ಬಾಗಲಕೋಟೆ: ದೇಶದಲ್ಲಿ ಬಿಜೆಪಿ ಅಸ್ತಿತ್ವ ಉಳಿಸಿದವರು ವಾಜಪೇಯಿ ಮತ್ತು ಅಡ್ವಾನಿಯವರು. ಆಗ ಭಾರತೀಯ ಜನತಾ ಪಕ್ಷವಾಗಿದ್ದ ಬಿಜೆಪಿ, ಇಂದು ಮೋದಿ-ಶಾ ಪಕ್ಷವಾಗಿದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಂತೆ, ಮೋದಿ ನೋಡಿ ಮತ ಹಾಕಿ ಎಂದು ಹೇಳುತ್ತಿದ್ದಾರೆ. ಹೀಗಾಗಿ ಬಾಗಲಕೋಟೆಯೂ ಸೇರಿದಂತೆ ಎಲ್ಲೆಡೆ ಬಿಜೆಪಿಗೆ ಬಹುಮತದ ಸೋಲು ಖಚಿತ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿಯವರು ಸೋಲಿನ ಭೀತಿಯಿಂದ ಭಾವನಾತ್ಮಕವಾಗಿ ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ದೇಶದ ಗಡಿ ಕಾಯುವ ಸೈನಿಕರ ಹೆಸರಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಇಂತಹ ಸುಳ್ಳುಗಳಿಗೆ ಜಿಲ್ಲೆಯ ಜನರು ಕಿವಿಗೊಡಲ್ಲ ಎಂದರು.
ಬಾಗಲಕೋಟೆ ಹರಿಯುವ ನೀರಾಗಲಿ: ಜಿಲ್ಲೆಯ ಜನರು 15 ವರ್ಷಗಳ ಕಾಲ ಗದ್ದಿಗೌಡರನ್ನು ಆಯ್ಕೆ ಮಾಡಿದ್ದಾರೆ. ಮೋದಿಯಿಂದಾಗಲಿ, ಗದ್ದಿಗೌಡರಿಂದಾಗಲಿ ಜಿಲ್ಲೆಗೆ ಅನುಕೂಲವಾಗಿಲ್ಲ. ಹೀಗಾಗಿ ಜನರು ಬದಲಾವಣೆ ಬಯಸುತ್ತಿದ್ದಾರೆ. ಬಾಗಲಕೋಟೆ ಜನರು, ಹರಿಯುವ ನೀರಿನಂತವರು. ನಿಲ್ಲುವ ನೀರಲ್ಲ. ಈ ಬಾರಿ, ಹರಿಯುವ ನೀರಾಗಲಿದೆ ಎಂದರು.
ಮಾತಿನಲ್ಲಿ ಮನೆ ಕಟ್ಟುವ ಮೋದಿ: ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರನ್ನು ಗೆಲ್ಲಿಸಿದಂತಹ ಕ್ಷೇತ್ರವಿದು. ಇಲ್ಲಿನ ಮತದಾರರು ಪ್ರಭುದ್ಧರಿದ್ದಾರೆ. ಸುಳ್ಳು ಭರವಸೆಗೆ ಒಂದು ಬಾರಿ ಮತ ಕೊಟ್ಟಿದ್ದಾರೆ. ಮತ್ತೆ ಅದೇ ಸುಳ್ಳು ಹೇಳುವವರಿಗೆ ಮತ ಕೊಡುವುದಿಲ್ಲ. ಮೋದಿ ಕೇವಲ ಮಾತಿನಲ್ಲೇ ಮನೆ ಕಟ್ಟುವ ಪ್ರಧಾನಿ. ಹೀಗಾಗಿ ಜನ ಒಂದು ಬಾರಿ ನಂಬಿ ಮೋಸ ಹೋಗಿದ್ದಾರೆ. ಮತ್ತದೇ ತಪ್ಪು ಮಾಡಲ್ಲ ಎಂಬ ವಿಶ್ವಾಸವಿದೆ. ಆದ್ದರಿಂದ ವಿಜಯಪುರ ಕ್ಷೇತ್ರದಲ್ಲಿ ಡಾ| ಸುನೀತಾ ಚವ್ಹಾಣ, ಬಾಗಲಕೋಟೆಯಲ್ಲಿ ವೀಣಾ
