ಮುಂಬೈ: ಮಹಾರಾಷ್ಟ್ರದ ರಾಜಕೀಯದಲ್ಲಿ ಯಾರೂ ಊಹಿಸದೇ ಇರುವ ರೀತಿಯಲ್ಲಿ ಬೆಳವಣಿಗೆಗಳು ನಡೆದಿವೆ. ಬೆಳಿಗ್ಗೆ ಬೆಳಿಗ್ಗೆ ಭಿನ್ನ ರಾಜಕೀಯ ಸಿದ್ದಾಂತ ಹೊಂದಿರುವ ಎನ್ ಸಿಪಿ ಮತ್ತು ಬಿಜೆಪಿ ಒಂದಾಗಿ ಸರಕಾರ ರಚಿಸಿವೆ. ದೇವೆಂದ್ರ ಫಡ್ನವೀಸ್ ಮುಖ್ಯಮಂತ್ರಿಯಾದರೆ, ಎನ್ ಸಿಪಿ ಮುಖಂಡ, ಶರದ್ ಪವಾರ್ ಸಂಬಂಧಿ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿಯಾಗಿದೆ.
ಆದರೆ ಎನ್ ಸಿಪಿ ಮುಖಂಡ ಶರದ್ ಪವಾರ್ ಅವರು ಈ ಮೈತ್ರಿಗೆ ಒಪ್ಪಿಗೆ ಸೂಚಿಸಿಲ್ಲ ಎಂಬ ಮಾತುಗಳು ಈಗ ಕೇಳಿ ಬರುತ್ತಿವೆ. ಅಜಿತ್ ಪವಾರ್ ಅವರು ಪಕ್ಷದ 20ಕ್ಕೂ ಹೆಚ್ಚು ಶಾಸಕರ ಜೊತೆಗೆ ಬಿಜೆಪಿಗೆ ಬೆಂಬಲ ನೀಡಿದ್ದಾರೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಈಗ ಕೇಳುತ್ತಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಎನ್ ಸಿಪಿ ಮುಖಂಡ ಶರದ್ ಪವಾರ್ , ಮಹಾರಾಷ್ಟ್ರದಲ್ಲಿ ಸರಕಾರ ರಚಿಸಲು ಬಿಜೆಪಿಗೆ ಬೆಂಬಲ ನೀಡಿರುವುದು ಅಜಿತ್ ಪವಾರ್ ಅವರ ವೈಯಕ್ತಿಕ ನಿರ್ಧಾರ. ಇದು ಎನ್ ಸಿಪಿ ಪಕ್ಷದ ನಿರ್ಧಾರವಲ್ಲ. ಅಜಿತ್ ಅವರ ಈ ನಿರ್ಧಾರವನ್ನು ನಾವು ಬೆಂಬಲಿಸುವುದಿಲ್ಲ ಅಥವಾ ಅನುಮೋದಿಸುವುದಿಲ್ಲ ಎಂದಿದ್ದಾರೆ.
ಎನ್ ಸಿಪಿ ನಾಯಕರುಗಳಾದ ಪ್ರಫುಲ್ಲ್ ಪಟೇಲ್, ಛಗನ್ ಭುಜ್ಬಲ್, ನವಾಬ್ ಮಲಿಕ್, ಜಯಂತ್ ಪಾಟೀಲ್ ಗೆ ಕೂಡಾ ಈ ಮೈತ್ರಿಯ ಬಗ್ಗೆ ಏನೂ ತಿಳಿದಿಲ್ಲ ಎಂದಿದ್ದಾರೆ.
ಅಜಿತ್ ಪವಾರ್ ಮತ್ತು ಪಕ್ಷ ಕೆಲ ಶಾಸಕರು ಬಿಜೆಪಿ ಆಪರೇಶನ್ ಗೆ ಒಳಗಾಗಿದ್ದಾರೆಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ.