Advertisement

ಕಲಬುರಗಿಯಲ್ಲಿ ಇಂದಿನಿಂದ ಬಿಜೆಪಿ ರಾಜ್ಯ ಕಾರ್ಯಕಾರಿಣಿ

03:45 AM Jan 21, 2017 | |

ಬೆಂಗಳೂರು: ಬಿಸಿಲ ನಾಡು ಕಲಬುರಗಿಯಲ್ಲಿ ಇಂದಿನಿಂದ ಎರಡು ದಿನ ರಾಜ್ಯ ಬಿಜೆಪಿ ಕಾರ್ಯಕಾರಿಣಿ ನಡೆಯಲಿದ್ದು ಪ್ರಕ್ಷದ ನಾಯಕರ ನಡುವಿನ ಭಿನ್ನಮತ ಅನಧಿಕೃತವಾಗಿ ಪ್ರಸ್ತಾಪಗೊಳ್ಳುವ ನಿರೀಕ್ಷೆಯಿದೆ. ನಾಯಕರ ಭಿನ್ನಮತ ಶಮನ ಜತೆಗೆ ರಾಜ್ಯ ಸರ್ಕಾರದ ವಿರುದ್ಧ ಮುಂದಿನ ಹೋರಾಟದ ಕುರಿತಂತೆಯೂ ಕಾರ್ಯಕಾರಿಣಿಯಲ್ಲಿ ಚರ್ಚೆ ನಡೆಯಲಿದೆ.

Advertisement

ಈಗಾಗಲೇ ಪಕ್ಷದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮತ್ತು ಅನಂತಕುಮಾರ್‌ ನಡುವಿನ ಭಿನ್ನಮತ ಬಹಿರಂಗವಾಗಿ ಸ್ಫೋಟಗೊಂಡಿದ್ದು ಒಬ್ಬರ ಮುಖ ಒಬ್ಬರು ನೋಡಲಾರದ ಪರಿಸ್ಥಿತಿ ಉಂಟಾಗಿದೆ. ಶನಿವಾರದ ಕಾರ್ಯಕಾರಿಣಿಯಲ್ಲಿ ಯಡಿಯೂರಪ್ಪ ಮತ್ತು  ಈಶ್ವರಪ್ಪ ಬಣಗಳು ಮುಖಾಮುಖೀಯಾಗಿದ್ದು ಪಕ್ಷದ ಸಂಘಟನೆ ಸಂಬಂಧ ನಡೆಯುವ ಕಾರ್ಯಕಾರಿಣಿಯಲ್ಲಿ ಭಿನ್ನಮತ ಯಾವ ರೀತಿ ಚರ್ಚೆಗೆ ಬರಲಿದೆ ಎನ್ನುವುದು ಕುತೂಹಲ ಮೂಡಿಸಿದೆ.ಕಾರ್ಯಕಾರಿಣಿಯಲ್ಲಿ ಭಿನ್ನಮತ ಚರ್ಚೆಗೆ ಹೆಚ್ಚಿನ ಅವಕಾಶ ನೀಡದೆ ಅದನ್ನು  ಆರಂಭದಲ್ಲೇ ತಡೆಯಲು ರಾಜ್ಯ ಪ್ರಮುಖರು ತಂತ್ರಗಾರಿಕೆಯನ್ನು ಸಹ ರೂಪಿಸಿದ್ದಾರೆ.

ಭಿನ್ನಾಭಿಪ್ರಾಯ ಬಗೆಹರಿಸಲು ಕರೆದಿರುವ ಸಭೆಯಿಂದ ದೂರ ಉಳಿದಿದ್ದ ವಿಧಾನಪರಿಷತ್‌ ಪ್ರತಿಪಕ್ಷ ನಾಯಕ   ಈಶ್ವರಪ್ಪ ಸೇರಿದಂತೆ ಇತರೆ ಭಿನ್ನಮತೀಯರು ನಾಳಿನ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಿ ಚರ್ಚೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ.

