ವಿಜಯಪುರ: ಮನೆಯೊಂದು ಮೂರು ಬಾಗಿಲಾಗಿರುವ ಹಾಗೂ ರಾಜಕೀಯ ಭವಿಷ್ಯವಿಲ್ಲದ ಬಿಜೆಪಿ ಬರುವ 20 ವರ್ಷಗಳ ಕಾಲ ವಿಪಕ್ಷದಲ್ಲೇ ಇರಲಿದೆ. ಜ.26ರ ಬಳಿಕ ಯಾರ್ಯಾರು ಯಾವ್ಯಾವ ಪಕ್ಷಕ್ಕೆ ಬರುತ್ತಾರೆಂದು ಕಾದು ನೋಡಿ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟವಾಗುತ್ತದೆ ಎನ್ನುವ ವಿಜಯೇಂದ್ರ ಬಿಜೆಪಿ ತತ್ವ, ಸಿದ್ಧಾಂತ ಗಾಳಿಗೆ ತೂರಿ ಬ್ಲಾಕ್‌ವೆುàಲ್ ಮಾಡಿ ಅಧ್ಯಕ್ಷರಾಗಿದ್ದಾರೆ. ಇದು ಅವರದೇ ಪಕ್ಷದ ಹಿರಿಯ ಶಾಸಕ ಯತ್ನಾಳ ಮಾಡಿರುವ ಆರೋಪ. ಬಿಜೆಪಿಯಲ್ಲಿ ನನಗೆ ಅನ್ಯಾಯ ಆಗಿದ್ದರಿಂದ ಕಾಂಗ್ರೆಸ್ ಸೇರಿದ್ದೇನೆ. ಕಳೆದ ಚುನಾವಣೆ ವೇಳೆ ಶಾಸಕ ಜನಾರ್ದನ ರೆಡ್ಡಿ ಅವರನ್ನು ಬಿಜೆಪಿಯಿಂದ ಹೊರ ಹಾಕಿದವರೇ ಈಗ ರೆಡ್ಡಿ ಅವರನ್ನು ಕರೆತರಲು ಮುಂದಾಗಿದ್ದಾರೆ ಎಂದರು.
ರಾಮಕೃಷ್ಣ ಹೆಗಡೆ ಅವರ ಅಪ್ಪಟ ಬೆಂಬಲಿಗರಾಗಿದ್ದ ನಾವು, ಅವರು ಇರುವವರೆಗೆ ಜತೆಯಲ್ಲಿದ್ದೆವು. ತಮ್ಮ ಅನಾರೋಗ್ಯದ ಪರಿಸ್ಥಿತಿ ಸಂದರ್ಭದಲ್ಲಿ ಲಾಲಕೃಷ್ಣ ಅಡ್ವಾಣಿ ಅವರನ್ನು ಸಂಪರ್ಕಿಸಿ ಹೆಗಡೆ ಅವರು ನಮ್ಮನ್ನು ಬಿಜೆಪಿ ಸೇರ್ಪಡೆ ಮಾಡಿಸಿದ್ದರು. ಆಗ ಬಿಜೆಪಿಯಲ್ಲಿ ಅನಂತಕುಮಾರ ಅವರಂಥ ನಾಯಕರಿದ್ದರು. ಈಗ ಬಿಜೆಪಿ ಪಕ್ಷದಲ್ಲಿ ಅಂಥ ನಾಯಕರಿಲ್ಲ. ಕುಟುಂಬ ರಾಜಕೀಯದಿಂದ ತತ್ತರಿಸಿರುವ ಬಿಜೆಪಿ, ಆಂತರಿಕ ಸಂಘರ್ಷದಿಂದಲೂ ತತ್ತರಿಸಿದೆ ಎಂದರು.
ಇಂಥ ಸ್ಥಿತಿಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ 136 ಶಾಸಕ ಬಲದೊಂದಿಗೆ ಸಿದ್ದರಾಮಯ್ಯ ಸರ್ಕಾರ ಸುಭದ್ರವಾಗಿದೆ. ಎಲ್ಲ ಸಚಿವ-ಶಾಸಕರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ. ಹೀಗಾಗಿ ಯಾವ ಪಕ್ಷದಿಂದ ಯಾರು ಪಕ್ಷ ತೊರೆಯಲಿದ್ದಾರೆ ಎಂದು ಕಾದುನೋಡಿ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಜನರು ಸಂತೃಪ್ತರಾಗಿದ್ದಾರೆ. ಜನರು ನೆಮ್ಮದಿಯಿಂದ ಇರುವುದನ್ನು ಸಹಿಸಲಾಗದ ಬಿಜೆಪಿ ನಾಯಕರು ಟೀಕೆ ಮಾಡುತ್ತಿದ್ದಾರೆ ಎಂದರು.
ಬಿಜೆಪಿ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದು, ಕಾಂಗ್ರೆಸ್ ತಟ್ಟೆಯಲ್ಲಿ ಬಿದ್ದಿರುವ ನೊಣದ ಬಗ್ಗೆ ಏಕೆ ಮಾತನಾಡುತ್ತಾರೆ. ಬಿಜೆಪಿ ಶಾಸಕಾಂಗ ಸಭೆಯಲ್ಲಿ ಏನಾಗಿದೆ ಎಂಬುದನ್ನು ವಿಜಯೇಂದ್ರ ನೆನಪು ಮಾಡಿಕೊಳ್ಳಲಿ. ಹೀಗಾಗಿ ನಮ್ಮ ಪಕ್ಷದ ಬಗ್ಗೆ ಅವರು ಮಾತನಾಡುವ ಅಗತ್ಯವಿಲ್ಲ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಅವರನ್ನು ಚುನಾವಣೆ ಸಂದರ್ಭದಲ್ಲಿ ಜೋಡೆತ್ತಾಗಿದ್ದು, ಈ ಕಿತ್ತಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಅವರಿಬ್ಬರ ಜಗಳ ಬಗೆಹರಿಸಲು ಹೋಗಿದ್ದರಾ, ವಿಪಕ್ಷದಲ್ಲಿದ್ದೇವೆ ಎಂದು ಪ್ರಚಾರಕ್ಕಾಗಿ ಏನೇನೋ ಹೇಳಿಕೆ ನೀಡುವುದು ಸರಿಯಲ್ಲ ಎಂದರು.