದು. ಈ ಹಿಂದೆ ಎಸ್‌ಐಟಿ ವಿಶ್ವಾಸಾರ್ಹತೆ ಪ್ರಶ್ನಿಸಿದ್ದ ಸಿದ್ದರಾಮಯ್ಯ ಅವರಿಗೆ ಇದೀಗ ವಿಶ್ವಾಸ ಬಂದಿದ್ದು ಹೇಗೆ? ಶಾಸಕರನ್ನು ಪೊಲೀಸ್‌ ತನಿಖೆಗೆ ಒಳಪಡಿಸುವ ಕೆಲಸ ಈ ಸಭಾಧ್ಯಕ್ಷರ ಅವಧಿಯಲ್ಲಿ ಶುರುವಾಗುವುದು ಬೇಡ ಎಂದರು.

ಪೊಲೀಸರೊಂದಿಗೆ ದೋಸ್ತಿ, ದುಶ್ಮನಿ ಒಳ್ಳೆಯದಲ್ಲ: ಈ ವಿಚಾರವನ್ನು ಇಲ್ಲಿಗೇ ಬಿಡೋಣ. ಸಭಾಧ್ಯಕ್ಷರ ರೂಲಿಂಗ್‌ ಪ್ರಶ್ನಿಸುತ್ತಿಲ್ಲ. ತಮ್ಮ ತೀರ್ಮಾನವನ್ನು ಮರುಪರಿಶೀಲಿಸಿ, ಸದನದೊಳಗೆ ಇತ್ಯರ್ಥಪಡಿಸುವತ್ತ ಚಿಂತಿಸಬೇಕು. ಇಲ್ಲಿರುವ ಶೇ.50ರಷ್ಟು ಮಂದಿ ಒಂದಲ್ಲಾ ಒಂದು ರೀತಿ ಪೊಲೀಸ್‌ ದೌರ್ಜನ್ಯ ನೋಡಿರುವವರೇ. ಹಾಗಾಗಿ ಪೊಲೀಸರೊಂದಿಗೆ ದೋಸ್ತಿ, ದುಶ್ಮನಿ ಒಳ್ಳೆಯದಲ್ಲ. ಎಸ್‌ಐಟಿ ತನಿಖೆಗೆ ನೀಡುವ ತೀರ್ಮಾನದ ಬಗ್ಗೆ ಮರುಪರಿಶೀಲಿಸಬೇಕುಎಂದು ಮನವಿ ಮಾಡಿದರು.

ಬಿಜೆಪಿಯ ಕೆ.ಜಿ.ಬೋಪಯ್ಯ, “ಇಂತಹ ಪ್ರಕರಣಗಳನ್ನು ಸಭಾಧ್ಯಕ್ಷರ ಕಚೇರಿಯಲ್ಲೇ ಇತ್ಯರ್ಥಪಡಿಸಿದ ಸಾಕಷ್ಟು ಉದಾಹರಣೆಗಳಿವೆ. ಪ್ರಕರಣ ಸಂಬಂಧ ಯಾರು ಲಿಖೀತ ದೂರು ನೀಡುತ್ತಾರೋ ಅವರ ಅಧೀನದಲ್ಲಿನ ಸಂಸ್ಥೆಯೇ ತನಿಖೆ ನಡೆಸುವುದು ನೈಸರ್ಗಿಕ ನ್ಯಾಯಕ್ಕೆ ಧಕ್ಕೆಯಾಗುವುದಿಲ್ಲವೇ? ನಮ್ಮ ಶಾಸಕರನ್ನು ಪೊಲೀಸ್‌ ತನಿಖೆಗೆ ಕೊಡುವುದು ಬೇಡ’ ಎಂದರು.

Advertisement

ಬಿಜೆಪಿಯ ಎಸ್‌.ಸುರೇಶ್‌ ಕುಮಾರ್‌, ಈ ರೀತಿಯ ಪ್ರಕರಣಗಳ ತನಿಖೆಗೆಂದೇ ಹಕ್ಕುಬಾಧ್ಯತಾ ಸಮಿತಿ ಇದೆ. ಆ ಸಮಿತಿಯಿಂದ 15 ದಿನದಲ್ಲೇ ವರದಿ ಪಡೆಯಲಿ. ಅಗತ್ಯಬಿದ್ದರೆ ತಜ್ಞರನ್ನು ಆಹ್ವಾನಿಸಿ ಅಭಿಪ್ರಾಯ ಪಡೆಯಲು ಅವಕಾಶವಿದೆ. ಎಸ್‌ಐಟಿ ತನಿಖೆಗೆ ವಹಿಸುವುದು ಒಳ್ಳೆಯ ಸಂಪ್ರದಾಯವಲ್ಲ. ಹಾಗಾಗಿ ಪುನರ್‌ ಪರಿಶೀಲಿಸಿ ಎಂದು ಮನವಿಮಾಡಿದರು.

