Advertisement

ಬಿಜೆಪಿ ವಿಜಯ “ಸಂಕಲ್ಪ’; ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾರಿಂದ ಚಾಲನೆ

12:07 AM Mar 01, 2023 | Team Udayavani |

ಬೆಂಗಳೂರು: ಆಡಳಿತಾರೂಢ ಬಿಜೆಪಿ ಚುನಾವಣಾ ಸಮರಕ್ಕೆ ಪೂರ್ಣ ಪ್ರಮಾಣದಲ್ಲಿ ಅಖಾಡಕ್ಕೆ ಇಳಿಯುವುದಕ್ಕೆ ವೇದಿಕೆ ಸಿದ್ದವಾಗಿದ್ದು, ರಾಜ್ಯದ ನಾಲ್ಕು ದಿಕ್ಕುಗಳಿಂದ ಸುಮಾರು 8000 ಕಿಮೀ ಸಂಚರಿಸುವ ಗುರಿ ಹೊಂದಿರುವ “ವಿಜಯ ಸಂಕಲ್ಪ ಯಾತ್ರೆ’ಗೆ ಬುಧವಾರ ಚಾಲನೆ ದೊರೆಯಲಿದೆ. ಈ ಮೂಲಕ ಚುನಾವಣೆಯಲ್ಲಿ ವಿಜಯ ದುಂದುಭಿ ಮೊಳಗಿಸುವುದಕ್ಕೆ ಕೇಸರಿ ಪಾಳಯ ಸಿದ್ಧತೆ ನಡೆಸಿದೆ.

Advertisement

ಜೆಡಿಎಸ್‌ನ ಪಂಚರತ್ನ ಯಾತ್ರೆ, ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆಯ ಬಳಿಕ ಈಗ ಮತ್ತೂಂದು ರಥಯಾತ್ರೆಗೆ ರಾಜ್ಯದ ಮತದಾರರು ಸಾಕ್ಷಿಯಾಗಬೇಕಿದೆ. ರಥಯಾತ್ರೆ ಬಿಜೆಪಿ ಪಾಲಿಗೆ ವಿಜಯದ ಸಂಕೇತ ಎಂಬ ವಾದವಿರುವ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ದಿಲ್ಲಿ ನಾಯಕರ ಮನವೊಲಿಸಿ ವಿಜಯ ಸಂಕಲ್ಪಯಾತ್ರೆ ಸಂಘಟಿಸಿದ್ದಾರೆ. ಹನೂರಿನ ಮಲೆ ಮಹದೇಶ್ವರ ಬೆಟ್ಟದಿಂದ ಆರಂಭಗೊಳ್ಳುವ ಈ ಯಾತ್ರೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಉದ್ಘಾಟಿಸಲಿದ್ದಾರೆ.ದಾವಣಗೆರೆಯಲ್ಲಿ ಮಾ.27ರಂದು ನಡೆಯುವ ಮಹಾ ಸಂಗಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳಲಿದ್ದಾರೆ. ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗುವರು.

ಎಲ್ಲೆಲ್ಲಿಂದ, ಯಾರ್ಯಾರು ? :
ಮಾ.1ರಂದು ಮಲೆ ಮಹದೇಶ್ವರ ಬೆಟ್ಟ, ಮಾ.2ರಿಂದ ನಂದಗಢದ ಸಂಗೊಳ್ಳಿ ರಾಯಣ್ಣ ಸ್ಮಾರಕ, ಮಾ.3ರಂದು ಬೆಳಿಗ್ಗೆ ಬಸವಕಲ್ಯಾಣದ ಅನುಭವ ಮಂಟಪ, ಹಾಗೂ ಅಂದು ಸಂಜೆ ಬೆಂಗಳೂರಿನಿಂದ ಹೊರಡುವ ಯಾತ್ರೆಗೂ ಚಾಲನೆ ಲಭಿಸುತ್ತದೆ. ಕಲ್ಯಾಣ ಕರ್ನಾಟಕ ಹಾಗೂ ರಾಜಧಾನಿ ಬೆಂಗಳೂರಿನ ಯಾತ್ರೆಯನ್ನು ಅಮಿತ್‌ ಶಾ ಉದ್ಘಾಟಿಸುವರು.

ಈ ರಥಯಾತ್ರೆಯಲ್ಲಿ ಗೃಹ ಸಚಿವ ಅಮಿತ್‌ ಶಾ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ, ಸ್ಮತಿ ಇರಾನಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೇರಿದಂತೆ ರಾಷ್ಟ್ರೀಯ ಮುಖಂಡರು ಭಾಗಿಯಾಗಲಿದ್ದಾರೆ. 80ಕ್ಕೂ ಹೆಚ್ಚು ರ್ಯಾಲಿ ಮತ್ತು 75 ಸಾರ್ವಜನಿಕ ಸಭೆಗಳು ನಡೆಯಲಿವೆ. 150ಕ್ಕೂ ಹೆಚ್ಚು ರೋಡ್‌ ಶೋಗಳನ್ನು ಆಯೋಜಿಸಲಾಗಿದ್ದು, ರಾಜ್ಯದ 4 ಕೋಟಿ ಜನರನ್ನು ಸಂಪರ್ಕಿಸುವ ಗುರಿ ಹೊಂದಲಾಗಿದೆ.

ಮಾ.4ರಿಂದ ಫ‌ಲಾನುಭವಿ ಸಮಾವೇಶ
ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮತದಾರರನ್ನು ತಲುಪುವುದಕ್ಕೆ ಎಲ್ಲ ಮಾರ್ಗಗಳನ್ನೂ ತೆರೆಯುತ್ತಿರುವ ರಾಜ್ಯ ಸರ್ಕಾರ ಈಗ ವಿವಿಧ ಇಲಾಖೆಗಳ ಸೌಲಭ್ಯ ಪಡೆದ ಫ‌ಲಾನುಭವಿಗಳ ಸಮಾವೇಶಕ್ಕೆ ಮುಂದಾಗಿದೆ. ಮಾ.4ರಿಂದ 20ರವರೆಗೆ ಜಿಲ್ಲಾವಾರು ಸಮಾವೇಶ ನಡೆಸುವುದಕ್ಕೆ ಸಿದ್ಧತೆ ನಡೆದಿದೆ. ಮಾ. 4ರಂದು ಚಿತ್ರದುರ್ಗ ಜಿಲ್ಲೆಯಲ್ಲಿ ಸಿಎಂ ಬೊಮ್ಮಾಯಿ ಅವರು ಸಮಾವೇಶ ಉದ್ಘಾಟನೆ ಮಾಡಲಿದ್ದಾರೆ.

Advertisement

ಸಮಾವೇಶದಲ್ಲಿ ಫ‌ಲಾನುಭವಿಗಳೊಂದಿಗೆ ಸಂವಾದ ನಡೆಸಲಾಗುತ್ತದೆ. ಯೋಜನೆಯಲ್ಲಿ ಯಾವುದಾದರೂ ಸಮಸ್ಯೆ ಇದ್ದಲ್ಲಿ ಜಿಲ್ಲಾಧಿಕಾರಿಗಳು, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಸ್ಥಳದಲ್ಲೇ ಪರಿಹಾರ ಕಲ್ಪಿಸುವ ಪ್ರಯತ್ನ ನಡೆಸಲಾಗುತ್ತದೆ. ಹಾವೇರಿಯಲ್ಲಿ ಸುಮಾರು 50 ಸಾವಿರ ಜನರ ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ ಭಾಗವಹಿಸುವರು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next