Advertisement

ಕಮಲ ನಯನ ಕರ್ನಾಟಕದತ್ತ

06:00 AM Dec 19, 2017 | Team Udayavani |

ಬೆಂಗಳೂರು/ನವದೆಹಲಿ: ಇನ್ನೇನಿದ್ದರೂ ನಮ್ಮ ಗುರಿ ಕರ್ನಾಟಕ! ಗುಜರಾತ್‌ ಮತ್ತು ಹಿಮಾಚಲ ಪ್ರದೇಶದಲ್ಲಿ ಗೆಲ್ಲುತ್ತಿದ್ದಂತೆ ಸಂಭ್ರಮಾಚರಣೆ ವೇಳೆ ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರೇ ಘೋಷಣೆ ಮಾಡಿದ್ದಾರೆ. ದೆಹಲಿಯ ಕೇಂದ್ರ ಕಚೇರಿಯಲ್ಲಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಇನ್ನು ವಿರಮಿಸುವ ಮಾತೇ ಇಲ್ಲ. ನಮ್ಮ ಮುಂದಿನ ಟಾರ್ಗೆಟ್‌ ಕರ್ನಾಟಕ. ಅಲ್ಲಿಯೂ ಇದೇ ರೀತಿ ಗೆಲುವನ್ನು ಕಾಣೋಣ ಎಂದು ಹೇಳಿದ್ದಾರೆ.

Advertisement

ಇನ್ನು ಕರ್ನಾಟಕ ಬಿಜೆಪಿ ಉಸ್ತುವಾರಿ ಮುರಳಿಧರ ರಾವ್‌ ಅವರೂ ಈ ಎರಡು ರಾಜ್ಯಗಳ ಫ‌ಲಿತಾಂಶವೇ ರಾಜ್ಯದಲ್ಲೂ ಪ್ರತಿಫ‌ಲನವಾಗಲಿದೆ ಎಂದಿದ್ದಾರೆ. ಕರ್ನಾಟಕಲ್ಲೂ ಮೋದಿ ಅಲೆ ಇದ್ದು, ಅವರ ಹೆಸರಲ್ಲೇ ಗೆಲ್ಲುತ್ತೇವೆ. ಅಲ್ಲದೆ 2019ರಲ್ಲೂ ಗೆದ್ದೇ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.

ಈ ನಡುವೆ ಗುಜರಾತ್‌ ಮತ್ತು ಹಿಮಾಚಲ ಪ್ರದೇಶಗಳಲ್ಲಿನ ಗೆಲುವು ರಾಜ್ಯದ ಬಿಜೆಪಿ,ಕಾಂಗ್ರೆಸ್‌, ಜೆಡಿಎಸ್‌ ಪಾಳೆಯದಲ್ಲಿ ಬಿರುಸಿನ ಚಟುವಟಿಕೆ ಶುರುವಾಗಿವೆ.

ಈ ಎರಡರಲ್ಲೂ ಗೆದ್ದ ರೀತಿಯಲ್ಲೇ ತಾವೂ ಗೆಲ್ಲಬಹುದು ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರ.ಆಡಳಿತ ವಿರೋಧಿ ಅಲೆ ಮೆಟ್ಟಿ ನಿಂತು ಗೆದ್ದು ತೋರಬಹುದು, ಗುಜರಾತ್‌ನಲ್ಲಿ ಗಳಿಸಿದ ಹೆಚ್ಚಿನ ಸ್ಥಾನದಿಂದಾಗಿ ರಾಹುಲ್‌ ನಾಯಕತ್ವಕ್ಕೆ ಹೊಸ ಮೆರಗು ಬಂದಿದ್ದು ಇಲ್ಲೂ ಅದೇ ಪುನಾವರ್ತಿಯಾಗಬಹುದು ಎಂಬುದು ಕಾಂಗ್ರೆಸ್‌ನಲ್ಲಿನ ಚರ್ಚೆ. ಆದರೆ ಈ ಎರಡೂ ಪಕ್ಷಗಳ ಉತ್ತಮ ಪ್ರದರ್ಶನ ಎಲ್ಲಿ ತಮ್ಮ ಮತಬುಟ್ಟಿಗೆ ಕೈಹಾಕುವುದೋ ಎಂಬ ಆತಂಕ ಜೆಡಿಎಸ್‌ನಲ್ಲಿ ಇದೆ.

ಆದರೆ, ಬಿಜೆಪಿ ನಾಯಕರ ಆಡಳಿತ ವಿರೋಧಿ ಅಲೆಯಿಂದಾಗಿ ಕಾಂಗ್ರೆಸ್‌ ಸೋಲುತ್ತದೆ ಎಂಬ ಮಾತನ್ನು ಸಿಎಂ ಸಿದ್ದರಾಮಯ್ಯ ಒಪ್ಪಿಲ್ಲ. ರಾಜ್ಯದಲ್ಲಿ ಮೋದಿ ಅಲೆಯೂ ಇಲ್ಲ, ಗುಜರಾತ್‌ ಮತ್ತು ಹಿಮಾಚಲ ಪ್ರದೇಶದ ವಾತಾವರಣವೂ ಇಲ್ಲ. ಹೀಗಾಗಿ ಕಾಂಗ್ರೆಸ್ಸೇ ಗೆಲ್ಲೋದು ಎಂದಿದ್ದಾರೆ. ಈ ಮಧ್ಯೆ ಫ‌ಲಿತಾಂಶದಿಂದ ಖುಷಿಯಾಗಿರುವ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ, ರಾಜ್ಯದಲ್ಲೂ ಇಂಥದ್ದೇ ಫ‌ಲಿತಾಂಶ ಬರುತ್ತದೆ. ಆಡಳಿತ ವಿರೋಧಿ ಅಲೆಯಲ್ಲಿ ಸಿದ್ದರಾಮಯ್ಯ ಸರ್ಕಾರ ಕೊಚ್ಚಿಕೊಂಡು ಹೋಗಲಿದೆ ಎಂದಿದ್ದಾರೆ. 
ಸದ್ಯದಲ್ಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ಶಾ ಅವರು ರಾಜ್ಯಕ್ಕೆ ಬರಲಿದ್ದು, ರಾಜ್ಯ ಬಿಜೆಪಿ ನಾಯಕರಲ್ಲಿ ಹೊಸ ಹುರುಪೂ ಬಂದಿದೆ. ಈ ಬೆಳವಣಿಗೆಗಳ ಮಧ್ಯೆ, ಈ ಫ‌ಲಿತಾಂಶ ಜೆಡಿಎಸ್‌ ಪಾಲಿಗೆ ಸ್ವಲ್ಪಮಟ್ಟಿನ ನಿರಾಸೆ ತಂದೊಡ್ಡಿದ್ದು, ತಮ್ಮ ಬುಟ್ಟಿಗೆ ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ಕೈ ಹಾಕಬಹುದು ಎಂಬ ಆತಂಕಕ್ಕೆ ಒಳಗಾಗಿದೆ. ಅದರಲ್ಲೂ ಗುಜರಾತ್‌ ಫ‌ಲಿತಾಂಶದ ನಂತರ ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಅಭ್ಯರ್ಥಿಗಳನ್ನು ಜೆಡಿಎಸ್‌ ಕಡೆಗೆ ಸೆಳೆಯುವುದಕ್ಕಿಂತ ಜೆಡಿಎಸ್‌ನಿಂದ ಎರಡೂ ಪಕ್ಷಗಳತ್ತ ಹೋಗುವವರನ್ನು ತಡೆಯುವುದೇ ದೊಡ್ಡ ಸವಾಲಾಗಲಿದೆ. ಈಗಾಗಲೇ ಜೆಡಿಎಸ್‌ನ 40 ಶಾಸಕರ ಪೈಕಿ ಏಳು ಮಂದಿ ಕಾಂಗ್ರೆಸ್‌ ಬಾಗಿಲಲ್ಲಿ ನಿಂತಿದ್ದು, ಇನ್ನೂ ಐವರನ್ನು ಸೆಳೆಯಲು ಕಾಂಗ್ರೆಸ್‌ ಮತ್ತು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಮಾತುಗಳಿವೆ.

Advertisement

ಗುಜರಾತಿನಲ್ಲಿ ಜಾತಿ ರಾಜಕಾರಣದ ಮೇಲೆ ಅಧಿಕಾರದ ಸೌಧ ನಿರ್ಮಿಸಲು ಹೊರಟ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಿದ್ದಾರೆ. ರಾಹುಲ್ ಮೇಲಿನ ನಿರೀಕ್ಷೆಯೂ ಹುಸಿಯಾಗಿದೆ.
–  ಬಿ.ಎಸ್‌.ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ

ಗುಜರಾತ್‌ನಲ್ಲಿ ಗೆದ್ದು ಸೋತಿದ್ದೇವೆ. ಈ ಚುನಾವಣೆಯಲ್ಲಿ ಪಕ್ಷ ಹೆಚ್ಚು ಸ್ಥಾನ ಪಡೆದು ಕೊಂಡಿದೆ. ರಾಹುಲ್‌ ಗಾಂಧಿ ನಾಯಕತ್ವಕ್ಕೆ ಅಲ್ಲಿನ ಜನರು ಬೆಂಬಲ ವ್ಯಕ್ತಪಡಿಸಿದ್ದಾರೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next