ಸಚಿವ ಆರ್‌.ವಿ.ದೇಶಪಾಂಡೆ ಮಾತನಾಡಿ, “ಸಭಾಧ್ಯಕ್ಷರ ಸಲಹೆಯಂತೆ ಮುಖ್ಯಮಂತ್ರಿಗಳು ತನಿಖೆಗೆ ವಹಿಸಿದ್ದಾರೆ. ಹೀಗಿರುವಾಗ ಸಂದೇಹದ ಪ್ರಶ್ನೆ ಉದ್ಭವಿಸಿರುವುದು ಹೇಗೆ?. ಎಲ್ಲ ಪೊಲೀಸ್‌ಅಧಿಕಾರಿಗಳು ಸರ್ಕಾರದ ಕೈಗೊಂಬೆಗಳಲ್ಲ. ತಪ್ಪು ಮಾಡದಿದ್ದರೆ ಭಯವೇಕೆ’ ಎಂದು ಪ್ರಶ್ನಿಸಿದರು.

ನಾನೇ ಹೋಗಿ ಬಾ ಎಂದಿದ್ದೆ..
“ಆಡಿಯೋದಲ್ಲಿ ಸಭಾಧ್ಯಕ್ಷರ ಹೆಸರು ಪ್ರಸ್ತಾಪವಾಗಿದ್ದು, ನನ್ನ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಶಾಸಕರ ಪುತ್ರನಿಗೆ 25 ಬಾರಿ ಕರೆ ಮಾಡಿದ್ದು ಯಾರು? ಅವರು ಫೋನ್‌ ಮಾಡುವಂತೆ ನಾನು ಹೇಳಿದ್ದೆನಾ? ಆ ಸಂದರ್ಭದಲ್ಲಿ ಶಾಸಕರ ಪುತ್ರ ನನಗೆ ಕರೆ ಮಾಡಿ ಮಾಹಿತಿ ನೀಡಿದರು. ನಾನು ಹೋಗಿ ಬಾ ಎಂದಿದ್ದೆ. ಆ ದಿನ ಮಧ್ಯರಾತ್ರಿ 12 ಗಂಟೆಗೆ ಐಬಿಯಲ್ಲಿ ಚರ್ಚಿಸುವ ಅಗತ್ಯವೇನಿತ್ತು’ ಎಂದು ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದರು. ಎಸ್‌.ಆರ್‌.ಬೊಮ್ಮಾಯಿ ಅವರನ್ನು ಅಧಿಕಾರ ದಿಂದ ತೆಗೆದಾಗ ರಾಜಭವನದಲ್ಲಿ ಆದ ನಿರ್ಣಯವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದರು. ಆ ಬಳಿಕ ಶಾಸಕರ ಬೆಂಬಲವನ್ನು ಸದನದಲ್ಲೇ ಸಾಬೀತುಪಡಿಸಬೇಕೆಂಬ ವ್ಯವಸ್ಥೆ ಜಾರಿಗೆ ಬರಲು ಕರ್ನಾಟಕದ ಆ ಪ್ರಕರಣ ನಾಂದಿ ಹಾಡಿದ್ದು ಈಗ ಇತಿಹಾಸ ಎಂದು ಸ್ಮರಿಸಿದರು.

ಮೈತ್ರಿ ಸರ್ಕಾರ ರಚನೆಯಾದಂದಿನಿಂದ ದೀಪಾವಳಿ, ಸಂಕ್ರಾಂತಿ, ಯುಗಾದಿಗೆ ಸರ್ಕಾರ ಪತನವಾಗಲಿದೆ ಎಂದು ಗಡುವು ನೀಡಿದ್ದು ನಾನೆ? ಶಾಸಕರು ಖರೀದಿ ವಸ್ತು ಎಂಬ ಸ್ಥಿತಿ ತಂದವರು ಯಾರು? ನೀವು (ಬಿಜೆಪಿ) ಹೇಳಿದ ಕಾಲಾವಧಿಯಿಂದಲೇ ತನಿಖೆ ಮಾಡೋಣ. ನನ್ನ ಮನೆಯಲ್ಲಿ ನನ್ನ ಪಕ್ಷದ ಕಾರ್ಯಕರ್ತರೊಂದಿಗೆ ನಡೆದ ಸಭೆಗೆ ಸಂಬಂಧಪಟ್ಟಂತೆ ಆಡಿಯೋವನ್ನು ತನಿಖೆ ನಡೆಸುವಂತೆ ಒತ್ತಾಯಿಸುತ್ತಿದ್ದಾರೆ. ತನಿಖೆ ನಡೆಯಲಿ. ಕೇಂದ್ರದಲ್ಲಿ ಅವರದೇ ಸರ್ಕಾರವಿದೆ. ಅದು 2014ರಲ್ಲಿ ನಡೆದ ಘಟನೆಯಾಗಿದ್ದು, ನಾನು ನನ್ನ ಪಕ್ಷದ ಕಾರ್ಯಕರ್ತರೊಂದಿಗೆ ನನ್ನ ಮನೆಯಲ್ಲಿ ಚರ್ಚಿಸಿದ್ದೇನೆ. ನೀವು ಯಾರೊಂದಿಗೆ ಚರ್ಚೆ ನಡೆಸಿದ್ದೀರಿ? ಆ ಘಟನೆಗೂ ಇತ್ತೀಚಿನ ಆಡಿಯೋಗೂ ಹೋಲಿಕೆ ಏಕೆ ಎಂದು ಪ್ರಶ್ನಿಸಿದರು.