ಯಡಿಯೂರಪ್ಪ ನವರ ವಿರುದ್ಧ ಅಸಮಾಧಾನಗೊಂಡು ಬಿಜೆಪಿಯನ್ನು ತೊರೆಯಲು ತುದಿಗಾಲಲ್ಲಿ ನಿಂತಿರುವ ಮಾಜಿ ಸಚಿವ ವಿ.ಸೋಮಣ್ಣ ಸಹ ನಾಳಿನ ಸಭೆಯಲ್ಲಿ ಭಾಗವಹಿಸಿ ಸಂದರ್ಭ ಬಂದರೆ ತಮ್ಮ ಅಸಮಾಧಾನವನ್ನು ಹೊರಹಾಕಲು ಚಿಂತಿಸಿದ್ದಾರೆ.

ಬೆಳಿಗ್ಗೆ 11 ಗಂಟೆಗೆ ಆರಂಭವಾಗುವ ಕಾರ್ಯಕಾರಿಣಿಯನ್ನು ಕೇಂದ್ರ ರಾಸಾಯನಿಕ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್‌ ಉದ್ಘಾಟನೆ ಮಾಡಲಿದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್‌ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಕಳೆದ ಆರು ತಿಂಗಳಲ್ಲಿ ಪಕ್ಷದಲ್ಲಿ ನಡೆದ ಚಟುವಟಿಕೆಗಳ ವರದಿ ಮಂಡನೆ ಮಾಡಲಾಗುತ್ತದೆ. 

Advertisement

ರಾಜ್ಯದಲ್ಲಿ ಭೀಕರ ಬರಗಾಲದ ಕುರಿತು ಪಕ್ಷ ರಚಿಸಿದ ತಂಡಗಳ ವರದಿಯನ್ನು ಕಾರ್ಯಕಾರಿಣಿಯಲ್ಲಿ ಮಂಡಿಸಲಾಗುತ್ತದೆ.
ಭಾನುವಾರದಂದು ಪಕ್ಷದ ಮುಂದಿನ ಹೋರಾಟ, ಬರ ಕಾಮಗಾರಿ ಕೈಗೊಳ್ಳುವಲ್ಲಿ ರಾಜ್ಯ ಸರ್ಕಾರದ ವೈಫ‌ಲ್ಯ, ಕಾನೂನು ಸುವ್ಯವಸ್ಥೆ ವೈಫ‌ಲ್ಯ ಸೇರಿದಂತೆ, ರಾಜ್ಯ ಸರ್ಕಾರದ ವಿರುದ್ಧ ಮುಂದಿನ ಹೋರಾಟದ ರೂಪು ರೇಷೆಗಳ ಕುರಿತು ಸುದೀರ್ಘ‌ ಚರ್ಚೆ ನಡೆಯಲಿದೆ. ಅಲ್ಲದೇ ಕೇಂದ್ರ ಸರ್ಕಾರದ ಅಪ ನಗದೀಕರಣವನ್ನು ಬೆಂಬಲಿ ನಿರ್ಣಯ ಕೈಗೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಘೋಷಣೆಯನ್ನು ಜನ ಸಾಮಾನ್ಯರಿಗೆ ತಲುಪಿಸುವ ಕುರಿತು ಕಾರ್ಯಕಾರಿಣಿಯಲ್ಲಿ ಚರ್ಚೆ ನಡೆಯಲಿದೆ. ಇನ್ನು ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ನೂತನ ಪಠ್ಯ ಪುಸ್ತಕ ಪರಿಕ್ಷರಣೆ ವಿರೋಧಿಸಿ ಮುಂದೆ ಕೈಗೊಳ್ಳಬೇಕಾದ ಹೋರಾಟದ ಕುರಿತು ಚರ್ಚಿಸುವ ಸಾಧ್ಯತೆ ಇದೆ.

ಎರಡು ದಿನಗಳ ಕಾರ್ಯಕಾರಣಿಯಲ್ಲಿ ಪ್ರಮುಖವಾಗಿ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ವಿಷಯಗಳ ಮೇಲೆ ಮೂರು ಪ್ರಮುಖ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ಕಾರ್ಯಕಾರಿಣಿಯಲ್ಲಿ 635 ಜನ ಪಾಲ್ಗೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next