ಕಾಶಪ್ಪನವರ ಆಯ್ಕೆಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗದ್ದಿಗೌಡರ ಒಂದು ಸಭೆಗೂ ಭಾಗವಹಿಸಿಲ್ಲ: ಆಲಮಟ್ಟಿ ಜಲಾಶಯದಿಂದ ಮುಳುಗಡೆಯಾದ ನಗರದ ಜನರಿಗೆ ಪುನರ್‌ವಸತಿ, ಪುನರ್ ನಿರ್ಮಾಣ, ಸೌಲಭ್ಯ ಕಲ್ಪಿಸುವ ಮಹತ್ವದ ಬಿಟಿಡಿಎ ಸಭೆಗೆ ಒಂದು ಬಾರಿಯೂ ಗದ್ದಿಗೌಡರ ಭಾಗವಹಿಸಿಲ್ಲ. ಸಂತ್ರಸ್ತರ ಬಗ್ಗೆ ಧ್ವನಿ ಎತ್ತಿಲ್ಲ. ಹೀಗಾಗಿ ಜಿಲ್ಲೆಯ ಜನರು ಪಕ್ಷಾತೀತವಾಗಿ ಗದ್ದಿಗೌಡರ ವಿರುದ್ಧ ಮಾತನಾಡುತ್ತಿದ್ದಾರೆ. ಬಿಜೆಪಿಯ ಹಲವು ಕಾರ್ಯಕರ್ತರು, ಗದ್ದಿಗೌಡರು ಏನೂ ಮಾಡಿಲ್ಲ. ನಾವು ಕಾಂಗ್ರೆಸ್‌ಗೆ ಮತ ಹಾಕುತ್ತೇವೆ ಎನ್ನುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಸೌದಾಗರ, ಓಬಿಸಿ ಜಿಲ್ಲಾ ಘಟಕದ ಅಧ್ಯಕ್ಷ ಡಾ| ದೇವರಾಜ ಪಾಟೀಲ, ವಕ್ತಾರ ಆನಂದ ಜಿಗಜಿನ್ನಿ, ಮುಖಂಡರಾದ ಡಾ| ಎಂ.ಎಸ್. ದಡ್ಡೇನವರ, ಜಿ.ಎಂ. ಸಿಂಧೂರ ಇದ್ದರು.
ಕಾಂಗ್ರೆಸ್‌ನಲ್ಲಿ ಯಾವುದೇ ರೀತಿಯ ಆಂತರಿಕ ಭಿನ್ನಾಭಿಪ್ರಾಯವಿಲ್ಲ. ಮುಧೋಳದಲ್ಲಿ ಸಚಿವ ತಿಮ್ಮಾಪುರ-ಸತೀಶ ಬಂಡಿವಡ್ಡರ ಕೂಡಿ ಪ್ರಚಾರ ನಡೆಸಿದ್ದಾರೆ. ಬಾಗಲಕೋಟೆಯಲ್ಲಿ ಅಜಯಕುಮಾರ ಸರನಾಯಕರು ನಿತ್ಯ ಕ್ಷೇತ್ರದಲ್ಲಿ ಮತಯಾಚಿಸುತ್ತಿದ್ದಾರೆ. ಎಸ್. ಆರ್. ಪಾಟೀಲರು, ಇಡೀ ಕ್ಷೇತ್ರದಲ್ಲಿ ಸಂಚರಿಸಿ, ಕಾಂಗ್ರೆಸ್ ಗೆಲುವಿಗಾಗಿ ಕೆಲಸ ಮಾಡುತ್ತಿದ್ದಾರೆ. ಹೀಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸುತ್ತಿದ್ದು, ಕ್ಷೇತ್ರದ ಅಭಿವೃದ್ಧಿಗಾಗಿ ಕ್ರಿಯಾಶೀಲ ಅಭ್ಯರ್ಥಿ ವೀಣಾ ಕಾಶಪ್ಪನವರ ಗೆಲುವಿಗೆ ಶ್ರಮ ಹಾಕುತ್ತಿದ್ದಾರೆ.
ಶಿವಾನಂದ ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