ಎಸ್‌ಐಟಿಯಿಂದಲೇ ತನಿಖೆಯಾಗಲಿ

ಆಪರೇಷನ್‌ ಆಡಿಯೋ ಪ್ರಕರಣ ಸದನದ ಆಸ್ತಿಯಾಗಿರುವುದರಿಂದ ಈ ಬಗ್ಗೆ ಸಂಪೂರ್ಣ ಸತ್ಯ ಹೊರಬರಬೇಕಾದರೆ, ಎಸ್‌ಐಟಿಯಿಂದಲೇ ತನಿಖೆ ನಡೆಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಪ್ರಕರಣ ಕುರಿತು ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶರಣುಗೌಡ ಮುಖ್ಯಮಂತ್ರಿಗೆ ಟೇಪ್‌ ಕೊಟ್ಟಾಗ ಅದನ್ನು ಬಹಿರಂಗಗೊಳಿಸದಿರುವುದು ಅಪರಾಧ ಆಗುತ್ತದೆ. ಆ ಕಾರಣಕ್ಕಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಹಿರಂಗಗೊಳಿಸಿದ್ದಾರೆ. ಅಲ್ಲದೇ ಈಗಾಗಲೇ ಸದನದಲ್ಲಿ ಚರ್ಚೆಯಾಗಿ ಸ್ಪೀಕರ್‌ ಸಲಹೆ ಮೇರೆಗೆ ಎಸ್‌ಐಟಿ ತನಿಖೆ ನಡೆಸಲು ಮುಖ್ಯಮಂತ್ರಿ ಆದೇಶ ನೀಡಿದ್ದಾರೆ. ಸದನ ಸಮಿತಿ ಅಥವಾ ನ್ಯಾಯಾಂಗ ತನಿಖೆಯಿಂದ ಅಪರಾಧಿಗಳಿಗೆ ಶಿಕ್ಷೆ ಕೊಡಲು ಸಾಧ್ಯವಿಲ್ಲ. ಅವರು ಕೇವಲ ವರದಿ ಮಾತ್ರ ನೀಡುತ್ತಾರೆ. ಎಸ್‌ಐಟಿ ತನಿಖೆಯಿಂದ ಚಾರ್ಜ್‌ಶೀಟ್‌ ಸಲ್ಲಿಸಲು ಅವಕಾಶವಿದೆ. ಆದ್ದರಿಂದ ಎಸ್‌ ಐಟಿಯಿಂದಲೇ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಬಿಜೆಪಿಯ ಜೆ.ಸಿ.ಮಾಧುಸ್ವಾಮಿ ಇದಕ್ಕೆ ವಿರೋಧ ವ್ಯಕ್ತಪಡಿಸಿ, ಸದನದಲ್ಲಿ ಚರ್ಚಿಸುವ ಬದಲು ಯಾವುದಾದರೂ ಪೊಲೀಸ್‌ ಠಾಣೆಗೆ ದೂರು ನೀಡಿದ ನಂತರ ಆ ಪ್ರಕರಣದ ತನಿಖೆ ನಡೆಸಿ ಚಾರ್ಜ್‌ ಶೀಟ್‌ ಸಲ್ಲಿಸಿದ ನಂತರ ಕೋರ್ಟ್‌ಗೆ ಅದನ್ನ ಎಸ್‌ಐಟಿ ತನಿಖೆಗೆ ಸೂಚಿಸಬಹದು ಎಂದು ಹೇಳಿದರು. ಅವರ ವಾದಕ್ಕೆ ಸಿದ್ದರಾಮಯ್ಯ ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next