ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಶನಿವಾರ ರಾಜ್ಯಕ್ಕೆ ಆಗಮಿಸಲಿದ್ದು, ರಾಜ್ಯ ಬಿಜೆಪಿಯಲ್ಲಿ ಮತ್ತೆ ಸಂಪುಟ ಪುನಾರಚನೆಯ ಗುಸು ಗುಸು ಆರಂಭವಾಗಿದೆ.
ಬೆಂಗಳೂರಿನ ಯಲಹಂಕದಲ್ಲಿ ಹಮ್ಮಿಕೊಂಡಿರುವ ಬಿಜೆಪಿ ಒಬಿಸಿ ಕಾರ್ಯಕಾರಿಣಿ ಸಮಾರೋಪ ಸಮಾರಂಭ ಮತ್ತು ಚಿತ್ರದುರ್ಗದಲ್ಲಿ ನಡೆಯುವ ಗ್ರಾ.ಪಂ. ಸದಸ್ಯರ ಸಮಾವೇಶದಲ್ಲಿ ಪಾಲ್ಗೊಳ್ಳಲು ನಡ್ಡಾ ಆಗಮಿಸುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ರಾಜ್ಯ ಸಚಿವ ಸಂಪುಟ ಪುನಾರಚನೆಯ ಕುರಿತು ನಡ್ಡಾ ರಾಜ್ಯ ನಾಯಕರ ಜತೆ ಚರ್ಚೆ ಮಾಡುವ ಸಾಧ್ಯತೆ ಇದೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ.
ಬಿಬಿಎಂಪಿ, ತಾಲೂಕು, ಜಿ.ಪಂ. ಚುನಾವಣೆಗಳ ಹಿನ್ನೆಲೆಯಲ್ಲಿ ಕೆಳ ಹಂತದಲ್ಲಿಯೇ ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ಗ್ರಾ.ಪಂ. ಸದಸ್ಯರ ಸಮಾವೇಶ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಚುನಾವಣ ದೃಷ್ಟಿಯಿಂದ ಖಾಲಿ ಇರುವ ಐದು ಸಚಿವ ಸ್ಥಾನಗಳನ್ನು ಭರ್ತಿ ಮಾಡುವ ಕುರಿತು ರಾಜ್ಯ ನಾಯಕರೊಂದಿಗೆ ಚರ್ಚಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.